ಕೇರಳ ರಾಜಕೀಯ ಗ್ಯಾಂಗ್‌ವಾರ್: ಆರೆಸ್ಸೆಸ್‌ನ ಪಾತ್ರವೆಷ್ಟು?

Update: 2017-08-01 18:53 GMT

ಸಿಪಿಎಂ ಮತ್ತು ಆರೆಸ್ಸೆಸ್ ನಡುವಿನ ‘ಗ್ಯಾಂಗ್‌ವಾರ್’ಗಳು ತಾರಕಕ್ಕೇರಿವೆ. ಇದರ ಗಂಭೀರತೆಯನ್ನು ಅರಿತುಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದೀಗ ಸಿಪಿಎಂ, ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರ ಸಭೆ ನಡೆಸಿದ್ದಾರೆ. ದಕ್ಷಿಣ ಭಾರತದಲ್ಲಿ ಮನುವಾದಿ ಸಿದ್ಧಾಂತವನ್ನು ಹೊಂದಿರುವ ಆರೆಸ್ಸೆಸ್‌ಗೆ ಪುಟ್ಟ ಕೇರಳ ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಹುಶಃ ವೈದಿಕ ಶಾಹಿ ಮತ್ತು ಬಂಡವಾಳಶಾಹಿಯ ಅತೀ ಕ್ರೂರ ದಮನಕ್ಕೆ ಒಳಗಾಗಿರುವ ಇತಿಹಾಸ ಹೊಂದಿರುವ ರಾಜ್ಯ ಕೇರಳ. ಆ ಹಿಂಸೆಯ ಗಾಯಗಳು ಇನ್ನೂ ಸ್ಮತಿ ಪಟಲದಲ್ಲಿರುವುದರಿಂದಲೇ ಬಹುಶಃ ಬಿಜೆಪಿ ಅಥವಾ ಆರೆಸ್ಸೆಸ್‌ಗೆ ಕೇರಳ ನೆಲದಲ್ಲಿ ಬಲವಾಗಿ ಬೇರೂರುವುದಕ್ಕೆ ಸಾಧ್ಯವಾಗುತ್ತಿಲ್ಲ.

ಆದರೆ, ಆರೆಸ್ಸೆಸ್ ಸಿದ್ಧಾಂತ ತನ್ನ ಸರ್ವ ಹಿಂಸಾಶಕ್ತಿಯನ್ನು ಬಳಸಿಕೊಂಡು ಕೇರಳದೊಳಗೆ ಪ್ರಾಬಲ್ಯವನ್ನು ಸ್ಥಾಪಿಸಲು ಹವಣಿಸುತಿದೆ. ಮತ್ತು ಅಷ್ಟೇ ತೀವ್ರವಾದ ಪ್ರತಿಭಟನೆಯನ್ನು ಕೇರಳವೂ ಆರೆಸ್ಸೆಸ್‌ಗೆ ಒಡ್ಡುತ್ತಿದೆ. ಪರಿಣಾಮವಾಗಿ ಕೇರಳ ರಾಜ್ಯವು ಆರೆಸ್ಸೆಸ್ ಮತ್ತು ಸಿಪಿಎಂ ನಡುವಿನ ಹಿಂಸಾಕಣವಾಗಿ ಪರಿವರ್ತನೆಗೊಂಡಿದೆ. ಕೇರಳದ ಈ ಹಿಂಸಾಚರಿತ್ರೆಯನ್ನು ಅಧ್ಯಯನ ಮಾಡಬೇಕಾದರೆ ಶತಮಾನಗಳ ಹಿಂದಕ್ಕೆ ಕಣ್ಣು ಹೊರಳಿಸಬೇಕು. ಕಣ್ಣೂರು ಎಂದಾಕ್ಷಣವೇ ಒಂದು ರಕ್ತಸಿಕ್ತ ಕ್ರಾಂತಿಯ ಇತಿಹಾಸ ತೆರೆದುಕೊಳ್ಳುತ್ತದೆ. 1930ರ ಹೊತ್ತಿನಲ್ಲಿ ಕೇರಳದ ಭೂಮಾಲಕರ ವಿರುದ್ಧ ಕಮ್ಯುನಿಸ್ಟರು ನಡೆಸಿದ ರಕ್ತಸಿಕ್ತ ಹೋರಾಟದ ಪರಿಣಾಮವಾಗಿ, ಪುರೋಹಿತ ಶಾಹಿ ಮತ್ತು ಭೂಮಾಲಕರ ಜಂಟಿ ಶೋಷಣೆಯ ಬೇರು ಅಲುಗಾಡತೊಡಗಿತು.

