ನೋಟು ರದ್ಧತಿಯಿಂದ ಇವರಿಗೆ ಬಂತು ಅಚ್ಛೇ ದಿನ್

Update: 2017-07-29 05:53 GMT

ಹೊಸದಿಲ್ಲಿ,ಜು.29 : ಮೋದಿ ಸರಕಾರ ಕಳೆದ ವರ್ಷ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ನೋಟು ರದ್ದತಿ ಯೋಜನೆಯಿಂದ ಕನಿಷ್ಠ ಒಬ್ಬರಿಗಂತೂ ಅಚ್ಛೇ ದಿನ್ ಬಂದಿದೆ. ಅವರು  ಯಾರೆಂದು ತಿಳಿದಿದೆಯೇನು ? ಅವರೇ  ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಇದರ ಕೋಟ್ಯಾಧಿಪತಿ ಅಧ್ಯಕ್ಷ ಉದಯ್ ಕೋಟಕ್.

ಕಪ್ಪು ಹಣದ ವಿರುದ್ಧ ಸಮರ ಸಾರುವ ಪ್ರಮುಖ ಉದ್ದೇಶ ಹೊಂದಿದೆಯೆಂದು ಸರಕಾರ ಹೇಳಿಕೊಂಡ ನೋಟು ಅಮಾನ್ಯೀಕರಣ ನೀತಿಯಿಂದಾಗಿ ಕೋಟಕ್ ಬ್ಯಾಂಕಿನ  ವಿಮಾ, ಬ್ರೋಕರೇಜ್ ಸೇವೆಗಳು ಹಾಗೂ ಅಸ್ಸೆಟ್ ಮ್ಯಾನೇಜ್ಮೆಂಟ್ ಉದ್ಯಮಕ್ಕೆ  ಜನರ ಉಳಿತಾಯ ಹರಿದು ಬಂದಿದೆ. ಈ ವರ್ಷ ಕೋಟಕ್ ಬ್ಯಾಂಕಿನ  ಸಂಪತ್ತು ಶೇ 43ರಷ್ಟು ಹೆಚ್ಚಾಗಿದೆಯೆಂದು ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸುತ್ತದೆ. ವಿಶ್ವದ ಅತ್ಯಂತ ಶ್ರೀಮಂತ  50 ವ್ಯಕ್ತಿಗಳಲ್ಲಿರುವ 22 ಭಾರತೀಯ ಕೋಟ್ಯಾಧಿಪತಿಗಳ ಸಂಪತ್ತು ಜನವರಿ 1ರಿಂದ ಶೇ 32ರಷ್ಟು ಹೆಚ್ಚಾಗಿದೆ.

ಕೋಟಕ್ ಸಮೂಹದ ಹೂಡಿಕೆ ಕ್ಷೇತ್ರದ ಸಂಪತ್ತು ಶೇ 61ರಷ್ಟು ಏರಿಕೆ ಕಂಡಿದ್ದರೆ  ಇತರ ಉದ್ಯಮ ರಂಗಗಳಿಗೆ ಹೋಲಿಸಿದಾಗ  ಈ ಬ್ಯಾಂಕಿನ ಅನುತ್ಪಾದಕ ಸಾಲದ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಈ ವರ್ಷ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಅತ್ಯಧಿಕ ಲಾಭ ಪಡೆದ ಉದ್ಯಮಗಳಲ್ಲಿ ಕೋಟಕ್ ಬ್ಯಾಂಕ್ ಒಂದಾಗಿದೆ. ಬ್ಯಾಂಕ್ ಇದೀಗ ತನ್ನ ಹೊಸ ಬ್ಯಾಂಕಿಂಗ್ ಆ್ಯಪ್ 811 ಮೂಲಕವೂ ಗ್ರಾಹಕರನ್ನು ಸೆಳೆಯಲು  ಪ್ರಯತ್ನಿಸುತ್ತಿದೆ.

 ಭ್ರಷ್ಟಾಚಾರ ಮತ್ತು ನಕಲಿ ನೋಟುಗಳ ಹಾವಳಿ ತಡೆಗಟ್ಟಲು ನೋಟು ಅಮಾನ್ಯೀಕರಣ ಕೈಗೊಳ್ಳಲಾಗಿದ್ದರೆ, ಮೋದಿ ಸರಕಾರದಿಂದ ಜಾರಿಗೊಳಿಸಲಾಗಿರುವ ಇತರ ಆರ್ಥಿಕ ಸುಧಾರಣೆಗಳಿಂದಾಗಿ ಈ ಹಿಂದೆ ಜನರು ತಮ್ಮಲ್ಲಿ ಹೊಂದಿರುತ್ತಿದ್ದ ನಗದು, ಉಳಿತಾಯ ಅಥವಾ ರಿಯಲ್ ಎಸ್ಟೇಟಿಗೆ ಅವರು ಹೂಡಿಕೆ ಮಾಡುತ್ತಿದ್ದ ಹಣವನ್ನು  ಈ ಬ್ಯಾಂಕ್ ಆಫರ್ ಮಾಡುವ ಫೈನಾನ್ಶಿಯಲ್ ಅಸ್ಸೆಟ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಉದಯ್ ಕೋಟಕ್ ಹೇಳುತ್ತಾರೆ.

ಬ್ಯಾಂಕಿನ ಗ್ರಾಹಕರು ಮೊಬೈಲ್ ಮೂಲಕ ಮಾಡುವ ಹಣ ವರ್ಗಾವಣೆ ಜೂನ್  ಅಂತ್ಯದ ವೇಳೆಗೆ ರೂ. 6,080 ಕೋಟಿ ತಲುಪಿದ್ದು ಇದು ಹಿಂದಿನ ವರ್ಷಕ್ಕೆ ಹೋಲಿಸಿದಾಗ ಶೇ. 115ರಷ್ಟು ಏರಿಕೆ ಕಂಡಿದೆ. ಆರ್ ಬಿ ಐ ಅಂಕಿಸಂಖ್ಯೆಗಳ ಪ್ರಕಾರ ಮೇ ತಿಂಗಳೊಂದರಲ್ಲಿಯೇ ಬ್ಯಾಂಕಿನ ಗ್ರಾಹಕರ ಮೊಬೈಲ್ ಮೂಲಕ ಹಣ ವ್ಯವಹಾರ ರೂ. 19 ಕೋಟಿಯಷ್ಟಾಗಿತ್ತು.

ಅಮಾನ್ಯೀಕರಣದಿಂದಾಗಿ ಟ್ರ್ಯಾಕ್ಟರ್ ಸಾಲಗಳಿಗೆ  ಹಾಗೂ ಚಿನ್ನದ ವಿರುದ್ಧ ಸಾಲದ ಬೇಡಿಕೆ ಅಲ್ಪಾವಧಿ ಕುಸಿತ  ಕಂಡಿದ್ದರೆ, ಕ್ರೆಡಿಟ್ ಕಾರ್ಡ್ ಗಳಿಗೆ ಬೇಡಿಕೆ ಹಾಗೂ ಚಾಲ್ತಿ ಖಾತೆಗಳಲ್ಲಿ  ಠೇವಣಿ ಅಧಿಕವಾಗಿತ್ತು ಎಂದು 2016-17ರ ತನ್ನ ವಾರ್ಷಿಕ ವರದಿಯಲ್ಲಿ ಬ್ಯಾಂಕ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News