ಕ್ಷಯ ರೋಗಿಗಳನ್ನುಉತ್ಪಾದಿಸುತ್ತಿರುವ ಸರಕಾರ

Update: 2017-07-28 18:54 GMT

ಕ್ಷಯ ಭಾರತವನ್ನು ಮತ್ತೆ ಹಿಂಬಾಗಿಲಿನಿಂದ ಪ್ರವೇಶಿಸಿದೆ. ಕ್ಷಯವನ್ನು ನಾವು ಗೆದ್ದೆವೋ ಎನ್ನುವಷ್ಟರಲ್ಲಿ ಅದು ಅಕ್ಷಯ ರೂಪ ತಾಳಿದೆ. ಒಂದು ವರದಿಯ ಪ್ರಕಾರ ಹೊಸದಿಲ್ಲಿಯಲ್ಲಿ ಪ್ರತಿದಿನ ಸರಾಸರಿ 10 ಮಂದಿ ಕ್ಷಯದಿಂದ ಸಾಯುತ್ತಿದ್ದಾರೆ. ವಿಪರ್ಯಾಸವೆಂದರೆ ಇವರೆಲ್ಲರೂ 15ರಿಂದ 47 ವರ್ಷ ವಯಸ್ಸಿನ ಒಳಗಿನವರು. ಪ್ರಜ್ಞಾ ಫೌಂಡೇಶನ್ ಎಂಬ ಸ್ವಯಂ ಸೇವಾಸಂಸ್ಥೆ ಈ ಅಂಕಿ ಅಂಶಗಳನ್ನು ಪ್ರಕಟಿಸಿದೆ.

ಸರಕಾರಿ ಆಸ್ಪತ್ರೆಗಳಲ್ಲಿ ಸಾಯುವ ಕ್ಷಯರೋಗಿಗಳ ಸಾವಿನ ಸಂಖ್ಯೆಯನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಅಂದರೆ ಉಳಿದ ಖಾಸಗಿ ಆಸ್ಪತ್ರೆಗಳಲ್ಲಿ ಸಾಯುವ ಜನರ ಅಂಕಿಅಂಶ ಇದರಲಿಲ್ಲ. ಅವೂ ಸೇರಿದರೆ, ಸಾವಿನ ಸಂಖ್ಯೆಯ ಇನ್ನೊಂದು ಭೀಕರ ರೂಪ ಬೆಳಕಿಗೆ ಬರುತ್ತದೆ. ಇದು ಕೇವಲ ದಿಲ್ಲಿಗೆ ಮಾತ್ರ ಸಂಬಂಧಿಸಿಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಮುಂಬೈ, ಕೋಲ್ಕತಾದಂತಹ ನಗರಗಳು ಇಂದು ಕ್ಷಯವನ್ನು ಅಕ್ಷಯವಾಗಿಸುತ್ತಿರುವ ಬಾಣಲೆಗಳಾಗುತ್ತಿವೆ. ನಗರ ಪ್ರದೇಶವನ್ನು ಒತ್ತಿಕೊಂಡಿರುವ ಜೋಪಡಾಪಟ್ಟಿಗಳಲ್ಲಿ ಕ್ಷಯರೋಗ ಅತ್ಯಂತ ಭೀಕರವಾಗಿ, ವೇಗವಾಗಿ ಬೆಳೆಯುತ್ತಿವೆ. ಇದೇ ಸಂದರ್ಭದಲ್ಲಿ, ಸರಕಾರ ಆರೋಗ್ಯ ಸಹಿತ ಸಾಮಾಜಿಕ ಕ್ಷೇತ್ರಗಳಿಗೆ ನೀಡುತ್ತಿರುವ ಹಣದಲ್ಲಿ ವ್ಯಾಪಕವಾಗಿ ಕಡಿತ ಮಾಡಿದೆ.

