ನರೇಂದ್ರ ಮೋದಿ ‘ಆಧುನಿಕ ಭಸ್ಮಾಸುರ’: ವಿ.ಎಸ್.ಉಗ್ರಪ್ಪ

Update: 2017-07-31 12:07 GMT

ಬೆಂಗಳೂರು, ಜು.31: ಜನಸಾಮಾನ್ಯರನ್ನು ಪ್ರತಿಯೊಂದು ವಿಷಯದಲ್ಲೂ ದಾರಿತಪ್ಪಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ವರ್ತನೆಯನ್ನು ನೋಡಿದರೆ ಅವರು ಆಧುನಿಕ ಭಸ್ಮಾಸುರರಂತೆ ಕಾಣುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದ ಬಳಿಕ ಜನಸಾಮಾನ್ಯರು ಬಳಸುವ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಕಡಿಮೆಯಾಗಿವೆ ಎಂದು ಪ್ರಧಾನಿ ನರೇಂದ್ರಮೋದಿ ‘ಮನ್ ಕೀ ಬಾತ್’ನಲ್ಲಿ ಸಂತಸ ವ್ಯಕ್ತಪಡಿಸಿದ್ದನ್ನು ಟೀಕಿಸಿದರು.

ಟೊಮಾಟೋ ಪ್ರತಿ ಕೆಜಿಗೆ 50 ರೂ.ಆಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಈ ರೀತಿಯ ಹೇಳಿಕೆಗಳನ್ನು ಹೇಗೆ ನೀಡಲು ಸಾಧ್ಯ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಕಡಿಮೆಯಾಗಿಲ್ಲ. ಜನಸಾಮಾನ್ಯರ ದಿನನಿತ್ಯದ ಜೀವನ ನಿರ್ವಹಣೆಗೆ ಅಗತ್ಯವಿರುವ ತರಕಾರಿ, ದಿನಸಿ, ಬಸ್, ರೈಲುಗಳ ಪ್ರಯಾಣ ದರ, ಪೆಟ್ರೋಲ್, ಡಿಸೇಲ್, ಹೊಟೇಲ್‌ಗಳಲ್ಲಿನ ತಿಂಡಿ ಸೇರಿದಂತೆ ಯಾವ ಬೆಲೆಗಳು ಕಡಿಮೆಯಾಗಿಲ್ಲ ಎಂದು ಉಗ್ರಪ್ಪ ಹೇಳಿದರು.

139 ಡಾಲರ್‌ನಷ್ಟಿದ್ದ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರವು ನರೇಂದ್ರಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ 40-45 ಡಾಲರ್‌ಗೆ ಕುಸಿಯಿತು. ಆದರೆ, ಈ ಉಳಿತಾಯದ ಹಣವನ್ನು ಜನರ ಕಲ್ಯಾಣಕ್ಕೆ ಕೇಂದ್ರ ಸರಕಾರ ವಿನಿಯೋಗಿಸಲು ಮುಂದಾಗಿಲ್ಲ. ಮೋದಿ ಕೈ ಇಟ್ಟ ಕಡೆಯಲ್ಲ ಭಸ್ಮವಾಗುತ್ತಿದೆ ಎಂದು ಅವರು ದೂರಿದರು.

ಸಿಬಿಐ, ಜಾರಿ ನಿರ್ದೇಶನಾಲಯ ಸೇರಿದಂತೆ ಸಂವಿಧಾನಬದ್ಧವಾಗಿರುವ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲು ಮಾಡುತ್ತಿರುವ ನರೇಂದ್ರಮೋದಿ, ದೇಶದ ‘ಅನಧಿಕೃತ’ ಸರ್ವಾಧಿಕಾರಿಯಾಗಿದ್ದಾರೆ ಎಂದು ಉಗ್ರಪ್ಪ ಟೀಕಿಸಿದರು.
ಬಿಹಾರದಲ್ಲಿ ಲಾಲುಪ್ರಸಾದ್ ಯಾದವ್ ಕುಟುಂಬದವರಿಗೆ ಸಿಬಿಐ ಮೂಲಕ ನೋಟಿಸ್ ನೀಡಿಸುತ್ತಾರೆ. ಆ ಸಂಜೆಯೆ ಅಲ್ಲಿನ ಮುಖ್ಯಮಂತ್ರಿ ನಿತೀಶ್‌ಕುಮಾರ್ ರಾಜೀನಾಮೆ ನೀಡುತ್ತಾರೆ. ಮರುದಿನ ಬೆಳಗ್ಗೆ ಬಿಜೆಪಿ ಜೊತೆ ಕೈ ಸೇರಿ ಅಧಿಕಾರದ ಚುಕ್ಕಾಣಿ ಹಿಡಿಯಲಾಗುತ್ತದೆ ಎಂದು ಅವರು ಆರೋಪಿಸಿದರು.

ಗುಜರಾತ್‌ನಲ್ಲಿರುವ ಬಿಜೆಪಿ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿದೆ. ಆದುದರಿಂದ, 2008ರಲ್ಲಿ ಯಾವ ರೀತಿ ನಮ್ಮ ರಾಜ್ಯದಲ್ಲಿ ‘ಆಪರೇಷನ್ ಕಮಲ’ ಮಾಡಲಾಗಿತ್ತೊ, ಅದನ್ನ ಇಡೀ ದೇಶದಲ್ಲಿ ವಿಸ್ತರಿಸಲು ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಾಗಿದ್ದಾರೆ ಎಂದು ಉಗ್ರಪ್ಪ ಟೀಕಿಸಿದರು.

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಯ ಮೂರು ಅಭ್ಯರ್ಥಿಗಳು ಸಂಖ್ಯಾಬಲದ ಕೊರತೆ ಇದ್ದರೂ ಗೆಲುವು ಸಾಧಿಸುತ್ತಾರೆ ಎಂದು ‘ಆಪರೇಷನ್ ಕಮಲ’ದ ಜನಕ ಯಡಿಯೂರಪ್ಪ ಲಜ್ಜೆಗೇಡಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಗುಜರಾತ್‌ನಲ್ಲಿ ಶಾಸಕರ ಕುದುರೆ ವ್ಯಾಪಾರ ಮಾಡಲಾಗುತ್ತಿದೆ. ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಅಧಿಕಾರಕ್ಕಾಗಿ ಏನುಬೇಕಾದರೂ ಮಾಡಬಹುದು ಎಂಬುದು ಇವರ ಪ್ರವೃತ್ತಿ. ಗುಜರಾತಿನಲ್ಲಿ ಜನಾದೇಶ, ಸಂವಿಧಾನದ ವಿರುದ್ಧವಾಗಿ ನರೇಂದ್ರಮೋದಿ, ಅಮಿತ್ ಶಾ ನಡೆದುಕೊಳ್ಳುತ್ತಿದ್ದಾರೆ ಎಂದು ಉಗ್ರಪ್ಪ ಕಿಡಿಗಾರಿದರು.

ನರೇಂದ್ರಮೋದಿ ಹಾಗೂ ಅಮಿತ್‌ಶಾ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ದೇಶದ ಜನತೆ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಉಗ್ರಪ್ಪ ಹೇಳಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News