ವಿಶ್ವಾಸ ಮತ ಜಯಿಸಿದ ನಿತೀಶ್ ಕುಮಾರ್

Update: 2017-07-28 13:15 GMT

ಪಾಟ್ನಾ, ಜು.28: ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಇಂದು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿದ್ದಾರೆ. ಇದರೊಂದಿಗೆ ಆರ್ ಜೆಡಿ ಸಂಬಂಧ  ಕಡಿದುಕೊಂಡು  ಎನ್ ಡಿಎ ಜೊತೆ ಕೈ ಜೋಡಿಸಿ ಸರಕಾರ ರಚಿಸಿದ್ದ ನಿತೀಶ್ ಕುಮಾರ್ ತನ್ನ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.

 ನಿತೀಶ್ ಕುಮಾರ್ ವಿಶ್ವಾಸಮತ ಯಾಚನೆಯ ಪರ 131 ಶಾಸಕರು ಮತ ಚಲಾಯಿಸಿದರು. ಆದರೆ ವಿಶ್ವಾಸ ಮತ ವಿರುದ್ಧ 108 ಮತಗಳು ಬಿದ್ದವು . ಇದರೊಂದಿಗೆ ಆರ್ ಜೆಡಿಗೆ ವಿಧಾನಸಭೆಯಲ್ಲಿ ಹಿನ್ನಡೆಯಾಗಿದೆ

ವಿಶೇಷ ಅಧಿವೇಶನದಲ್ಲಿ ವಿಧಾನಸಭಾ ಸ್ವೀಕರ್ ವಿಜಯ್ ಕುಮಾರ್ ಚೌಧರಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ಆರ್‍ಜೆಡಿ ಸದಸ್ಯರು ಭಾರೀ ಗದ್ದಲ-ಕೋಲಾಹಲ ಸೃಷ್ಟಿಸಿದರು. ಮಾಜಿ ಉಪ ಮುಖ್ಯಮಂತ್ರಿ ಆರ್‍ಜೆಡಿ ನಾಯಕ ತೇಜಸ್ವಿ ಪ್ರಸಾದ್ ಅವರು ಸಿಎಂ ನಿತೀಶ್  ಕುಮಾರ್ ವಿರುದ್ಧ ಹರಿಹಾಯ್ದರು.

ಜೆಡಿಯು ಮತ್ತು ಬಿಜೆಪಿ ಪಿತೂರಿ ನಡೆಸಿ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ  ಎಂದು ನಿತೀಶ್  ಕುಮಾರ್ ಮತ್ತು  ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್  ಮೋದಿ   ಅವರನ್ನು ತೇಜಸ್ವಿ ಯಾದವ್ ಟೀಕಿಸಿದರು..  

ಎನ್‌ಡಿಎ ಪರವಾಗಿ 131 ಮತ್ತು ವಿರುದ್ಧವಾಗಿ 108 ಮತಗಳು ಬಿದ್ದಿವೆ ಎಂದು ಸ್ಪೀಕರ್ ಘೋಷಿಸಿದರು.

ಜೆಡಿಯುದ 70, ಬಿಜೆಪಿಯ 52, ಎಚ್‌ಎಎಮ್‌ನ 1,ಆರ್‌ಎಲ್‌ಎಸ್‌ಪಿಯ 2, ಎಲ್‌ಜೆಪಿಯ 2 ಮತ್ತು ಪಕ್ಷೇತರರ 4 ಮತಗಳು ನಿತೀಶ ಪರವಾಗಿ ಬಿದ್ದರೆ, ವಿರುದ್ಧವಾಗಿ ಬಿದ್ದ ಮತಗಳು ಆರ್‌ಜೆಡಿಯ 79, ಕಾಂಗ್ರೆಸ್‌ನ 26 ಮತ್ತು ಸಿಪಿಐ-ಎಂಎಲ್‌ನ 3 ಮತಗಳನ್ನು ಒಳಗೊಂಡಿದ್ದವು.

ಧ್ವನಿಮತದ ಮೂಲಕ ವಿಶ್ವಾಸಮತ ನಿರ್ಣಯಕ್ಕಾಗಿ ಸ್ಪೀಕರ್ ಎರಡು ಬಾರಿ ಪ್ರಯತ್ನಿಸಿದ್ದರಾದರೂ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಕೂಗಾಟಗಳಿಂದ ಸಾಧ್ಯವಾಗ ಲಿಲ್ಲ. ಹಿರಿಯ ಆರ್‌ಜೆಡಿ ಸದಸ್ಯ ಅಬ್ದುಲ್ ಬಾರಿ ಅವರು ರಹಸ್ಯ ಮತದಾನಕ್ಕಾಗಿ ಆಗ್ರಹಿಸಿದರಾದರೂ ಸ್ಪೀಕರ್ ನಿರಾಕರಿಸಿದರು.

ವಿಶ್ವಾಸಮತದ ಅಂತ್ಯದಲ್ಲಿ ಸ್ಪೀಕರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಶುಕ್ರವಾರ ವಿಶ್ವಾಸಮತ ನಿರ್ಣಯಕ್ಕಾಗಿ ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು.

 ಮುಖ್ಯಮಂತ್ರಿಗಳು ಮಂಡಿಸಿದ್ದ ವಿಶ್ವಾಸಮತ ನಿರ್ಣಯದ ಮೇಲೆ ವಿವಿಧ ಪಕ್ಷಗಳ ಹಿರಿಯ ನಾಯಕರು ಮಾಡಿದ ಭಾಷಣಗಳಿಗೆ ಪ್ರತಿಪಕ್ಷಗಳ ಸದಸ್ಯರು ಪದೇ ಪದೇ ಅಡ್ಡಿಯನ್ನುಂಟು ಮಾಡಿದರು.

ಲಾಲು ಪ್ರಸಾದ್ ಯಾದವ್ ಅವರ ಪುತ್ರ ಆರ್‌ಜೆಡಿ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ ಅವರು ವಿಶ್ವಾಸಮತ ನಿರ್ಣಯದ ಮೇಲೆ ಚರ್ಚೆಯನ್ನಾರಂಭಿಸಿದರು. ಕಾಂಗ್ರೆಸ್ ಪರವಾಗಿ ಅದರ ಶಾಸಕಾಂಗ ಪಕ್ಷದ ನಾಯಕ ಸದಾನಂದ್ ಸಿಂಗ್ ಮತ್ತು ಬಿಜೆಪಿ ಪರವಾಗಿ ಮೋದಿ ಮಾತನಾಡಿದರು. ಮುಖ್ಯಮಂತ್ರಿಗಳು ಕೊನೆಯಲ್ಲಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News