ಹೇಟ್ ಟ್ರ್ಯಾಕರ್ ಎಂಬ ಹೊಸ ವೆಬ್ ಪೇಜ್ ಪ್ರಾರಂಭಿಸಿದ ಹಿಂದೂಸ್ತಾನ್ ಟೈಮ್ಸ್

Update: 2017-07-29 06:04 GMT

ಹೊಸದಿಲ್ಲಿ,ಜು.29 :  ದುಷ್ಕರ್ಮಿಗಳ ಗುಂಪೊಂದು ಮುಸ್ಲಿಂ ವ್ಯಕ್ತಿಯೊಬ್ಬ ಬೀಫ್  ಹೊಂದಿದ್ದಾನೆಂಬ ಸಂಶಯದಿಂದ ಆತನನ್ನು ಹೊಡೆದು ಸಾಯಿಸಿದರೆ, ಅದನ್ನು  ಕೊಲೆ ಪ್ರಕರಣವೆಂದು ದಾಖಲಿಸಲಾಗುತ್ತದೆ. ಈಶಾನ್ಯ ಪ್ರದೇಶದ ಅಥವಾ ಆಫ್ರಿಕಾದ ವಿದ್ಯಾರ್ಥಿಯೊಬ್ಬನನ್ನು  ನಿಂದಿಸಿದರೆ, ಇದನ್ನೊಂದು ಅಶ್ಲೀಲ ಕೃತ್ಯವೆಂದು ದಾಖಲಿಸಲಾಗುತ್ತದೆ. ಲೈಂಗಿಕ ಅಲ್ಪಸಂಖ್ಯಾತನೊಬ್ಬ ವಿಚಿತ್ರವಾಗಿ ಕಾಣುತ್ತಾನೆ ಅಥವಾ ವರ್ತಿಸುತ್ತಾನೆಂದು  ಆತನ ಮೇಲೆ ಹಲ್ಲೆ ನಡೆಸಿದರೆ ಅದನ್ನೊಂದು ಹಲ್ಲೆ ಪ್ರಕರಣವೆಂದು ದಾಖಲಿಸಲಾಗುತ್ತದೆ.

ಈ ಎಲ್ಲಾ ಪ್ರಕರಣಗಳಲ್ಲಿ ಹಿಂಸೆ ಅಥವಾ ದೌರ್ಜನ್ಯಕ್ಕೆ ಶಿಕ್ಷೆ ನೀಡಬಹುದಾದರೂ  ಧರ್ಮಾಂಧತೆಗೆ ಶಿಕ್ಷೆಯಿಲ್ಲ. ಇಂತಹ ದ್ವೇಷಪೂರಿತ ಅಪರಾಧಗಳನ್ನು ನಿಯಂತ್ರಿಸಲು ಕಾನೂನಿನ ಕೊರತೆಯಿದೆ.  ಪರಿಶಿಷ್ಟ ಜಾತಿ, ಪಂಗಡ  ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಮಾತ್ರ  ದಲಿತರ ಹಾಗೂ ಪರಿಶಿಷ್ಟ ಪಂಗಡಗಳ ಸದಸ್ಯರ ವಿರುದ್ಧ ನಡೆಯುವ ದೌರ್ಜನ್ಯಗಳಿಗೆ ಶಿಕ್ಷೆ ವಿಧಿಸಬಹುದಾಗಿದೆ.

ದ್ವೇಷದ ಶಕ್ತಿ ಮತ್ತು ಪ್ರಭಾವವೆಷ್ಟಿರಬಹುದೆಂಬುದು ಊಹಿಸಲು ಅಸಾಧ್ಯ. ಇಂತಹ ದ್ವೇಷಕೃತ್ಯಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಅಧಿಕೃತ ದಾಖಲೆಗಳೂ ಇಲ್ಲ. ಈ ನಿಟ್ಟಿನಲ್ಲಿರುವ ಶೂನ್ಯತೆಯನ್ನು ತುಂಬಲು ಹಿಂದುಸ್ತಾನ್ ಟೈಮ್ಸ್  ಹೊಸ ವೆಬ್ ಪೇಜ್  `ಹೇಟ್ ಟ್ರ್ಯಾಕರ್' ಪ್ರಾರಂಭಿಸಿದೆ. ಹಿಂಸೆ, ಬೆದರಿಕೆ ಹಾಗೂ ಜಾತಿ, ಧರ್ಮ, ಪಂಗಡ ಪ್ರಾಂತ್ಯ ಅಥವಾ ಲಿಂಗಾಧರಿತ ಹಿಂಸೆಗೆ ಉತ್ತೇಜನ ನೀಡುವ ಪ್ರಕರಣಗಳನ್ನು  ಈ ವೆಬ್ ಪೇಜ್ ದಾಖಲಿಸಲಿದೆ.

ಯಾವ ಪ್ರಕರಣವನ್ನು ದ್ವೇಷ ಕೃತ್ಯವೆಂದು ತಿಳಿಯಬೇಕೆನ್ನುವ ಸಲುವಾಗಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಈ ವೆಬ್ ಪೇಜ್ ಅನುಸರಿಸಲಿದೆ. ಸಂತ್ರಸ್ತರ ಧರ್ಮ, ಅವರ ಚರ್ಯೆ ಹಾಗೂ ಅಪರಾಧಿಗಳು ಉಪಯೋಗಿಸಿದ ಭಾಷೆಯ ಆಧಾರದಲ್ಲಿ ಅವುಗಳು ಧರ್ಮಾಧರಿತ ದ್ವೇಷ ಕೃತ್ಯವೇ ಎಂಬುದನ್ನು ನಿರ್ಧರಿಸಲಾಗುವುದು.

ಈ ವೆಬ್ ಪೇಜಿನಲ್ಲಿ ನೀಡಲಾಗುವ ದಾಖಲೆಗಳು, ಅಂಕಿಸಂಖ್ಯೆಗಳು ಇಂಗ್ಲಿಷ್ ಭಾಷೆಯ ಮಾಧ್ಯಮದಲ್ಲಿ ಹಾಗೂ ನಾಗರಿಕ ಸಂಘಟನೆಗಳ ಮೂಲಕ ತಿಳಿದುಕೊಂಡ ವರದಿಗಳ ಆಧಾರದಲ್ಲಿ ನೀಡಲಾಗುವುದು. ಆದರೆ ಈ ಮೂಲಗಳು ಕೂಡ ಸಾಕಾಗದು.

ಈ ನಿಟ್ಟಿನಲ್ಲಿ ಹಿಂದುಸ್ತಾನ್ ಟೈಮ್ಸ್ ಎಲ್ಲಾ ಓದುಗರಿಗೆ  ಇಂತಹ ದ್ವೇಷ ಕೃತ್ಯಗಳ ಬಗ್ಗೆ ಅವರಿಗೆ   ತಿಳಿದಿದ್ದಲ್ಲಿ ಅವುಗಳ ವರದಿಯನ್ನು ಕಳುಹಿಸಬಹುದು ಇಲ್ಲವೇ ತಮ್ಮದೇ ಅನುಭವಗಳನ್ನೂ ಹಂಚಬಹುದು. ಇದರಿಂದ ಈ ಹೇಟ್ ಟ್ರ್ಯಾಕರ್ ಮೂಲಕ ಒದಗಿಸಲಾಗುವ ಮಾಹಿತಿಯು ಇನ್ನಷ್ಟು ವಿಸ್ತಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News