ವರದಕ್ಷಿಣೆ ಕಾಯ್ದೆ ದುರ್ಬಳಕೆ ತಡೆಗೆ ಸುಪ್ರೀಂ ಸೂಚನೆ

Update: 2017-07-28 03:38 GMT

ಹೊಸದಿಲ್ಲಿ, ಜು.28: ದೇಶದಲ್ಲಿ ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯ ದುರ್ಬಳಕೆಯನ್ನು ತಡೆಯಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವ ಮುನ್ನ ಜಿಲ್ಲಾಮಟ್ಟದ ಕುಟುಂಬ ಕಲ್ಯಾಣ ಸಮಿತಿ ಇಂಥ ಪ್ರಕರಣಗಳನ್ನು ಪರಿಶೀಲನೆ ಮಾಡಬೇಕು ಎಂಬ ಮಾರ್ಗಸೂಚಿಯನ್ನು ನೀಡಿದೆ.

ಭಾರತೀಯ ದಂಡಸಂಹಿತೆಯ 498ಎ ವಿಧಿಯನ್ನು "ಅಸಂತುಷ್ಟ ಮಹಿಳೆಯರು" ತನ್ನ ಪತಿ ವಿರುದ್ಧದ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಟೀಕೆಗಳು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಮಾರ್ಗಸೂಚಿಯನ್ನು ನಿಗದಿಪಡಿಸಿದೆ. ಪ್ರಕರಣ ದಾಖಲಿಸಿದ ತಕ್ಷಣ ಆರೋಪಿಯನ್ನು ಬಂಧಿಸುವಂತಿಲ್ಲ ಎಂದು 2014ರಲ್ಲಿ ನೀಡಿದ ತೀರ್ಪಿಗೆ ಪೂರಕವಾಗಿ ಈ ಮಾರ್ಗಸೂಚಿಯನ್ನು ನಿಗದಿಪಡಿಸಲಾಗಿದೆ.

ನ್ಯಾಯಮೂರ್ತಿಗಳಾದ ಎ.ಕೆ.ಗೋಯಲ್ ಮತ್ತು ಯು.ಯು.ಲಲಿತ್ ಅವರಿದ್ದ ನ್ಯಾಯಪೀಠ, ಪ್ರಕರಣ ದಾಖಲಾದ ತಕ್ಷಣ ಪೊಲೀಸರು ನೇರವಾಗಿ ಆರೋಪಿಯನ್ನು ಬಂಧಿಸುವುದನ್ನು ನಿಷೇಧಿಸಿದೆ. ಪತಿ ಅಥವಾ ಆತನ ಸಂಬಂಧಿಕರು ಪತ್ನಿಯ ವಿರುದ್ಧ ಎಸಗುವ ದೌರ್ಜನ್ಯವನ್ನು ಶಿಕ್ಷಿಸುವ ಗುರಿ ಸಾಧನೆಯಾಗಬೇಕಾದರೆ, ಇದರಲ್ಲಿ ನಾಗರಿಕ ಸಮಾಜವನ್ನು ಸೇರಿಸಿಕೊಳ್ಳುವುದು ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ ಅಂಕಿಅಂಶಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, "ವರದಕ್ಷಿಣೆ ಕಿರುಕುಳದಲ್ಲಿ ಬಂಧಿತರ ಪೈಕಿ ಶೇಕಡ 25ರಷ್ಟು ಮಹಿಳೆಯರು (ಪತಿಯ ತಾಯಿ ಅಥವಾ ಅಕ್ಕ/ತಂಗಿ). ಶೇಕಡ 93.6ರಷ್ಟು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, ಈ ಪೈಕಿ ಕೇವಲ 14.4 ರಷ್ಟು ಮಂದಿಗೆ ಮಾತ್ರ ಶಿಕ್ಷೆಯಾಗಿದೆ" ಎಂದು ಹೇಳಿದೆ.
ಆದರೆ ಮಹಿಳೆಯ ಸಾವು ಅಥವಾ ಮೇಲ್ನೋಟಕ್ಕೆ ದೈಹಿಕ ಗಾಯಗಳಾಗಿರುವುದು ಕಂಡುಬಂದರೆ ಈ ಮಾರ್ಗಸೂಚಿ ಅನುಸರಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News