ವಿರೋಧ ಮುಕ್ತ ಭಾರತದೆಡೆಗೆ ಮತ್ತೊಂದು ಹೆಜ್ಜೆ

Update: 2017-07-31 04:54 GMT

ಯೋಜಿತ ಮ್ಯಾಚ್ ಫಿಕ್ಸಿಂಗ್‌ನ ಭಾಗವಾಗಿ ದೇಶದಲ್ಲಿ ನಡೆಯುತ್ತಿರುವ ರಾಜಕೀಯದಾಟದಲ್ಲಿ ಕಳೆದ ಎರಡು ದಿನಗಳಲ್ಲಿ ಬಿಜೆಪಿ ವಿರೋಧಿ ಪಾಳಯದ ಇನ್ನೂ 5 ವಿಕೆಟ್‌ಗಳು ಉದ್ದೇಶಪೂರ್ವಕವಾಗಿ ಹಿಟ್ ವಿಕೆಟ್ ಆಗಿವೆ. ಗುಜರಾತ್‌ನ ಮೂವರು ಕಾಂಗ್ರೆಸ್ ಶಾಸಕರು ಮತ್ತು ಉತ್ತರ ಪ್ರದೇಶದ ಇಬ್ಬರು ಎಸ್ಪಿ ಮತ್ತು ಒಬ್ಬರು ಬಿಎಸ್ಪಿ ಶಾಸಕರು ತಮ್ಮ ಸ್ಥಾನವನ್ನು ಬಿಜೆಪಿ ಮುಖ್ಯಮಂತ್ರಿಯ ಪದತಲಕ್ಕೆ ಸಮರ್ಪಣೆ ಮಾಡಿದ್ದಾರೆ.

ಇದೇ ಆಗಸ್ಟ್ 8ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮೊದಲು ಇನ್ನು ಹಲವಾರು ವಿರೋಧ ಪಕ್ಷಗಳ ಶಾಸಕರು ಬಿಜೆಪಿಯ ಪದತಲದಲ್ಲಿ ತಮ್ಮ ಶಾಸಕತ್ವವನ್ನು ಮತ್ತು ಈ ದೇಶದ ಪ್ರಜಾತಂತ್ರದ ಘನತೆ ಗೌರವಗಳನ್ನು ಅಡವಿಡಲಿದ್ದಾರೆಂಬ ದಟ್ಟ ಗುಮಾನಿಯಿದೆ. 2008ರಲ್ಲೇ ಆಪರೇಷನ್ ಕಮಲದ ಕೆಸರನ್ನು ಎರಚಿಸಿಕೊಂಡಿರುವ ಕರ್ನಾಟಕದ ಜನಕ್ಕೆ ಬಿಜೆಪಿಯ ಈ ಚಾಳಿಯ ಬಗ್ಗೆ ಆಶ್ಚರ್ಯವೇನೂ ಆಗುತ್ತಿಲ್ಲ. ಆದರೆ ಶಾ ಹಾಗೂ ಮೋದಿ ಕೂಟ ಕೇಂದ್ರದಲ್ಲಿ ಅಧಿಕಾರ ಪಡೆದ ಆನಂತರ ನಡೆಸುತ್ತಿರುವ ಈ ಆಪರೇಷನ್ ಕಮಲದ ಉದ್ದೇಶ ಮತ್ತು ವ್ಯಾಪ್ತಿ ಕರ್ನಾಟಕ ಕಂಡ ಆಪರೇಷನ್ ಕಮಲಕ್ಕಿಂತ ತುಂಬಾ ಭಿನ್ನವಾದುದಾಗಿದೆ ಮತ್ತು ಅದು ಪ್ರಜಾತಂತ್ರದ ಬಗ್ಗೆ ಕಾಳಜಿಯುಳ್ಳ ಎಲ್ಲರಲ್ಲೂ ಕಳವಳ ಉಂಟುಮಾಡುತ್ತಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿದ ನಂತರ ಸಂಘಪರಿವಾರ ಮತ್ತು ಬಿಜೆಪಿ ಇಡೀ ಭಾರತದ ಸಾಂವಿಧಾನಾತ್ಮಕ ಪ್ರಜಾತಂತ್ರದ ಚಹರೆಯನ್ನೇ ಬದಲಿಸುವ ಉದ್ದೇಶದಿಂದ ತನ್ನ ರಾಜಕೀಯ ಯೋಜನೆಗಳನ್ನು ಹೆಣೆಯುತ್ತಿವೆ. ಮೊದಲು ಭ್ರಷ್ಟಾಚಾರ ವಿರೋಧದ ಹೆಸರಲ್ಲಿ ತನ್ನ ಈ ಹೊಸ ದಾಳಿಯನ್ನು ಹೊಸೆದ ಬಿಜೆಪಿ ಇದಕ್ಕೆ ಗುರಿಯಾಗಿಸಿಕೊಂಡಿದ್ದು ತನ್ನ ಪ್ರಮುಖ ರಾಜಕೀಯ ಎದುರಾಳಿಯಾದ ಕಾಂಗ್ರೆಸನ್ನು ಮಾತ್ರ. ಕಾಂಗ್ರೆಸ್ ಕೂಡ ತನ್ನ ಪರಮ ಭ್ರಷ್ಟ ಆಡಳಿತದ ಮೂಲಕ ಬಿಜೆಪಿಯ ದಾಳಿಗೆ ಮಾನ್ಯತೆಯನ್ನು ಒದಗಿಸಿಕೊಟ್ಟಿತು. ಆದರೆ ಬಿಜೆಪಿಯ ಈ ಇಡೀ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಮತ್ತು ಆನಂತರದ ಚುನಾವಣೆಗೆ ಧನ ಸಹಾಯ ಮಾಡಿದ್ದೇ ದೇಶ ಕಂಡ ಅತ್ಯಂತ ಭ್ರಷ್ಟ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಗಳಂಥವರೆಂಬುದನ್ನು ಅಬ್ಬರದ ಕಾಂಗ್ರೆಸ್ ವಿರೋಧಿ ಪ್ರಚಾರ ಮರೆಸಿಬಿಟ್ಟಿತು. ಹಾಗೆಯೇ ಬಿಜೆಪಿ ಅಧಿಕಾರದಲ್ಲಿದ್ದ ಕರ್ನಾಟಕ , ಗುಜರಾತ್, ಛತ್ತೀಸ್‌ಗಡ, ಮಧ್ಯಪ್ರದೇಶಗಳಂತಹ ರಾಜ್ಯಗಳಲ್ಲಿ ಬಿಜೆಪಿ ನಡೆಸಿದ ಹಗಲು ದರೋಡೆಗಳು ಹಲವೆಡೆ ಕಾಂಗ್ರೆಸ್‌ಗೆ ಸರಿಸಮವಾಗಿಯೂ, ಇನ್ನು ಕೆಲವೆಡೆ ಕಾಂಗ್ರೆಸನ್ನು ಮೀರಿಸುವಂತೆ ಇದ್ದರೂ ಜನತೆ ಅದರ ಬಗ್ಗೆ ಗಮನವಹಿಸದಂತೆ ಮಾಡುವಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಬೌದ್ಧಿಕ ಮತ್ತು ಪ್ರಚಾರ ವಿಭಾಗಗಳು ಯಶಸ್ವಿಯಾದವು.

