ಅಸ್ಸಾಂನಲ್ಲಿ ಕೇಸರಿ ಭಯೋತ್ಪಾದನೆ: ಕಾಂಗ್ರೆಸ್

Update: 2017-07-29 04:16 GMT

ಹೊಸದಿಲ್ಲಿ, ಜು. 29: ಅಸ್ಸಾಂನಲ್ಲಿ ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರಿಗೆ ಮಾರಕ ಅಸ್ತ್ರಗಳ ತರಬೇತಿ ನೀಡಲಾಗುತ್ತಿದ್ದು, ಅದನ್ನು ಉಗ್ರಗಾಮಿ ಸಂಘಟನೆಯಾಗಿ ರೂಪಿಸಲಾಗುತ್ತಿದೆ. ಸೂಕ್ತ ಪರವಾನಗಿ ಇಲ್ಲದೇ ಇಂಥ ತರಬೇತಿ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ರಾಜ್ಯದಲ್ಲಿ ಸಂಘಟನಾತ್ಮಕ ಕಾರ್ಯದ ಭಾಗವಾಗಿ ಹೊಜೈ ಗೀತಾ ಆಶ್ರಮದಲ್ಲಿ ಎರಡು ಸಂಘಟನೆಗಳು ಕಾರ್ಯಕರ್ತರಿಗೆ ಮಾರಕ ಅಸ್ತ್ರಗಳ ತರಬೇತಿ ನೀಡುತ್ತಿದ್ದಾರೆ ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಿಪೂನ್ ಬೋರಾ ಆಪಾದಿಸಿದರು.

ವಿಎಚ್‌ಪಿ ಮಹಿಳಾ ಘಟಕವಾದ ದುರ್ಗಾ ವಾಹಿನಿ ಕಾರ್ಯಕರ್ತರಿಗೂ ನಲ್ಬರಿಯಲ್ಲಿ ಮಾರಕ ಅಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಈ ಸಂಬಂಧ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟ ಮಾಡಿ ಮನವಿಪತ್ರ ಸಲ್ಲಿಸಲಾಗಿದ್ದು, ಲೈಸನ್ಸ್ ಇಲ್ಲದೇ ಇಂಥ ತರಬೇತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾಗಿ ಸ್ಪಷ್ಟಪಡಿಸಿದರು.

ಈ ತರಬೇತಿ ಕುರಿತ ವಿಡಿಯೊ ತುಣುಕನ್ನೂ ಗೃಹಸಚಿವರಿಗೆ ನೀಡಿ, ಕ್ರಮಕ್ಕೆ ಆಗ್ರಹಿಸಲಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅವರು ಆಕ್ಷೇಪಿಸಿದರು.

"ಬಜರಂಗದಳ ಮತ್ತು ವಿಎಚ್‌ಪಿ ತಮ್ಮ ಕಾರ್ಯಕರ್ತರಿಗೆ  ಮಾರಕ ಅಸ್ತ್ರಗಳ ತರಬೇತಿ ನೀಡುವ ಮೂಲಕ ಘೋರ ಅಪರಾಧ ಎಸಗಿವೆ. ಇದು ಜನರನ್ನು ಉದ್ರೇಕಿಸಲಿದ್ದು, ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲಿದೆ. ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಶಾಂತಿ ಕದಡುವುದಕ್ಕಾಗಿ ಈ ತರಬೇತಿ ನೀಡಲಾಗುತ್ತಿದೆ" ಎಂಬ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News