ಹಿರಿಯಣ್ಣನನ್ನು ಕಳೆದುಕೊಂಡಿದ್ದೇನೆ: ಮಲ್ಲಿಕಾರ್ಜುನ ಖರ್ಗೆ

Update: 2017-07-27 12:04 GMT

ಹೊಸದಿಲ್ಲಿ, ಜು.27: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎನ್.ಧರಂಸಿಂಗ್ ನಿಧನಕ್ಕೆ ಅವರ ಒಡನಾಡಿ, ಆಪ್ತ ಗೆಳೆಯ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

50 ವರ್ಷಗಳ ತಮ್ಮ ಸುದೀರ್ಘ ಕಾಲದ ಗೆಳೆತನ, ಒಡನಾಟವನ್ನು ಸ್ಮರಿಸಿಕೊಂಡು ಮಲ್ಲಿಕಾರ್ಜುನ ಖರ್ಗೆ ಕಣ್ಣೀರಿಟ್ಟಿದ್ದಾರೆ. 7 ಬಾರಿ ಶಾಸಕ, ಎರಡು ಬಾರಿ ಸಂಸದರಾಗಿ ಧರಂಸಿಂಗ್ ಕಲಬುರ್ಗಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ರಾಜಕೀಯ ಜೀವನದಲ್ಲಿ ಅವರು ಅಜಾತಶತ್ರು ಎಂದೇ ಕರೆಯಲ್ಪಡುತ್ತಿದ್ದರು. ಧರಂಸಿಂಗ್ ನಿಧನದ ಸುದ್ದಿ ಕೇಳಿ ನನಗೆ ಭೂಕಂಪದ ಅನುಭವವಾಗಿದೆ. ಅವರ ಅಗಲಿಕೆಯ ನೋವನ್ನು ಹೇಗೆ ವ್ಯಕ್ತಪಡಿಸಲಿ ಎಂಬುದೇ ಅರ್ಥವಾಗುತ್ತಿಲ್ಲ ಎಂದು ನೊಂದು ನುಡಿದ ಅವರು, ಇತ್ತೀಚೆಗಷ್ಟೇ ನನ್ನ ಹುಟ್ಟುಹಬ್ಬಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ ಶುಭ ಹಾರೈಸಿದ್ದರು. ಅಲ್ಲದೆ, ವೈಯಕ್ತಿಕವಾಗಿ ನನ್ನನ್ನು ಭೇಟಿ ಮಾಡಲು ಬಯಸಿದ್ದರು.ಆದರೆ, ಆರೋಗ್ಯ ಸಮಸ್ಯೆಯಿರುವುದರಿಂದ ನೀವು ಬರುವುದು ಬೇಡ. ನಾನೇ ಬಂದು ಭೇಟಿಯಾಗುತ್ತೇನೆ ಎಂದು ಹೇಳಿದ್ದೆ. ಆದರೆ, ಕೆಲವೇ ದಿನಗಳಲ್ಲಿ ವಿಧಿ ಅವರನ್ನು ನಮ್ಮಿಂದ ದೂರ ಮಾಡಿದ್ದನ್ನು ನಂಬಲು ಆಗುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತರು.

ಗಣ್ಯರ ಸಂತಾಪ: ವಿಧಾನಸಭೆಯ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಸಚಿವರಾದ ಕಾಗೋಡು ತಿಮ್ಮಪ್ಪ, ಉಮಾಶ್ರೀ, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ.ಮಹದೇವಪ್ಪ, ಈಶ್ವರ್ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಅಂಬರೀಶ್, ಬಾಬುರಾವ್ ಚಿಂಚನಸೂರ್, ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಇನ್ನಿತರ ಗಣ್ಯರು ಧರಂಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಧರಂಸಿಂಗ್ ನೆನಪು ಶಾಶ್ವತ
ಜನಪರವಾದ ಕಾಳಜಿ ಹಾಗೂ ಕಠಿಣ ಶ್ರಮದ ಗುಣವು ಧರಂಸಿಂಗ್ ನೆನಪನ್ನು ರಾಜ್ಯದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುವಂತೆ ಮಾಡಿದೆ. ಐದು ದಶಕಗಳ ಕಾಲ ಅವರು ಸಲ್ಲಿಸಿದ ಸೇವೆ ಹಾಗೂ ಬದ್ಧತೆಯು ಸದಾಕಾಲ ನೆನಪಿನಲ್ಲುಳಿಯುತ್ತದೆ. ಅವರ ಅಗಲಿಕೆಯು ತೀವ್ರ ನೋವನ್ನು ಉಂಟು ಮಾಡಿದೆ.
-ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷೆ

ಧರಂಸಿಂಗ್ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಬಹಳಷ್ಟು ಅನುಭವ ಹೊಂದಿದ್ದ ವ್ಯಕ್ತಿ. ಸಮಾಜಕ್ಕಾಗಿ ಅವರು ಸಲ್ಲಿಸಿದ ಸೇವೆ ಸದಾ ನೆನಪಿನಲ್ಲಿಡುವಂತದು.
-ನರೇಂದ್ರಮೋದಿ, ಪ್ರಧಾನಮಂತ್ರಿ

ಧರಂಸಿಂಗ್ ನಿಧನದ ಸುದ್ದಿ ಆಘಾತವನ್ನುಂಟು ಮಾಡಿದೆ. ಶಾಸಕರಾಗಿ ದೀರ್ಘಕಾಲ ರಾಜ್ಯದ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದಾರೆ. ನನ್ನೊಂದಿಗೂ ವಿಧಾನ ಮಂಡಲದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ರಾಜ್ಯದ ಹಿಂದುಳಿದ ವರ್ಗಗಳ ನಾಯಕರಾಗಿದ್ದ ಧರಂಸಿಂಗ್ 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಸ್ನೇಹ ಜೀವಿಯಾಗಿದ್ದ ಅವರು, ರಾಜ್ಯ ಕಂಡ ಅಪರೂಪದ ಮತ್ತು ವಿಶಾಲ ಹೃದಯದ ರಾಜಕಾರಣಿ. ಅವರ ನಿಧನದ ಮೂಲಕ ರಾಜ್ಯವು ಒಬ್ಬ ಹಿರಿಯ, ಅನುಭವಿ ಹಾಗೂ ಹಿಂದುಳಿದ ವರ್ಗಗಳ ನಾಯಕನನ್ನು ಕಳೆದುಕೊಂಡಿದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಸರಳ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ಧರಂಸಿಂಗ್, ರಾಜ್ಯದ ಇತಿಹಾಸದ ಪುಟಗಳಲ್ಲಿ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅನುಭವಿ, ಜನಾನುರಾಗಿ ನಾಯಕನನ್ನು ಕಳೆದುಕೊಂಡು ನಮ್ಮ ರಾಜ್ಯ ತಬ್ಬಲಿಯಾಗಿದೆ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News