ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ; ಯಾವುದೇ ತ್ಯಾಗಕ್ಕೂ ಸಿದ್ಧ: ಎಂ.ಬಿ.ಪಾಟೀಲ್

Update: 2017-08-02 16:59 GMT

ಬೆಂಗಳೂರು, ಆ. 2: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂಬುದು ತನ್ನ ದೃಢ ನಿಲುವು. ಯಾವುದೇ ತಲೆದಂಡವಾದರೂ ಚಿಂತೆಯಿಲ್ಲ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ತಾನು ಸಿದ್ಧ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾತಿ, ಅಸಮಾನತೆ, ಮೂಢನಂಬಿಕೆ, ವೈದಿಕ ಆಚರಣೆಗಳನ್ನು ಧಿಕ್ಕರಿಸಿ ಲಿಂಗಾಯತ ಧರ್ಮ 800 ವರ್ಷಗಳ ಹಿಂದೆಯೇ ಸ್ಥಾಪನೆಯಾಗಿತ್ತು. ಇದೀಗ ಆ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಸಿಗಬೇಕು ಎಂದು ಆಗ್ರಹಿಸಿದರು.

ವೀರಶೈವ ಮತ್ತು ಲಿಂಗಾಯತ ಎಂಬ ಗೊಂದಲವನ್ನು ಬಿಟ್ಟು ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಬಗ್ಗೆ ಎಲ್ಲ ಮಠಾಧೀಶರು, ವಿದ್ವಾಂಸರು, ಮುಖಂಡರು ಒಗ್ಗೂಡಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಅಪೇಕ್ಷೆಪಟ್ಟರು.
ಹಿಂದೂಧರ್ಮಕ್ಕೂ ಮತ್ತು ಲಿಂಗಾಯತ ಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ಹೊಂದಾಣಿಕೆಯೂ ಇಲ್ಲ ಎಂದ ಅವರು, ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಜಾಗತಿಕ ಧರ್ಮ ಮತ್ತು ಸಂಸ್ಕೃತಿಯುಳ್ಳ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News