ಅಂದಿನಿಂದ ಇಂದಿನವರೆಗೆ ಈ ಹೋರಾಟ ಬೇರೆ ಬೇರೆ ರಾಜಕೀಯ ರೂಪಗಳನ್ನು ಪಡೆಯುತ್ತಾ, ಇಂದು ಅದು ಆರೆಸ್ಸೆಸ್ ನಡುವಿನ ಸಂಘರ್ಷವಾಗಿ ಬದಲಾಗಿದೆ. ನಂಬೂದಿರಿ ಬ್ರಾಹ್ಮಣರ ದೌರ್ಜನ್ಯದಿಂದ ಬೆಂದೆದ್ದಿರುವ ಈ ನೆಲದಲ್ಲಿ, ಇದರ ವಿರುದ್ಧ ಬೇರೆ ಬೇರೆ ರೀತಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಹೋರಾಟಗಳು ಹುಟ್ಟಿಕೊಂಡಿವೆ. ಅದರಲ್ಲಿ ಬಹುಮುಖ್ಯವಾದ ಹೋರಾಟದ ನೇತೃತ್ವವನ್ನು ನಾರಾಯಣ ಗುರುಗಳು ಕೈಗೆತ್ತಿಕೊಂಡಿದ್ದರು. ಅಸ್ಪಶ್ಯತೆಯ ಪರಮಾವಧಿಯನ್ನು ವಿರೋಧಿಸಿ ನಾರಾಯಣಗುರುಗಳು ಪರ್ಯಾಯ ಆಧ್ಯಾತ್ಮಿಕ ಚಿಂತನೆಯೊಂದನ್ನು ಕೇರಳದಲ್ಲಿ ಕಟ್ಟಿದರು. ಜನಿವಾರವನ್ನು ಹೊಂದಿರುವ ಅರ್ಚಕರಿಗೆ ಪರ್ಯಾಯವಾಗಿ ಜನಿವಾರ ರಹಿತರಾದ ‘ಶಾಂತಿ’ ಎನ್ನುವ ಈಳವ ಅರ್ಚಕರನ್ನು ಅವರು ತಯಾರಿಗೊಳಿಸಿದರು. ಅವರು ನಡೆಸಿದ ಕ್ರಾಂತಿ ಕೇರಳಕ್ಕೆ ಹೊಸ ದಿಕ್ಕನ್ನು ನೀಡಿತ್ತು.

ಇದೇ ಸಂದರ್ಭದಲ್ಲಿ ಕಮ್ಯುನಿಸ್ಟರ ರಾಜಕೀಯ ಹೋರಾಟಗಳು ಇನ್ನೊಂದು ದಿಕ್ಕಿನಲ್ಲಿ ಸಾಗುತ್ತಿತ್ತು. ಭೂಮಾಲಕ ವರ್ಗವನ್ನು ಎದುರಿಸುತ್ತಾ ಕಮ್ಯುನಿಸ್ಟ್ಟ್ ಪಕ್ಷ ಕೇರಳದಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಇದೇ ಸಂದರ್ಭದಲ್ಲಿ ಪುರೋಹಿತ ಶಾಹಿ ವ್ಯವಸ್ಥೆಯ ಅಳಿದುಳಿದ ಬೇರುಗಳನ್ನು ತಡಕುತ್ತಾ 1948ರಲ್ಲಿ ಗೋಳ್ವಾಲ್ಕರ್ ಕೇರಳಕ್ಕೆ ಆಗಮಿಸಿದರು. ಅಂದು ನಡೆದ ಸಮಾವೇಶದಲ್ಲಿ ಸಣ್ಣ ಪ್ರಮಾಣದ ಹಿಂಸೆ ಸ್ಫೋಟಿಸಿತ್ತು. ಆರೆಸ್ಸೆಸ್ ಎನ್ನುವುದು ಒಂದು ಸಂಘಟಿತವಾದ ಸಂಸ್ಥೆ. ಚುನಾವಣೆಯೇ ಅದರ ಉದ್ದೇಶವಲ್ಲ. ಆದುದರಿಂದಲೇ ಆರೆಸ್ಸೆಸ್ ಉಳಿದೆಲ್ಲ ಕಡೆ ಸುಲಭವಾಗಿ ವಿಸ್ತರಿಸುತ್ತಾ ಹೋಯಿತಾದರೂ, ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ಮತ್ತು ಕೇರಳದಲ್ಲಿ ಕಮ್ಯುನಿಸ್ಟ್‌ಚಳವಳಿ ಅದರ ಸಂಘಟನೆಗೆ ಭಾರೀ ಸವಾಲನ್ನು ಒಡ್ಡಿತು. ಯಾಕೆಂದರೆ, ಆರೆಸ್ಸೆಸ್‌ನಂತೆಯೇ ಕಮ್ಯುನಿಸ್ಟ್ ಕೂಡ ಒಂದು ನಿರ್ದಿಷ್ಟ ಸಿದ್ಧಾಂತದ ತಳಹದಿಯಲ್ಲಿ ರೂಪುಗೊಂಡಿರುವುದು. ಅದು ರಾಜಕೀಯದಷ್ಟೇ ಸಾಮಾಜಿಕ ಗುರಿಯನ್ನೂ ಹೊಂದಿದೆ.