ಬದಲಿಗೆ ಆಯುಷ್, ಪತಂಜಲಿಯಂತಹ ಸಂಸ್ಥೆಗಳನ್ನು ಬೆಳೆಸಲು ಮುಂದಾಗಿದೆ. ತಲುಪಬೇಕಾದವರಿಗೆ ಹಣ ತಲುಪುತ್ತಿಲ್ಲ. ರಾಮ್‌ದೇವ್‌ರಂತಹ ಕಪಟಿಗಳು ಈ ಹಣವನ್ನು ಒಂದೆಡೆ ದೋಚುತ್ತಾರೆ. ಆದರೆ ಇಂದಿಗೂ ಆಯುರ್ವೇದದಲ್ಲಿ ಟಿಬಿಯಂತಹ ರೋಗಗಳಿಗೆ ಔಷಧಿಗಳಿಲ್ಲ. ಪರಿಣಾಮವಾಗಿ ಬಡವರಿಗೆ ಟಿಬಿಯಂತಹ ಮಾರಕ ರೋಗಗಳು ಬಂದರೆ, ಅವರಿಗೆ ಸರಿಯಾದ ಚಿಕಿತ್ಸೆಯೇ ದೊರಕದಂತಹ ಸ್ಥಿತಿ ಇದೆ. ವಿಶ್ವ ಆರೋಗ್ಯ ಸಂಸ್ಥೆಯು ಟಿಬಿ ರೋಗ ನಿಯಂತ್ರಣದ ಕುರಿತಂತೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಹೊಂದಿವೆ. ರೋಗ ಪರೀಕ್ಷೆ ಮತ್ತು ಚಿಕಿತ್ಸೆಗಳಲ್ಲಿ ವಿವಿಧ ದೇಶಗಳು ಅನುಸರಿಸುತ್ತಿರುವ ಮಾರ್ಗಗಳ ಕುರಿತಂತೆ ಅದು ಸಮೀಕ್ಷೆ ನಡೆಸಿ ವಿವಿಧ ದೇಶಗಳಿಗೆ ರ್ಯಾಂಕ್‌ಗಳನ್ನು ನೀಡುತ್ತದೆ. ಟಿಬಿಯನ್ನು ಎದುರಿಸುವ ಭಾರತದ ಆಸ್ಪತ್ರೆಗಳ ಶೋಚನೀಯ ಸ್ಥಿತಿ ವಿಶ್ವಸಂಸ್ಥೆಯ ವರದಿಯಿಂದ ಈಗಾಗಲೇ ಬಹಿರಂಗಗೊಂಡಿದೆ.

ಇತ್ತೀಚೆಗೆ ಸಂಸ್ಥೆಯೊಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದಲ್ಲಿ ಕ್ಷಯರೋಗಿಗಳನ್ನು ಪರೀಕ್ಷಿಸಲು ಓಬಿರಾಯನ ಕಾಲದ ರೋಗ ಪರೀಕ್ಷಣಾ ವಿಧಾನಗಳನ್ನು ಬಳಸಲಾಗುತ್ತದೆ. ಔಷಧಗಳ ದಾಸ್ತಾನು ಮುಗಿದು ಹೋಗುವ ಸಮಸ್ಯೆ ಆಗಾಗ ಕಾಣಿಸುತ್ತದೆ. ಇದರಿಂದಾಗಿ ಕಾಲ ಕಾಲಕ್ಕೆ ಔಷಧಿ ಸೇವಿಸುವಲ್ಲಿ ರೋಗಿಗಳು ವಿಫಲರಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ಷಯರೋಗದ ಕುರಿತಂತೆ ರೋಗಿಗಳಿಗೆ ಸರಿಯಾದ ಮಾಹಿತಿಯನ್ನು ನೀಡುವ ಸಮಾಲೋಚನೆ ನಡೆಸುವ ಸಾಮರ್ಥ್ಯ ನಮ್ಮ ಆಸ್ಪತ್ರೆಗಳಿಗೆ ಇಲ್ಲ ಎಂದು ಈ ವರದಿ ಸ್ಪಷ್ಟಪಡಿಸುತ್ತದೆ.

ಭಾರತದಲ್ಲಿ ಕ್ಷಯರೋಗ ಪತ್ತೆ ಹಚ್ಚಲು ಬಳಸುವ ‘ಸ್ಮಿಯರ್ ಮೈಕ್ರೋಸ್ಕೋಪಿ’ ವಿಧಾನ ಅತ್ಯಂತ ಹಳೆಯದು ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಇದರಿಂದಾಗಿ ಪರಿಣಾಮಕಾರಿಯಾಗಿ, ಅತೀ ಶೀಘ್ರ ರೋಗವನ್ನು ಪತ್ತೆಹಚ್ಚಲು ವೈದ್ಯರು ವಿಫಲರಾಗುತ್ತಾರೆ. ರೋಗ ಉಲ್ಬಣಿಸಿದ ಆನಂತರ ಔಷಧಿಗೆ ಅವರು ಸ್ಪಂದಿಸುವುದಿಲ್ಲ. ಇದು ಕ್ಷಯ ರೋಗ ಹೆಚ್ಚುವುದಕ್ಕೆ ಮೊದಲ ಕಾರಣವಾಗಿದೆ. ವಿಶ್ವ ಆರೋಗ್ಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕ್ಷಯದ ಸೋಂಕು ತಗಲಿದೆ ಎಂಬ ಅನುಮಾನವಿರುವ ಎಲ್ಲ ರೋಗಿಗಳನ್ನು ಸಿಬಿ-ಎನ್‌ಎಎಟಿ ಪರೀಕ್ಷಾ ವಿಧಾನದ ಮೂಲಕವೇ ಪರೀಕ್ಷಿಸಬೇಕು.

