ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ, ನಂತರ ತೀರ್ಮಾನ: ಎಂ.ಬಿ.ಪಾಟೀಲ್

Update: 2017-08-02 12:10 GMT

ಬೆಂಗಳೂರು, ಆ. 2: ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಿಂದ ನೀರಿನ ಸಂಗ್ರಹವೂ ಅತ್ಯಂತ ಕಡಿಮೆ ಇದ್ದು, ಬೆಳೆಗಳಿಗೆ ನೀರು ಪೂರೈಸುವ ಬಗ್ಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಸೇರಿದಂತೆ ನಾಲ್ಕು ಜಲಾಶಯಗಳಲ್ಲಿ ಒಟ್ಟಾರೆ 43 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ ಎಂದು ವಿವರಣೆ ನೀಡಿದರು.
ಬೆಂಗಳೂರು, ವೆೆುಸೂರು, ರಾಮನಗರ ಸೇರಿದಂತೆ ಸುತ್ತಮುತ್ತಲ ನಗರ, ಪಟ್ಟಣ ಪ್ರದೇಶಗಳ ಕುಡಿಯುವ ನೀರಿಗೆ ಪ್ರತಿ ತಿಂಗಳು 2.8 ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ ಬೆಳೆಗಳಿಗೆ ನೀರು ಪೂರೈಸುವ ಸಂಬಂಧ ಶೀಘ್ರದಲ್ಲೆ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದರು.

ಕಬ್ಬು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳಿಗೆ ಒಟ್ಟು 93 ಟಿಎಂಸಿಯಷ್ಟು ನೀರಿನ ಅಗತ್ಯವಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಒಳಹರಿವು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದರು.
ತಮಿಳುನಾಡಿಗೆ ಜೂನ್ ಮತ್ತು ಜುಲೈನಲ್ಲಿ ಒಟ್ಟಾರೆ 44 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಮಳೆ ಕೊರತೆ ಹಿನ್ನೆಲೆಯಲ್ಲಿ ಪ್ರಸ್ತುತ 7 ಟಿಎಂಸಿಯಷ್ಟು ನೀರು ಬಿಡಲಾಗಿದೆ. ಸ್ವಾಭಾವಿಕ ವರ್ಷಗಳಲ್ಲಿ ತಮಿಳುನಾಡಿಗೆ 193 ಟಿಎಂಸಿಯಷ್ಟು ನೀರು ಬಿಡಬೇಕು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News