ಹೀಗಾಗಿ ಭ್ರಷ್ಟಾಚಾರ ಮುಕ್ತ ಭಾರತ ಎಂದಿದ್ದ ಘೋಷಣೆ ನಿಧಾನವಾಗಿ ಕಾಂಗ್ರೆಸ್ ಮುಕ್ತ ಭಾರತ ಎಂದಾಯಿತು. ಅದರ ಭಾಗವಾಗಿ ಎಲ್ಲೆಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿತ್ತೋ ಅಲ್ಲೆಲ್ಲ ಬಿಜೆಪಿ ಸಾಮ, ದಾನ, ಭೇದ ಮತ್ತು ದಂಡೋಪಾಯಗಳನ್ನು ಬಳಸಿ ಕಾಂಗ್ರೆಸ್‌ನ ಅಸ್ತಿತ್ವವನ್ನು ನಿರ್ನಾಮ ಮಾಡಲು ಮುಂದಾಯಿತು. ನೇರವಾಗಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನೇ ಒಳಗಿಂದ ಒಡೆದು ಹೋಳು ಮಾಡುವ ಅಪ್ರಜಾತಾಂತ್ರಿಕ ಯೋಜನೆಯನ್ನು ಹೂಡಿತು. ಅದರ ಭಾಗವಾಗಿಯೇ ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಅಳುವ ಸರಕಾರದಲ್ಲಿ ಒಡಕು ತಂದು ಪರೋಕ್ಷವಾಗಿ ಅಧಿಕಾರ ಹಿಡಿಯಲು ಯತ್ನಿಸಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿತು.

ಆನಂತರ ಆ ರಾಜ್ಯಗಳಲ್ಲಿ ಚುನಾವಣೆ ನಡೆದಾಗ ತನ್ನ ಧನ ಬಲ, ಅಧಿಕಾರ ಬಲ, ಸಿಬಿಐ ಬಲ ಇತ್ಯಾದಿಗಳನ್ನು ಬಳಸಿ, ಹಲವು ತಂತ್ರೋಪಾಯಗಳ ಮೂಲಕ ಕಾಂಗ್ರೆಸ್ ಪಕ್ಷವನ್ನೇ ಉದ್ದುದ್ದ ಸೀಳಿ ತನ್ನೆಡೆಗೆ ಸೆಳೆದುಕೊಂಡಿತು. ಕೆಲವು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮಣಿಪುರ ಹಾಗೂ ಗೋವಾ ರಾಜ್ಯಗಳಲ್ಲಿ ಸೋತರೂ ಈ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಿತು. ಇದೆಲ್ಲ ಸಾಧ್ಯವಾಗಲು ತನ್ನ ಪಕ್ಷದ ಹಿರಿಯರನ್ನು ಅಥವಾ ಆರೆಸ್ಸೆಸ್‌ನಿಂದ ಬಿಜೆಪಿಗೆ ಕಳಿಸಲ್ಪಟ್ಟಿದ್ದ ತಂತ್ರಿಗಳನ್ನು ಆಯಕಟ್ಟಿನ ರಾಜ್ಯಗಳಲ್ಲಿ ರಾಜ್ಯಪಾಲರನ್ನಾಗಿ ನೇಮಿಸಿತು. ಉದಾಹರಣೆಗೆ ಬಿಜೆಪಿಯ ಈಶಾನ್ಯ ರಾಜ್ಯಗಳ ಉಸ್ತುವಾರಿಯಾಗಿದ್ದ ಬಿಪಿ ಆಚಾರ್ಯ ಅವರನ್ನು ನಾಗಾಲ್ಯಾಂಡಿನ ರಾಜ್ಯಪಾಲರನ್ನಾಗಿ ಮಾಡಿದ್ದರಿಂದಲೇ ಅಲ್ಲಿ ಅಧಿಕಾರದಲ್ಲಿದ್ದ ಎನ್‌ಪಿಎಫ್ ಪಕ್ಷ ಇದ್ದಕ್ಕಿದ್ದಂತೆ ಅಧಿಕಾರ ಕಳೆದುಕೊಳ್ಳುವಂತಾಯಿತು ಹಾಗೂ ಅಲ್ಲಿ ಹೋದ ತಿಂಗಳು ಬಿಜೆಪಿಯ ಸಹಯೋಗದಲ್ಲಿ ಒಂದು ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಿತು.

