ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ: ಗೋಪಾಲಕೃಷ್ಣನ್

Update: 2017-07-27 12:16 GMT

ಬೆಂಗಳೂರು, ಜು. 27: ಭವಿಷ್ಯದ ಒಳ್ಳೆಯ ಸಮಾಜ ಕಟ್ಟಲು ಇಂದಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದುದು ಬಹಳ ಮುಖ್ಯ ಎಂದು ಬೆಂಗಳೂರು ವಾಯವ್ಯ ಕೇರಳ ಸಮಾಜದ ಅಧ್ಯಕ್ಷ ಟಿ.ಕೆ.ಗೋಪಾಲಕೃಷ್ಣನ್ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಪೀಣ್ಯ ದಾಸರಹಳ್ಳಿಯಲ್ಲಿನ ಕೇರಳ ಸಮಾಜದ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪೋಷಕರು ತಮ್ಮ ಮಕ್ಕಳು ಓದಿ ದೊಡ್ಡವರಾದ ಮೇಲೆ ಒಳ್ಳೆಯ ಉದ್ಯೋಗಸ್ಥರಾಗಲೆಂದು ಹಂಬಲಿಸುತ್ತಾರೆ. ಆದರೆ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಡತನ ಅವರನ್ನು ಕಿತ್ತು ತಿನ್ನುತ್ತಿದೆ’ ಎಂದು ಬೇಸರ ವ್ಯಕ್ತಪಡಿದರು.

ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರಕಾರಗಳು, ಸಂಘ-ಸಂಸ್ಥೆಗಳು ಹಾಗೂ ದಾನಿಗಳು ಅಗತ್ಯ ನೆರವು ನೀಡಬೇಕು. ಆ ನಿಟ್ಟಿನಲ್ಲಿ ಕೇರಳ ಸಮಾಜ ಮೂವತ್ತು ಮಂದಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ತಲಾ 10 ಸಾವಿರ ರೂ.ನಂತೆ ಮೂರು ಲಕ್ಷ ರೂ. ಧನ ಸಹಾಯ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಾಯವ್ಯ ಕೇರಳ ಸಮಾಜದ ಕಾರ್ಯದರ್ಶಿ ಸತ್ಯನಾಥನ್ ಬಾಬು, ವಿದ್ಯಾನಿಧಿ, ಅಜಿತ್‌ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News