ಸಖ್ಯ ಬಿಜೆಪಿ ಜತೆ; ಬೆಂಬಲ ಯುಪಿಎ ಅಭ್ಯರ್ಥಿಗೆ!

Update: 2017-07-29 04:14 GMT

ಪಾಟ್ನಾ, ಜು. 29: ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿರುವ ಜೆಡಿಯು ಮುಖಂಡ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಾತ್ರ ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಯುಪಿಎಗೆ ನೀಡಿದ್ದ ವಾಗ್ದಾನದಂತೆ, ಯುಪಿಎ ಅಭ್ಯಥಿ ಗೋಪಾಲಕೃಷ್ಣ ಗಾಂಧಿ ಅವರನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬುಧವಾರದ ’ಕ್ಷಿಪ್ರಕ್ರಾಂತಿ’ ಬಳಿಕ ರಾಜ್ಯದಲ್ಲಿ ಜೆಡಿಯು ನಿಲುವಿನ ಬಗ್ಗೆ ವ್ಯಾಪಕ ಪ್ರಶ್ನೆಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಪಕ್ಷದ ಹಿರಿಯ ಮುಖಂಡರು, "ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಾಗಿದೆ. ಆದರೆ ಗೋಪಾಲಕೃಷ್ಣ ಗಾಂಧಿಯವರನ್ನು ಅವರ ವ್ಯಕ್ತಿತ್ವ ಹಾಗೂ ಸಾಮರ್ಥ್ಯದ ಆಧಾರದಲ್ಲಿ ಬೆಂಬಲಿಸಲಾಗುತ್ತಿದೆ" ಎಂದು ಹೇಳಿದ್ದಾರೆ.

ಈ ಎರಡು ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಪಕ್ಷದ ಮುಖ್ಯಸ್ಥರೂ ಆಗಿರುವ ಸಿಎಂ ಈಗಾಗಲೇ ಪಕ್ಷದ ಜನಪ್ರತಿನಿಧಿಗಳಿಗೆ ಸ್ಪಷ್ಟ ಸೂಚನೆ ನಿಡಿದ್ದಾರೆ. ಪಕ್ಷದ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ. ಕ್ಷಿಪ್ರ ರಾಜಕೀಯ ಬೆಳವಣಿಗೆಯ ಹಿಂದಿನ ನಿಲುವಿನ ಮೇಲೆ ಯಾವ ಪರಿಣಾಮವನ್ನೂ ಬೀರದು ಎಂದು ಸ್ಪಷ್ಟಪಡಿಸಿದ್ದಾರೆ.

ಗಾಂಧಿಯವರನ್ನು ರಾಷ್ಟ್ರಪತಿ ಹುದ್ದಗೆ ವಿರೋಧ ಪಕ್ಷಗಳ ಸಂಯುಕ್ತ ಆಭ್ಯರ್ಥಿಯಾಗಿ ಜೆಡಿಯು ಪ್ರಸ್ತಾವ ಮುಂದಿಟ್ಟಿತ್ತು. ಇದಕ್ಕೆ ಕಾಂಗ್ರೆಸ್ ಅಪಸ್ವರ ಎತ್ತಿದ ಹಿನ್ನೆಲೆಯಲ್ಲಿ ಜೆಡಿಯು ರಾಮನಾಥ್ ಕೋವಿಂದ್ ಅವರನ್ನು ಬೆಂಬಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News