ಕ‍ರ್ನಾಟಕದಲ್ಲಿ ಮತ್ತೆ ಬರದ ಛಾಯೆ: ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಂಪುಟ ಉಪ ಸಮಿತಿ ನಿರ್ಧಾರ

Update: 2017-08-04 04:41 GMT

ಬೆಂಗಳೂರು, ಆ.4: ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆಯಲ್ಲಿ ಭೀಕರ ಬರದ ಪರಿಸ್ಥಿತಿ ಸೈಷ್ಟಿಯಾಗಿರುವ ಹಿನ್ನೆಲೆಯಲ್ಲಿ ತುರ್ತು ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಂಪುಟದ ಉಪಸಮಿತಿ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕಾನೂನು ಸಚಿವ ಜಯಚಂದ್ರ ಈ ವಿಷಯ ತಿಳಿಸಿದರು.

ಸಂಪುಟ ಉಪ ಸಮಿತಿಯಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್.ಕೆ.ಪಾಟೀಲ್, ಕೃಷ್ಣ ಭೈರೇಗೌಡ ಹಾಗೂ ತಾವು ಮುಂದಿನ ಹದಿನೈದು ದಿನಗಳಲ್ಲಿ ಹೊಸದಿಲ್ಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು ಎಂದರು.

ಮಳೆಗಾಲದಲ್ಲೇ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಾಣಿಸಿಕೊಂಡಿದೆ. ರಾಜ್ಯದ ಒಳನಾಡಿನಲ್ಲಿ ಶೇ.38ರಷ್ಟು, ಮಲೆನಾಡಿನಲ್ಲಿ ಶೇ.28ರಷ್ಟು ಮಳೆಯ ಕೊರತೆಯಾಗಿದೆ ಎಂದು ಜಯಚಂದ್ರ ತಿಳಿಸಿದರು.

 ಬರಗಾಲಕ್ಕೆ ಸಂಬಂಧಿಸಿದಂತೆ ಕೇಂದ್ರ ರೂಪಿಸಿರುವ ಹೊಸ ಮಾರ್ಗಸೂಚಿಯನ್ನು ಬದಲಿಸಬೇಕು ಮತ್ತು ರಾಜ್ಯ ಎದುರಿಸುತ್ತಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಲಾಗುವುದು ಎಂದರು.

ರಾಜ್ಯದಲ್ಲಿ ಅಡಿಕೆ ಹಾಗೂ ತೆಂಗು ಬೆಳೆ ಈಗಾಗಲೇ ತೀವ್ರ ಅಂತರ್ಜಲ ಕೊರತೆ, ಸುಳಿ ರೋಗದಿಂದ ಹಾನಿಗೀಡಾಗಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸೂಕ್ತ ಪರಿಹಾರ ಒದಗಿಸಲು ಕೇಂದ್ರ ಮುಂದಾಗಬೇಕು ಎಂದು ಮನವಿ ಮಾಡಿಕೊಳ್ಳುವುದು ಎಂದು ತಿಳಿಸಿದರು.
                                
ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದಿಂದ ಮಳೆಗಾಗಿ ಮೋಡ ಬಿತ್ತನೆ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಇಂದು ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚಿಸಿದ ಸಂದರ್ಭದಲ್ಲಿ, ಮೋಡಗಳು ಕ್ಷೀಣವಾಗಿವೆ ಎಂಬ ಮಾಹಿತಿ ದೊರೆತಿದೆ. ಹೀಗಿದ್ದರೂ ನಾವು ರಾಡಾರ್ ಅಳವಡಿಕೆ ಸೇರಿದಂತೆ ಮೋಡ ಬಿತ್ತನೆಗೆ ಅಗತ್ಯವಾದ  ಸಿದ್ಧತೆ ಮಾಡಿಕೊಂಡಿದ್ದು, ಆಗಸ್ಟ್ ಐದರ ನಂತರ ಮಳೆ ಆರಂಭದ ಮುನ್ಸೂಚನೆ ಇದೆ ಎಂದು ಐಬಿಎಂ ನೀಡಿದ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಒಂದು ವೇಳೆ ಮೋಡಗಳ ಲಭ್ಯತೆ ಇದ್ದರೆ ಮೋಡ ಬಿತ್ತನೆ ಕಾರ್ಯ ಮಾಡಬಹುದು. ಇಲ್ಲದಿದ್ದರೆ ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದ ಅವರು, ಇಷ್ಟಾದರೂ ನಿರೀಕ್ಷಿತ ಪ್ರಮಾಣದ ಮಳೆ ಬರುವ ಲಕ್ಷಣಗಳು ಗೋಚರವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ರೀತಿ ರಾಜ್ಯಾದ್ಯಂತ ಕುಡಿಯುವ ನೀರಿನ ಕೊರತೆ ಎಲ್ಲೆಲ್ಲಿ ಕಾಣಿಸಿಕೊಂಡಿದೆ ಎಂಬುದನ್ನು ಗಮನಿಸುವುದು, ಬೋರ್‌ವೆಲ್‌ಗಳನ್ನು ಎಲ್ಲಿ ಕೊರೆಸುವ ಅಗತ್ಯವಿದೆ ಎಂಬುದನ್ನು ತೀರ್ಮಾನಿಸುವುದು, ಎಷ್ಟು ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕಿದೆ ಎಂಬುದನ್ನು ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಅವರು ಆಯಾ ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕನ ಮಾಡಿ ವರದಿ ನೀಡಲಿದ್ದು, ಮೊದಲು ಸಚಿವ ಸಂಪುಟದ ಉಪಸಮಿತಿ, ಅನಂತರ ಸಚಿವ ಸಂಪುಟ ಸಭೆ ಸೇರಿ ಚರ್ಚೆ ನಡೆಸಿ ಮುಂದಿನ ಕ್ರಮಕ್ಕೆ ತೀರ್ಮಾನಿಸಲಾಗಿದೆ ಎಂದರು.

ಚಿತ್ರದುರ್ಗ ಸೇರಿದಂತೆ ಕೆಲವೆಡೆ ಗೋಶಾಲೆಗಳನ್ನು ಮುಂದುವರಿಸುವ ಬೇಡಿಕೆ ಇದ್ದು, ಅಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಹೀಗಾಗಿ ಮತ್ತಷ್ಟು ಕಾಲ ಗೋಶಾಲೆಗಳನ್ನು ಮುಂದುವರಿಸಲು ಉಪಸಮಿತಿ ತೀರ್ಮಾನಿಸಿದೆ. ಹೊರರಾಜ್ಯಗಳಿಂದ ತರಿಸುತ್ತಿರುವ ಮೇವನ್ನು ಬಳಸಲು ಬಹಳ ಕಡೆ ಹಿಂಜರಿಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಮೇವಿನ ಸಮಸ್ಯೆಯನ್ನು ಯಾವ ರೀತಿ ಪರಿಹರಿಸಬಹುದು ಎಂಬ ಕುರಿತು ಜಿಕೆವಿಕೆಗೆ ವರದಿ ಕೇಳಲಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಅದೇ ರೀತಿ ಟ್ಯಾಂಕರುಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಿದ ಕಡೆ ವಿಳಂಬ ಧೋರಣೆ ಅನುಸರಿಸದೆ ತಕ್ಷಣವೇ ಹಣ ಪಾವತಿಸಬೇಕು ಎಂದು ಇಂದು ನಡೆದ ಸಭೆಯಲ್ಲಿ ಸೂಚಿಸಲಾಗಿದೆ ಎಂದರು.

ಹಿಂದಿವ ವರ್ಷಕ್ಕೆ ಹೋಲಿಸಿದರೆ ರಾಜ್ಯ ಇನ್ನಷ್ಟು ಗಂಭೀರ ಬರಗಾಲವನ್ನು ಎದುರಿಸುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಪ್ರತಿಯೊಂದು ವಿಷಯಗಳಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News