ಇದು ಕೇವಲ ಕಾಂಗ್ರೆಸ್‌ಗೆ ಮಾತ್ರ ಆಗುತ್ತಿರುವ ಗತಿಯಲ್ಲ. ಯಾವ್ಯಾವ ಪ್ರಾದೇಶಿಕ ಪಕ್ಷಗಳ ಜೊತೆ ಬಿಜೆಪಿ ಕಿರಿಯ ಪಾಲುದಾರನಾಗಿ ಅಧಿಕಾರ ಹಂಚಿಕೊಳ್ಳುತ್ತದೋ ಅಲ್ಲೆಲ್ಲ ಕ್ರಮೇಣವಾಗಿ ಆ ಪಕ್ಷಗಳನ್ನು ನುಂಗಿ ಹಾಕಿ ತಾನೇ ಅಧಿಕಾರಕ್ಕೆ ಬರುತ್ತಿದೆ. ಕರ್ನಾಟಕದ ಜೆಡಿಎಸ್, ಮಹಾರಾಷ್ಟ್ರದ ಶಿವಸೇನೆ, ಒಡಿಶಾದ ಬಿಜು ಜನತಾದಳ ಎಲ್ಲಕ್ಕೂ ಈ ಅನುಭವ ಆಗಿದೆ. ಹೀಗಾಗಿ ಬಿಜೆಪಿಯ ಗುರಿಯಿರುವುದು ಕೇವಲ ಕಾಂಗ್ರೆಸ್ ಮುಕ್ತ ಭಾರತವಲ್ಲ. ಬದಲಿಗೆ ವಿರೋಧ ಪಕ್ಷ ಮುಕ್ತ ಭಾರತ ವೇ ಅದರ ಗುರಿ ಇರಬೇಕೆಂದು ಭಾವಿಸುವಂತಾಗಿದೆ . ಆದರೆ ಭಾರತದ ಸಾಂವಿಧಾನಾತ್ಮಕ ಪ್ರಜಾತಂತ್ರದ ಬಗ್ಗೆ ಅದಕ್ಕಿರುವ ಅಪಾರ ತಿರಸ್ಕಾರವನ್ನು ಗಮನಿಸಿದವರಿಗೆ ಬಿಜೆಪಿಯ ಅಂತಿಮ ಗುರಿ ಕೇವಲ ವಿರೋಧ ಪಕ್ಷ ಮುಕ್ತ ಭಾರತ ಅಲ್ಲ ಎಂಬುದು ಗೋಚರಿಸುತ್ತಿದೆ. ಬದಲಿಗೆ ತನ್ನ ಆರ್ಥಿಕ ಮತ್ತು ರಾಜಕೀಯ ಸರ್ವಾಧಿಕಾರಕ್ಕೆ ಯಾವುದೇ ಬಗೆಯ ಭಿನ್ನಮತವಿರದ, ವಿರೋಧ ಅಥವಾ ಭಿನ್ನಮತ ಮುಕ್ತ ಭಾರತವೇ ಅದರ ಗುರಿಯೆಂಬುದು ಅಂಥವರ ಅಭಿಪ್ರಾಯ.

ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಬಿಜೆಪಿ ನಡೆಸುತ್ತಿರುವ ಹವಣಿಕೆ ಮತ್ತು ತಂತ್ರಗಳು ಇದನ್ನು ಇನ್ನಷ್ಟು ಮುನ್ನೆಲೆಗೆ ತಂದಿದೆ. ಭಾರತದ ಸಾಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಒಂದು ಕೇಂದ್ರೀಯ ಮಸೂದೆ ಪಾಸಾಗಲು ಲೋಕಸಭೆ ಮತ್ತು ರಾಜ್ಯಸಭೆಗಳೆರೆಡರಲ್ಲೂ ಬಹುಮತದ ಅನುಮತಿ ಸಿಗಬೇಕು. 1991ರಲ್ಲಿ ಭಾರತವು ದೇಶಿಯ ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಜಾಗತೀಕರಣ ನೀತಿಗಳನ್ನು ಜಾರಿಗೆ ತಂದ 25 ವಷಗಳ ಆನಂತರ ಮೊದಲ ಬಾರಿಗೆ ಲೋಕಸಭೆಯಲ್ಲಿ ಒಂದೇ ಪಕ್ಷಕ್ಕೆ ಬಹುಮತ ದೊರಕಿದೆ.

