50 ವರ್ಷಗಳ ಹಿಂದಿನ ಏರ್ ಇಂಡಿಯಾ ವಿಮಾನ ಅಪಘಾತದ ಮೃತರ ಅವಶೇಷ ಪತ್ತೆ?

Update: 2017-07-29 14:52 GMT

ಹೊಸದಿಲ್ಲಿ,ಜು.29: ಫ್ರೆಂಚ್ ಆಲ್ಪ್ಸ್ ಪರ್ವತಶ್ರೇಣಿಯ ಮೊಂಟ್ ಬ್ಲಾಂಕ್‌ನಲ್ಲಿ ಮಾನವ ದೇಹದ ಅವಶೇಷಗಳು ಪತ್ತೆಯಾಗಿವೆ. ಇವು 50 ವರ್ಷಗಳಿಗೂ ಹಿಂದೆ ಇಲ್ಲಿ ಸಂಭವಿಸಿದ್ದ ಎರಡು ಏರ್ ಇಂಡಿಯಾ ವಿಮಾನ ಅಪಘಾತಗಳಲ್ಲೊಂದರಲ್ಲಿ ಸತ್ತವರದ್ದಾ ಗಿರಬಹುದು ಎಂದು ಮೂಲಗಳು ತಿಳಿಸಿವೆ.

ವಿಮಾನ ಅಪಘಾತಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಡೇನಿಯಲ್ ರೋಶೆ ಅವರು ಅವಶೇಷಗಳಿಗಾಗಿ ವರ್ಷಗಳ ಕಾಲ ಬಾಸ್ಸನ್ಸ್ ನೀರ್ಗಲ್ಲು ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಗುರುವಾರ ಮಾನವ ದೇಹದ ಭಾಗಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಹಿಂದೆ ಅವರಿಗೆ ಮಾನವ ಅವಶೇಷಗಳು ಪತ್ತೆಯಾಗಿರಲಿಲ್ಲ. ಆದರೆ ಈಗ ಮಾನವ ದೇಹದ ಒಂದು ಕೈ ಮತ್ತು ಕಾಲಿನ ಮೇಲ್ಭಾಗ ಅವರ ಕಣ್ಣಿಗೆ ಬಿದ್ದಿವೆ.

1966,ಜನವರಿಯಲ್ಲಿ ಮುಂಬೈ(ಆಗ ಬಾಂಬೆ)ನಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸು ತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 707 ವಿಮಾನವು ಮೊಂಟ್ ಬ್ಲಾಂಕ್ ಶಿಖರದ ಬಳಿ ಪತನಗೊಂಡು ಅದರಲ್ಲಿದ್ದ ಎಲ್ಲ 117 ಜನರು ಮೃತಪಟ್ಟಿದ್ದರು. 1950ರಲ್ಲಿ ಇದೇ ಪರ್ವತದ ಮೇಲೆ ಏರ್ ಇಂಡಿಯಾದ ಇನ್ನೊಂದು ವಿಮಾನ ಪತನಗೊಂಡು 48 ಜನರು ಮೃತಪಟ್ಟಿದ್ದರು.

ತಾನು ಪತ್ತೆಹಚ್ಚಿರುವ ಅವಶೇಷಗಳು 1966ರ ಬೋಯಿಂಗ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಿಳೆಯದ್ದಾಗಿರಬಹುದು ಎಂದು ರೋಶೆ ಹೇಳಿದ್ದಾರೆ. ಅವರು ವಿಮಾನದ ನಾಲ್ಕು ಜೆಟ್ ಇಂಜಿನ್‌ಗಳ ಪೈಕಿ ಒಂದನ್ನೂ ಪತ್ತೆ ಹಚ್ಚಿದ್ದಾರೆ.

ರೋಶೆ ನೀಡಿದ ಮಾಹಿತಿಯಂತೆ ಸ್ಥಳೀಯ ತುರ್ತುಸೇವೆ ಘಟಕವು ಹೆಲಿಕಾಪ್ಟರ್ ಮೂಲಕ ಮಾನವ ಅವಶೇಷಗಳನ್ನು ಸಾಗಿಸಿದ್ದು, ಅವುಗಳನ್ನು ತಜ್ಞರು ಪರೀಕ್ಷಿಸಲಿದ್ದಾರೆ.

ಈ ಅವಶೇಷಗಳು ಬಹುಶಃ ಒಂದೇ ವ್ಯಕ್ತಿಗೆ ಸೇರಿದ್ದಲ್ಲ. ಅವು ಎರಡು ವಿಮಾನಗಳ ಪೈಕಿ ಒಂದರ ಪ್ರಯಾಣಿಕರದ್ದಾಗಿರಬಹುದು. ಆದರೆ ಯಾವ ವಿಮಾನ ಎಂದು ಹೇಳುವುದು ಕಷ್ಟ ಎಂದು ಸ್ಥಳೀಯ ಅಧಿಕಾರಿ ಸ್ಟೆಫಾನೆ ಬೊರೊನ್ ಹೇಳಿದ್ದಾರೆ.

10 ದಿನಗಳ ಹಿಂದಷ್ಟೇ ಸ್ವಿಸ್ ಆಲ್ಪ್ಸ್‌ನ ಡಾಯಾಬ್ಲೆರೆಟ್ಸ್ ನೀರ್ಗಲ್ಲು ಪ್ರದೇಶದಲ್ಲಿ ಅಕ್ಕಪಕ್ಕದಲ್ಲಿ ಬಿದ್ದುಕೊಂಡಿದ್ದ ಎರಡು ಶವಗಳು ಪತ್ತೆಯಾಗಿದ್ದವು. ಈ ಶವಗಳು 75ವರ್ಷ ಗಳ ಹಿಂದೆ ಆಲ್ಪ್ಸ್‌ನಿಂದ ಕಾಣೆಯಾಗಿದ್ದ ಶೂ ತಯಾರಕ ಮರ್ಸೆಲಿನ್ ಡುಮಾವ್ಲಿನ್ (40) ಮತ್ತು ಶಾಲಾ ಶಿಕ್ಷಕಿಯಾಗಿದ್ದ ಆತನ ಪತ್ನಿ ಫ್ರಾನ್ಸಿನೆ(37) ಅವರದ್ದು ಎಂದು ಡಿಎನ್‌ಎ ಪರೀಕ್ಷೆಯಿಂದ ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News