ದೇಶದ ಹೊಸ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ, ಅದು ಅನುಸರಿಸುತ್ತಿರುವ ಮಾನದಂಡದಲ್ಲೇ ದೋಷವಿರುವುದನ್ನು ವರದಿ ಎತ್ತಿ ಹಿಡಿದಿದೆ. ಹಾಗೆಯೇ ಔಷಧಿ ಪೂರೈಕೆಯಲ್ಲಿರುವ ಅವ್ಯವಸ್ಥೆಯೂ ರೋಗ ಉಲ್ಬಣಕ್ಕೆ ಕಾರಣವಾಗಿದೆ. ಪ್ರತಿದಿನ ರೋಗಿಗೆ ಔಷಧಿ ನೀಡದೇ ಇದ್ದಲ್ಲಿ ರೋಗಿಯು ಆ ಔಷಧಿಗೆ ಪ್ರತಿಕ್ರಿಯಿಸುವ ಗುಣವನ್ನೇ ಕಳೆದುಕೊಳ್ಳುತ್ತಾನೆ. ಭಾರತದಲ್ಲಿ ವಾರಕ್ಕೆ ಮೂರು ಬಾರಿ ಔಷಧಿ ನೀಡುವ ಕ್ರಮವಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ ಎನ್ನುತ್ತಾರೆ ತಜ್ಞ ವೈದ್ಯರು. ವಿಪರ್ಯಾಸದ ಸಂಗತಿಯೆಂದರೆ, 2025ರ ಒಳಗೆ ಭಾರತವು ಕ್ಷಯರೋಗ ನಿರ್ಮೂಲನೆ ಮಾಡುವ ಯೋಜನೆಯನ್ನು ಹೊಂದಿದೆ ಎಂದು ಘೋಷಿಸಿದ್ದಾರೆ ವಿತ್ತ ಸಚಿವ ಅರುಣ್ ಜೇಟ್ಲಿ.

ಪ್ರಧಾನಿ ನರೇಂದ್ರ ಮೋದಿಯವರ ಎದೆಯ ಅಳತೆಗೆ ಕ್ಷಯ ರೋಗ ಬೆದರಿ ಓಡಿ ಹೋಗುತ್ತದೆ ಎಂದು ವಿತ್ತ ಸಚಿವರು ಭಾವಿಸಿದಂತಿದೆ. ಯಾಕೆಂದರೆ ಅವರ ಘೋಷಣೆಗೂ, ವಾಸ್ತವಕ್ಕೂ ಅಗಾಧ ಅಂತರವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಕ್ಷಯರೋಗವೂ ಸೇರಿದಂತೆ ಸೋಂಕುರೋಗಗಳ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಹಲವು ಕೋಟಿ ರೂಪಾಯಿಯನ್ನು ಕಡಿತಗೊಳಿಸಿದೆ. ಬದಲಿಗೆ ಆಯುಷ್‌ನಂತಹ ಸಂಸ್ಥೆಗಳಿಗೆ ಹಣವನ್ನು ಕೈ ಬದಲಿಸಿದೆ. ಇದು, ಸರಕಾರ ನಿಜಕ್ಕೂ ಕ್ಷಯರೋಗವನ್ನು ಎದುರಿಸುವಲ್ಲಿ ಎಷ್ಟು ಪ್ರಾಮಾಣಿಕವಾಗಿದೆ ಎನ್ನುವುದನ್ನು ತಿಳಿಸುತ್ತದೆ. ಭಾರತ ಮುಂದಿನ ದಿನಗಳಲ್ಲಿ ಕ್ಷಯರೋಗವನ್ನು ಎದುರಿಸುವಲ್ಲ್ಲಿ ಇನ್ನಷ್ಟು ವೈಫಲ್ಯಗಳನ್ನು ಕಾಣಲಿರುವುದು ಸ್ಪಷ್ಟ.