ಆರೆಸ್ಸೆಸ್‌ನಂತೆಯೇ ಕಮ್ಯುನಿಸ್ಟ್‌ಕೂಡ ಸಂಘಟಿತ ಸಂಸ್ಥೆಯಾಗಿದೆ. ತನ್ನ ತತ್ವ, ಸಿದ್ಧಾಂತವನ್ನು ಜಾರಿಗೊಳಿಸಲು ಆರೆಸ್ಸೆಸ್ಸಿಗೆ ಹಿಂಸೆಯ ಹೊರತು ಸಾಧ್ಯವೇ ಇಲ್ಲ. ಆದರೆ, ಕಮ್ಯುನಿಸ್ಟರು ಅಷ್ಟೇ ತೀವ್ರವಾಗಿ ಹಿಂಸೆಯ ಮೂಲಕವೇ ಅದಕ್ಕೆ ಉತ್ತರ ನೀಡಿದ್ದುದರಿಂದ, ಆರೆಸ್ಸೆಸ್‌ಗೆ ಕೇರಳದಲ್ಲಿ ಬಾಲ ಬಿಚ್ಚುವುದಕ್ಕೆ ಕಷ್ಟವಾಗುತ್ತಿದೆ. 60ರ ದಶಕದಲ್ಲಿ ಬೀಡಿ ಕಾರ್ಮಿಕರಲ್ಲಿ ಹಿಡಿತವನ್ನು ಸಾಧಿಸುವ ಕಮ್ಯುನಿಸ್ಟ್ ಆರೆಸ್ಸೆಸ್ ನಡುವಿನ ಪೈಪೋಟಿ, ಅಂತಿಮವಾಗಿ ಬೀಡಿಯ ಹಿಂದಿರುವ ಬೃಹತ್ ಉದ್ಯಮಿಗಳನ್ನು ಕೇರಳದಿಂದ ಹಿಂದೆ ಸರಿಯುವಂತೆ ಮಾಡಿತು. ಆದರೆ ಖಾಸಗಿಯಾಗಿ ಈ ಬೀಡಿ ಉದ್ಯಮಿಗಳು ಆರೆಸ್ಸೆಸ್‌ನ್ನು ಹಣದ ಮೂಲಕ ಪೋಷಿಸ ತೊಡಗಿದರು. ತಮ್ಮ ಉದ್ಯಮವನ್ನು ಬೆಳೆಸುವುದಕ್ಕೆ ಆರೆಸ್ಸೆಸ್‌ನ ಸಹಾಯವನ್ನು ಪಡೆದರು. ಆರೆಸ್ಸೆಸ್ ತನ್ನ ಶಾಖೆಯನ್ನು ವಿಸ್ತರಿಸುವುದಕ್ಕೆ ಯತ್ನಿಸಿದಂತೆಯೇ ಕೇರಳದಲ್ಲಿ ಹಿಂಸೆಯೂ ವಿಸ್ತರಿಸತೊಡಗಿತು.

