ಚಳವಳಿಗಳು ಸೃಜನಶೀಲತೆಗೆ ಪೂರಕ: ಬರಗೂರು ರಾಮಚಂದ್ರಪ್ಪ

Update: 2017-07-28 12:43 GMT

ಬೆಂಗಳುರು, ಜು.28: ಜನಪರ ಚಳವಳಿಗಳು ಸೃಜನಶೀಲತೆಗೆ ಪೂರಕವಾಗಿದ್ದು, ಅವುಗಳ ಮೂಲಕ ಹೊರ ಹೊಮ್ಮುವ ಚಿಂತನೆಗಳು ಸಾಹಿತ್ಯದ ಬರವಣಿಗೆಗೆ ಹೊಸ ಆಯಾಮವನ್ನು ತಂದುಕೊಡುವಲ್ಲಿ ಯಶಸ್ವಿಯಾಗಲಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಮಾತಂಗ ಸಾಹಿತ್ಯ ಪರಿಷತ್ ಹಾಗೂ ಸಿವಿಜಿ ಪ್ರಕಾಶನ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಹಿರಿಯ ಕವಿ ಪ್ರೊ.ಎ.ಕೆ.ಹಂಪಣ್ಣರವರ ಸಮಗ್ರ ಕಾವ್ಯ ‘ಬಯಲ ಜೋಗಿ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬಹುತೇಕ ಸಾಹಿತಿಗಳು ಚಳವಳಿಯ ಸಿದ್ಧಾಂತಗಳನ್ನು ಬಂಧನವೆಂದುಕೊಂಡಿದ್ದಾರೆ. ಬರಹಗಾರರು ಹಾಗೆ ಕಾಣುವ ಅಗತ್ಯವಿಲ್ಲ. ಸಿದ್ದಾಂತಗಳನ್ನು ಸಂಗಾತಿಯಂತೆ ಕಾಣುವ ಮೂಲಕ ಅದರ ಜೊತೆ ಸಂಘರ್ಷಕ್ಕಿಳಿಯಬೇಕು. ಆಗ ಸೃಜನಶೀಲತೆಯ ಆಯಾಮಗಳು ತಾನಾಗಿಯೇ ತೆರೆದುಕೊಳ್ಳಲು ಪ್ರಾರಂಭಗೊಳ್ಳುತ್ತದೆ. ಚಳವಳಿಯಿಲ್ಲದ ಜಡತ್ವವಾದ ಸಮಾಜದಲ್ಲಿ ಸೃಜನಶೀಲತೆಯನ್ನು ಹುಡುಕಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಬೀದಿಯಲ್ಲಿ ನಿಂತುಕೊಂಡು ಹೋರಾಟ ಮಾಡುವುದು ಮಾತ್ರವೇ ಚಳವಳಿಯಾಗುವುದಿಲ್ಲ. ಅದು ಮನೋಧರ್ಮವಾಗಿ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಹಾಸು ಹೊಕ್ಕಾಗಿರಬೇಕು. ಅದು ಬರವಣಿಗೆಯಾಗಿರಲಿ, ಪಾಠ ಮಾಡುವುದಾಗಲಿ, ಭಾಷಣ ಮಾಡುವುದಾಗಲಿ ಎಲ್ಲವನ್ನು ಸಾಮಾಜಿಕ ಹಾಗೂ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಹಾಗೆ ನೋಡಿದರೆ ಪಂಪನಿಂದ ಪ್ರಾರಂಭಗೊಂಡು ವಚನ ಶರಣರಾದಿಯಾಗಿ ಈಗಿನ ಸಾಹಿತ್ಯ ಲೋಕದವರೆಗೆ ಜನಪರ ಚಳವಳಿಗಳು ಕನ್ನಡ ಸಾಹಿತ್ಯವನ್ನು ಸೃಜನಾತ್ಮಕವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಸಾವಿರಾರು ವರ್ಷಗಳ ಹಿಂದೆ ಮಹಾಕವಿ ಪಂಪ ‘ಮನುಜ ಜಾತಿ ತನ್ನೊಂದೇ ವಲಂ’ ಎಂದಿರುವುದು ಇಂದಿನ ಚಳವಳಿಯ ಪ್ರಮುಖವಾದ ಆಶಯವಾಗಿದೆ. ಹಾಗೆಯೇ ಶರಣರು ಚಳವಳಿಯಲ್ಲಿ ಭಾಗವಹಿಸುತ್ತಲೇ ಅದರ ಅನುಭವದ ಸಾರವನ್ನು ಸಾಹಿತ್ಯ ರೂಪಕ್ಕಿಳಿಸಿದರು. ಹೀಗೆ ಚಳವಳಿ ಹಾಗೂ ಸಾಹಿತ್ಯ ಒಟ್ಟೊಟ್ಟಿಗೆ ಸಾಗುತ್ತಾ ಬಂದಿವೆ ಎಂದು ಅವರು ಸ್ಮರಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಎಲ್.ಹನುಮಂತಯ್ಯ ಮಾತನಾಡಿ, ತಳಸಮುದಾಯದ ಬದುಕನ್ನು ಕಾವ್ಯದಲ್ಲಿ ಸೃಜನಾತ್ಮಕವಾಗಿ ಕಟ್ಟಿಕೊಟ್ಟ ಕವಿ ಪ್ರೊ.ಎ.ಕೆ.ಹಂಪಣ್ಣರವರ ಕನ್ನಡ ಕಾವ್ಯಲೋಕದ ಅತಿಮುಖ್ಯವಾದ ಹೆಸರಾಗಬೇಕಾಗಿತ್ತು. ಆದರೆ, ಸಾಹಿತ್ಯದ ವಿಮರ್ಶಾ ಜಗತ್ತು ಅವರ ಕಾವ್ಯವನ್ನು ನಿರ್ಲಕ್ಷಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಟ್ಟು, ಆಕ್ರೋಶ ವ್ಯಕ್ತಪಡಿಸುವುದು ಮಾತ್ರವೇ ದಲಿತ ಕಾವ್ಯವೆನ್ನಲಾಗುವುದಿಲ್ಲ. ದಲಿತ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಆಯಾಮಗಳನ್ನು ತಮ್ಮ ಅನುಭವಗಳ ಮೂಲಕ ಸೃಜನಾತ್ಮಕವಾಗಿ ಕಟ್ಟಿಕೊಡುವುದೇ ನಿಜವಾದ ದಲಿತಕಾವ್ಯವಾಗುತ್ತದೆ ಎಂದು ಅವರು ಹೇಳಿದರು.
ಪುಸ್ತಕ ಬಿಡುಗಡೆಗೂ ಮುನ್ನ ಜಾನಪದ ಹಾಡುಗಾರ ಕೆ.ಎನ್.ನಾಗೇಶ್ ಹಾಗೂ ಸಂಗಡಿಗರಿಂದ ಜಾನಪದ ಗೀತೆಗಳ ಗಾಯನವಿತ್ತು. ಕಾರ್ಯಕ್ರಮದಲ್ಲಿ ಸಿವಿಜಿ ಪ್ರಕಾಶನ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಹಿರಿಯ ಕವಿ ಪ್ರೊ.ಎ.ಕೆ.ಹಂಪಣ್ಣ ಮತ್ತಿತರರಿದ್ದರು.

ವಿವಿಧ ರಾಜ್ಯಗಳಲ್ಲಿರುವ ದಲಿತ ಕಾವ್ಯಗಳನ್ನು ವಿವಿಧ ಆಯಾಮದಲ್ಲಿ ಸಂಶೋಧಿಸಿ ದಲಿತ ಸಮುದಾಯದ ಕಾವ್ಯ ಪರಂಪರೆಯ ಒಟ್ಟು ಆಶಯವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಮುಂದಾಗಬೇಕಾಗಿದೆ.
-ಎಲ್.ಹನುಮಂತಯ್ಯ ನಿಕಟ ಪೂರ್ವ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News