ಯಾಕೆಂದರೆ, ಕ್ಷಯರೋಗ ವೇಗವಾಗಿ ಹರಡುವುದಕ್ಕೆ ಮುಖ್ಯ ಕಾರಣವೇ ಅಪೌಷ್ಟಿಕತೆ. ಹಸಿವು ಕ್ಷಯರೋಗದ ಬೀಜ. ಈ ದೇಶದ ಶೇ.50ರಷ್ಟು ಜನರು ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ವರದಿ ಹೇಳುತ್ತದೆ. ಬರೇ ಔಷಧಿಗಳು ಕ್ಷಯವನ್ನು ದೂರ ಮಾಡಲಾರವು. ಪೌಷ್ಟಿಕವಾದ ಆಹಾರ ಅದರ ಜೊತೆ ಜೊತೆಗೇ ಸೇವಿಸಬೇಕಾಗುತ್ತದೆ. ಸಾಧಾರಣವಾಗಿ ಬಡ ವರ್ಗದ ಕ್ಷಯ ಪೀಡಿತರಿಗೆ ವೈದ್ಯರು ‘ಬೀಫ್ ತಿನ್ನಿ’ ಎಂಬ ಸಲಹೆಯನ್ನು ನೀಡುವುದು ಸಾಮಾನ್ಯ. ಯಾಕೆಂದರೆ, ಅತೀ ಕಡಿಮೆ ದರದಲ್ಲಿ, ಅತೀ ಹೆಚ್ಚು ಪೌಷ್ಟಿಕಾಂಶವಿರುವ ಆಹಾರ ಗೋಮಾಂಸವಾಗಿದೆ. ಬೀಫ್ ಈ ಕಾರಣಕ್ಕೆ ಕ್ಷಯರೋಗಿಗಳಿಗೆ ಪರ್ಯಾಯ ಔಷಧಿಯಾಗಿ ಕೆಲಸ ಮಾಡುತ್ತಿತ್ತು. ಆದರೆ ಇಂದು ದೇಶದಲ್ಲಿ ಗೋಮಾಂಸ ಸೇವನೆಯನ್ನೇ ತಡೆಯುವ ವ್ಯವಸ್ಥಿತ ಸಂಚು ನಡೆದಿದೆ.

ಇದು ನೇರವಾಗಿ ಬಡವರ್ಗದ ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರಲಿದೆ. ಗೋಮಾಂಸ ವ್ಯಾಪಾರದ ಮೇಲೆ ಸರಕಾರವೇ ಹಸ್ತಕ್ಷೇಪ ನಡೆಸಿದ ಬಳಿಕ ಅದರ ದರ ವಿಪರೀತಕ್ಕೇರಿದೆ. ಬಡವರ ಪಾಲಿಗೆ ಗೋಮಾಂಸವೇ ದುಬಾರಿ ಮಾಂಸವಾಗಿ ಪರಿವರ್ತನೆಯಾಗಿದೆ. ಹೀಗಿರುವಾಗ ಕ್ಷಯರೋಗ ಪೀಡಿತ ರೋಗಿಗಳು ಪೌಷ್ಟಿಕ ಆಹಾರಕ್ಕೆ ಏನು ಮಾಡಬೇಕು? ದೇಶದ ಆರ್ಥಿಕ ನೀತಿಯಿಂದಾಗಿ ಆಹಾರದ ಬೆಲೆಗಳು ಏರುತ್ತಿವೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಭಾರೀ ಹಿಗ್ಗುತ್ತಿದೆ. ಇಂದು ಸರಕಾರವೇ ಕ್ಷಯ ರೋಗ ಉತ್ಪಾದನೆಗೆ ತನ್ನ ಕೊಡುಗೆಗಳನ್ನು ಬೇರೆ ಬೇರೆ ರೀತಿಯಿಂದ ನೀಡುತ್ತಿರುವಾಗ, ಇರುವ ಕಳಪೆ ಔಷಧಿಗಳಿಂದ ಈ ದೈತ್ಯ ರೋಗವನ್ನು ಗೆಲ್ಲಲು ಸಾಧ್ಯವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News