1969ರಲ್ಲಿ ನಡೆದ ಆರೆಸ್ಸೆಸ್ ಮುಖ್ಯ ಶಿಕ್ಷಕ್ ವಡಿಕ್ಕಲ್ ರಾಮಕೃಷ್ಣನ್ ಅವರ ಹತ್ಯೆ, ಈ ಗ್ಯಾಂಗ್‌ವಾರ್‌ಗೆ ನಾಂದಿ ಇರಬೇಕು. 2016ರ ಹೊತ್ತಿಗೆ ಈ ಗ್ಯಾಂಗ್‌ವಾರ್‌ಗೆ ಬಲಿಯಾದವರ ಸಂಖ್ಯೆ ಕನ್ನೂರಿನಲ್ಲಿ 200ನ್ನು ದಾಟಿತ್ತು. ಇದೀಗ ಅದರ ಸಂಖ್ಯೆ ಮುಂದುವರಿಯುತ್ತಲೇ ಇದೆ. ವಿಪರ್ಯಾಸವೆಂದರೆ, ಈ ಗ್ಯಾಂಗ್‌ವಾರ್‌ಗೆ ಬಲಿಯಾದವರಲ್ಲಿ ಬಹುತೇಕ ಹಿಂದುಳಿದ ವರ್ಗದ ತಿಯಾ ಸಮುದಾಯಕ್ಕೆ ಸೇರಿದವರು. ಒಂದಂತೂ ಸತ್ಯ. ಆರೆಸ್ಸೆಸ್ ದೇಶದಲ್ಲಿ ತನ್ನ ಶಾಖೆಯನ್ನು ವಿಸ್ತರಿಸುತ್ತಾ ಹೋಗಿರುವುದು ಅಮಾಯಕರ ರಕ್ತದ ಮೂಲಕ. ಪ್ರಚೋದನಾಕಾರಿ ಭಾಷಣ, ಕೋಮುಗಲಭೆಗಳ ತಳಹದಿಯಲ್ಲೇ ಆರೆಸ್ಸೆಸ್ ದೇಶಾದ್ಯಂತ ಇಂದು ಹರಡಿಕೊಂಡಿದೆ.

ಮುಸ್ಲಿಮ್ ದ್ವೇಷದ ಮೂಲಕ ತನ್ನ ‘ಹಿಂದುತ್ವ’ದ ಸೌಧವನ್ನು ಕಟ್ಟಿಕೊಂಡಿದೆ. ಅದರ ದ್ವೇಷ ಸಾಧನೆಗೆ ಬಲಿಯಾಗಿರುವ ಅಮಾಯಕರ ಸಂಖ್ಯೆಗೆ ಲೆಕ್ಕವಿಲ್ಲ. ಹೀಗಿರುವಾಗ, ಕೇರಳದಲ್ಲಿ ಮಾತ್ರ ಆರೆಸ್ಸೆಸ್ ಸಂಘಟನೆ ಹುತಾತ್ಮ ಹೇಳಿಕೆಯನ್ನು ನೀಡುವುದು ಅದರ ಅವಕಾಶವಾದಿತನವನ್ನು ತೋರಿಸುತ್ತದೆ. ಕೇರಳದಲ್ಲಿ ಆರೆಸ್ಸೆಸ್‌ಗೆ ಎದುರಾಳಿ ಶಕ್ತಿಗಳು ಇಲ್ಲದೇ ಇದ್ದಿದ್ದರೆ ಅದು ನಡೆಸುವ ಮಾರಣಹೋಮಕ್ಕೆ ಲೆಕ್ಕವಿರುತ್ತಿರಲಿಲ್ಲವೇನೋ? ಯಾಕೆಂದರೆ, ಕೇರಳದಲ್ಲಿ ಹರಡಿಕೊಂಡಿರುವ ಸಾಮಾಜಿಕ ಮತ್ತು ರಾಜಕೀಯ ಜಾಗೃತಿಯನ್ನು ‘ಹಿಂದುತ್ವ’ದ ವಿಸ್ಮತಿಯಲ್ಲಿ ಅಳಿಸುವುದು ಆರೆಸ್ಸೆಸ್‌ಗೆ ಅತ್ಯಗತ್ಯವಾಗಿದೆ. ಆದುದರಿಂದ, ಕೇರಳದಲ್ಲಿ ಕೋಮುಗಲಭೆ ಎಬ್ಬಿಸಿ, ಹಿಂದೂ ಮುಸ್ಲಿಮರನ್ನು ಎತ್ತಿಕಟ್ಟುವುದು ಅತ್ಯಗತ್ಯವಾಗಿದೆ.

ಆದರೆ ಇದೇ ಸಂದರ್ಭದಲ್ಲಿ ಕೇರಳಕ್ಕೆ ಸವಾಲಾಗಿ ನಿಂತಿರುವುದು ಧರ್ಮಾತೀತ ಸಿದ್ಧಾಂತವನ್ನು ಹೊಂದಿರುವ ಕಮ್ಯುನಿಸ್ಟ್. ಇಂದು ಸಿಪಿಎಂ ಕಾರ್ಯಕರ್ತರು ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆಗೈಯುತ್ತಿರುವುದು ಎಷ್ಟು ಸತ್ಯವೋ, ಸಿಪಿಎಂ ಕಾರ್ಯಕರ್ತರನ್ನು ಆರೆಸ್ಸೆಸ್ ಕಾರ್ಯಕರ್ತರೂ ಹತ್ಯೆಗೈಯುತ್ತಿರುವುದು ಅಷ್ಟೇ ಸತ್ಯ. ಆರೆಸ್ಸೆಸ್ ಶಾಖೆಗಳಲ್ಲಿ ಬಾಂಬ್ ತಯಾರಿಸುತ್ತಿರುವ ಘಟನೆಗಳು ಹಲವು ಬಾರಿ ಬೆಳಕಿಗೆ ಬಂದಿವೆ. ಬಾಂಬ್‌ಗಳನ್ನು ಸಾಗಿಸುತ್ತಿರುವಾಗಲೇ ಸ್ಫೋಟ ಸಂಭವಿಸಿ ಆರೆಸ್ಸೆಸ್ ಕಾರ್ಯಕರ್ತರು ಸತ್ತಿರುವ ಪ್ರಕರಣಗಳೂ ಸಂಭವಿಸಿವೆ.

ಹೀಗಿರುವಾಗ, ಕೇರಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೇಂದ್ರ ಸರಕಾರ ಕೇವಲ ಸಿಪಿಎಂನ್ನು ಅಥವಾ ಇತರ ಮುಸ್ಲಿಮ್ ಸಂಘಟನೆಗಳನ್ನು ದೂರುವುದು ಸಮಸ್ಯೆಗಳಿಗೆ ಪರಿಹಾರವಲ್ಲ. ಕೇರಳದಲ್ಲಿ ಆರೆಸ್ಸೆಸ್-ಸಿಪಿಎಂ ನಡುವಿನ ಗ್ಯಾಂಗ್‌ವಾರ್‌ಗಳು ನಿಲ್ಲಬೇಕಾಗಿದೆ. ಇದೇ ಸಂದರ್ಭದಲ್ಲಿ, ಸಂಘಪರಿವಾರ ದೇಶಾದ್ಯಂತ ಗೋರಕ್ಷಣೆ ಮತ್ತು ಇತರ ಹೆಸರಿನಲ್ಲಿ ನಡೆಸುತ್ತಿರುವ ಹಿಂಸಾಚಾರಕ್ಕೂ ಕಡಿವಾಣ ಬೀಳಬೇಕು. ಪ್ರತಿ ಹಿಂಸೆ ನಡೆಯುವುದಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ, ಆರೆಸ್ಸೆಸ್ ಮತ್ತು ಸಂಘಪರಿವಾರ ದೇಶಾದ್ಯಂತ ನಡೆಯುತ್ತಿರುವ ಹಿಂಸೆ ಸಮರ್ಥನೀಯ ಎಂದು ಸರಕಾರ ಭಾವಿಸಬಾರದು. ಆದುದರಿಂದ, ಮೊತ್ತ ಮೊದಲು ಆರೆಸ್ಸೆಸ್ ಜನರನ್ನು ಪ್ರಚೋದಿಸಿ ಕೋಮುಗಲಭೆಗಳ ಮೂಲಕ ತನ್ನ ಸಿದ್ಧಾಂತವನ್ನು ಹರಡುವ ತಂತ್ರವನ್ನು ನಿಲ್ಲಿಸಿದಾಗ ಮಾತ್ರ, ಅದು ಕೇರಳದಲ್ಲಿ ತನ್ನ ಮೇಲೆ ನಡೆಯುತ್ತಿರುವ ಹಿಂಸೆಯ ವಿರುದ್ಧ ಮಾತನಾಡುವ ನೈತಿಕ ಹಕ್ಕನ್ನು ಪಡೆದುಕೊಳ್ಳುತ್ತದೆ. ಅಂತಹ ನೈತಿಕ ಶಕ್ತಿಯನ್ನು ಆರೆಸ್ಸೆಸ್ ಪಡೆದುಕೊಳ್ಳಲಿ ಎನ್ನುವುದು ದೇಶದ ಶಾಂತಿಪ್ರಿಯರ ಆಶಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News