ಈ ಬಗೆಯ ಬಹುಮತವಿರದಿದ್ದ ಕಾರಣದಿಂದಾಗಿಯೇ ಈವರೆಗೆ ಯಾವ ಸರಕಾರವೂ ಜಾಗತೀಕರಣ ನೀತಿಯ ಭಾಗವಾದ ಹಲವು ಜನವಿರೋಧಿ ಕೃಷಿ, ಕೈಗಾರಿಕೆ ಮತ್ತು ಕಾರ್ಮಿಕ ನೀತಿಗಳನ್ನು ಜಾರಿಗೆ ತರಲಾಗಿರಲಿಲ್ಲ. ಈಗ ಅಗತ್ಯವಿದ್ದ ದೈತ್ಯ ಬಹುಮತವನ್ನು ಪಡೆದಿರುವ ಬಿಜೆಪಿ ಈ ಎಲ್ಲ ನೀತಿಗಳನ್ನು ಜಾರಿಗೆ ತಂದು ತನ್ನ ಬೆನ್ನಿಗೆ ನಿಂತಿದ್ದ ಅಂಬಾನಿ ಮತ್ತು ಅದಾನಿಗಳ ಋಣ ತೀರಿಸಿಕೊಳ್ಳಲು ಸಜ್ಜಾಗಿದೆ ಎಂದು ಹಲವಾರು ರಾಜಕೀಯ ವೀಕ್ಷಕರು ಅಭಿಪ್ರಾಯಪಡುತ್ತಾರೆ. ಆದರೆ ಅದಕ್ಕೆ ಲೋಕಸಭೆಯಲ್ಲಿ ಬಹುಮತವಿದ್ದರೂ 245 ಸದಸ್ಯತ್ವ ವಿರುವ ರಾಜ್ಯಸಭೆಯಲ್ಲಿ ಬಹುಮತವಿಲ್ಲ. ಅಲ್ಲಿ ಈವರೆಗೆ ಕಾಂಗ್ರೆಸ್‌ಗೆ 59 ಸದಸ್ಯ ಬಲವಿದ್ದರೆ ಬಿಜೆಪಿಗೆ 56 ಸದಸ್ಯ ಬಲವಿತ್ತು .

ಒಟ್ಟಾರೆ ಎನ್‌ಡಿಎಗೆ 77 ಬಲವಿದ್ದರೆ ಕಾಂಗ್ರೆಸ್ ೇತೃತ್ವದ ಯುಪಿಎಗೆ 84 ಎಂಪಿಗಳ ಬಲವಿತ್ತು. ಆದರೆ ಮೇಲೆ ವಿವರಿಸಿದಂತೆ ಒಂದೊಂದೇ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ವಶಪಡಿಸಿಕೊಳ್ಳುತ್ತಿದ್ದಂತೆ ಅಥವಾ ಆಡಳಿತ ರೂಢ ಪಕ್ಷಗಳನ್ನು ಎನ್‌ಡಿಎ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ಯುಪಿಎ ಬಲ ಕುಸಿಯುತ್ತಿದ್ದು ಎನ್‌ಡಿಎ ಬಲ ಹೆಚ್ಚುತ್ತಿದೆ. ಅದರಲ್ಲೂ ನಿತೀಶ್ ಕುಮಾರರ ಜೆಡಿಯು ಎನ್‌ಡಿಎ ಸೇರಿದ ನಂತರ ರಾಜ್ಯಸಭೆಯಲ್ಲಿ ಯುಪಿಎ ಬೆಂಬಲಿಸುತ್ತಿದ್ದ ಸಂಸದರ ಸಂಖ್ಯೆ 9 ರ ಷ್ಟು ಇಳಿಕೆಯಾಗಿದೆ ಮತ್ತು ಎನ್‌ಡಿಎ ಬಲ ಅಷ್ಟರ ಮಟ್ಟಿಗೆ ಹೆಚ್ಚಿದೆ. ಆಗಸ್ಟ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಸಂಖ್ಯೆಯನ್ನು ಕಡಿಮೆ ಮಾಡಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಎಲ್ಲ ಕಸರತ್ತುಗಳನ್ನು ಬಿಜೆಪಿ ಮಾಡುತ್ತಿದೆ. ಅದಕ್ಕೆ ಬಿಜೆಪಿ ಅಧ್ಯಕ್ಷ ಶಾ ಅವರನ್ನು ಗೆಲ್ಲಿಸಿಕೊಂಡು ಬಿಎಸ್ಪಿಯ ನಾಯಕಿ ಮಾಯಾವತಿ ಮತ್ತು ಕಾಂಗ್ರೆಸ್ ನ ಅಹ್ಮದ್ ಪಟೇಲ್ ಗೆಲ್ಲದಂತೆ ಮಾಡುವ ತುರ್ತು ಉದ್ದೇಶವು ಇದೆ. ಈಗಾಗಲೇ ರಾಜ್ಯಸಭೆಯಲ್ಲಿ ಸಮಬಲವನ್ನು ಸಾಧಿಸುವತ್ತ ದಾಪುಗಾಲಿಡುತ್ತಿರುವ ಬಿಜೆಪಿಗೆ ಮುಂದಿನ ಎರಡು ವರ್ಷಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ನಿರೀಕ್ಷಿತ ಗೆಲುವನ್ನು ತಂದುಕೊಟ್ಟರೆ ರಾಜ್ಯಸಭೆಯಲ್ಲೂ ಬಹುಮತ ದೊರೆಯಲಿದೆ.

ಆಗ ಭಾರತದ ರಾಜಕಾರಣದಲ್ಲಿ 40 ವರ್ಷಗಳ ನಂತರ ಒಂದೇ ಪಕ್ಷಕ್ಕೆ ಲೋಕಸಭೆಯಲ್ಲೂ, ರಾಜ್ಯಸಭೆಯಲ್ಲೂ ಮತ್ತು ಬಹುಪಾಲು ವಿಧಾನಸಭೆಗಳಲ್ಲೂ ಬಹುಮತವಿರುವ ಸಂದರ್ಭವು ಉದ್ಭವಿಸುತ್ತದೆ. ಆಗ ಕೇವಲ ಹೊಸ ಕಾನೂನುಗಳನ್ನು ತರುವುದು ಮಾತ್ರವಲ್ಲದೆ ಈ ದೇಶದ ಪ್ರಜಾತಂತ್ರದ ಚಹರೆಯನ್ನೇ ಸಾಂವಿಧಾನಿಕವಾಗಿ ತಿದ್ದಿಬಿಡಬಹುದಾದ ಅವಕಾಶವೂ ದಕ್ಕುತ್ತದೆ. ಇಂತಹ ಸನ್ನಿವೇಶ ಸ್ವಾತಂತ್ರ ಹೋರಾಟದ ನಂತರದಲ್ಲಿ ಅಧಿಕಾರ ಪಡೆದ ಕಾಂಗ್ರೆಸ್‌ಗಿತ್ತು. ಅದು ಕೂಡ ತನ್ನ ಅಧಿಕಾರವನ್ನು ಹೇಗೆ ದುರ್ಬಳಕೆ ಮಾಡಿಕೊಂಡಿತ್ತೆಂಬುದನ್ನು ದೇಶ ಕಂಡಿದೆ. ಆದರೇ ಈಗ ಆ ಬಗೆಯ ಸಾಂವಿಧಾನಿಕ ಅಧಿಕಾರವು, ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಬಹಿರಂಗವಾಗಿಯೇ ತಿರಸ್ಕಾರ ವ್ಯಕ್ತಪಡಿಸುವ ಮತ್ತು ಸಂವಿಧಾನದ ಮೌಲ್ಯಗಳಿಗೆ ತದ್ವಿರುದ್ಧವಾದ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷವೊಂದಕ್ಕೆ ದಕ್ಕುವ ಸಾಧ್ಯತೆ ಇದೆ. ಇದು ಅತ್ಯಂತ ಕಳವಳ ಉಂಟುಮಾಡುವ ಸಂಗತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News