ಡೆಂಗ್ ರೋಗಿಗಳಿಗೆ ಪ್ಲೇಟ್‌ಲೆಟ್ಸ್ ಒದಗಿಸಲು ಕ್ರಮ: ಆರೋಗ್ಯ ಸಚಿವ ರಮೇಶ್ ಕುಮಾರ್

Update: 2017-08-05 14:49 GMT

ಬೆಂಗಳೂರು, ಆ. 5: ಡೆಂಗ್ ರೋಗಿಗಳಿಗೆ ಅನುಕೂಲ ಆಗುವಂತೆ ಪ್ಲೇಟ್‌ಲೆಟ್ಸ್ ಒದಗಿಸುವ ಸಲುವಾಗಿ ರಾಜ್ಯದಲ್ಲಿರುವ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ರಕ್ತ ಬೇರ್ಪಡಿಸುವ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಕ್ತನಿಧಿ ಘಟಕಗಳಿಗೆ ಅಗತ್ಯವಿರುವ ಉಪಕರಣಗಳನ್ನು ಇನ್ನು ಒಂದೂವರೆ ತಿಂಗಳಲ್ಲಿ ಒದಗಿಸಲಾಗುವುದು. ಹೀಗಾಗಿ ಡೆಂಗ್ ರೋಗಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ರಾಜ್ಯದ 41 ಸರಕಾರಿ ರಕ್ತನಿಧಿ ಕೇಂದ್ರಗಳ ಪೈಕಿ 31 ಕೇಂದ್ರಗಳಲ್ಲಿ ರಕ್ತ ಬೇರ್ಪಡಿಸುವ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಉಳಿದ 10 ಜಿಲ್ಲೆಗಳಲ್ಲಿ ಹೊಸದಾಗಿ ರಕ್ತ ಬೇರ್ಪಡಿಸುವ ಉಪಕರಣಗಳನ್ನು ಒದಗಿಸಲಾಗಿದೆ. ಅಗತ್ಯ ಮಾನವ ಸಂಪನ್ಮೂಲ ಒದಗಿಸಲು ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಉಚಿತ ಚಿಕಿತ್ಸೆ: ಹೀಮೋಫಿಲಿಯಾ ರೋಗಿಗಳಿಗೆ ಅಂತರ್ಜಾಲದ ಮೂಲಕ ನೋಂದಣಿಗೆ ವೆಬ್‌ಸೈಟ್ ಆರಂಭಿಸಿದ್ದು, ಉಚಿತ ಚಿಕಿತ್ಸೆ ಮತ್ತು ಔಷಧೋಪಚಾರ ಒದಗಿಸಲಾಗುವುದು. ಈ ರೋಗಿಗಳಿಗೆ ಸ್ಮಾಟ್ ಕಾರ್ಡ್ ನೀಡುತ್ತಿದ್ದು, ಅವರು ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದರು.

ವರ್ಗಾವಣೆ: ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆ ಪ್ರಮಾಣ ಶೇ.5ರಿಂದ 15ಕ್ಕೆ ಹೆಚ್ಚಿಸಿದ್ದು, 10 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದ ಅವರು, ನಾಲ್ಕು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿರುವ ಡ್ರಗ್ಸ್ ಮತ್ತು ಲಾಜಿಸ್ಟಿಕ್ ಕೇಂದ್ರದ ಎಲ್ಲ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ತೀರ್ಮಾನ ಮಾಡಲಾಗಿದೆ.

ಈಗಾಗಲೇ ವೈದ್ಯರು ರೋಗಿಗಳಗೆ ನೀಡುವ ಸಲಹೆ ಚೀಟಿಯನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗಿದೆ. ಅಗತ್ಯವಿರುವ ಎಲ್ಲ ಔಷಧಿಗಳನ್ನು ಪೂರೈಸಲಾಗುತ್ತದೆ ಹಾಗೂ ಆಸ್ಪತ್ರೆ ಮತ್ತು ಡ್ರಗ್ಸ್ ಆ್ಯಂಡ್ ಲಾಜಿಸ್ಟಿಕ್ ಕೇಂದ್ರದ ನಡುವೆ ಅಭಿಪ್ರಾಯದ ಭಿನ್ನತೆ ಕಂಡುಬಂದಿರುವುದರಿಂದ ವರ್ಗಾವಣೆಗೆ ತೀರ್ಮಾನಿಸಲಾಗಿದೆ ಎಂದರು.

ಸ್ಯಾಮ್‌ಸಂಗ್ ಇಂಡಿಯಾ ಸಂಸ್ಥೆಯು 1 ಸಾವಿರ ಟ್ಯಾಬ್ಲೆಟ್‌ಗಳನ್ನು ಆರೋಗ್ಯ ಕೇಂದ್ರಕ್ಕೆ ನೀಡಿದ್ದು, ಇನ್ನು ಒಂದೂವರೆ ಸಾವಿರ ಟ್ಯಾಬ್ಲೆಟ್‌ಗಳನ್ನು ನೀಡಲು ಸಮ್ಮತಿಸಿದ್ದು ಅವುಗಳನ್ನು ಆರೋಗ್ಯ ಕಾರ್ಯಕರ್ತೆಯರಿಗೆ ನೀಡಲಾಗುವುದು. ಅಲ್ಲದೆ, ಸಮಗ್ರ ಮಾಹಿತಿ ಸಂಗ್ರಹಕ್ಕೆ ಅನುಕೂಲವಾಗಲಿದೆ ಎಂದರು.
ಅಕ್ಬೋಬರ್ 2ಕ್ಕೆ ಚಾಲೆ: ರಾಜ್ಯದ 146 ತಾಲೂಕು ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆಗಸ್ಟ್ 15ಕ್ಕೆ ಆರಂಭಿಸಬೇಕಿತ್ತು. ಆದರೆ, ಅವುಗಳನ್ನು ಅ.2ರಿಂದ ಆರಂಭಿಸಲಾಗುವುದು ಎಂದ ಅವರು, ಈಗಾಗಲೇ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರವಿದೆ. ಜೊತೆಗೆ 32 ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲಾಗಿದೆ

ನ.1ರ ವೇಳೆಗೆ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಕಾರ್ಯ ನಿರ್ವಹಿಸಲಿವೆ. ಬಿಆರ್‌ಎಫ್ ಸಂಸ್ಥೆ-89 ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲು ಒಪ್ಪಿಕೊಂಡಿದ್ದು, ಅ.15ರ ಒಳಗೆ 50 ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಆರಂಭವಾಗಲಿವೆ. ಇಎಸ್‌ಕೆಜಿ ಸಂಸ್ಥೆ-25 ಡಯಾಲಿಸ್ ಕೇಂದ್ರ ಸ್ಥಾಪಿಸಲು ಒಪ್ಪಿಕೊಂಡಿದ್ದು, ಅ.15ರೊಳಗೆ 15ಕೇಂದ್ರಗಳು ಪ್ರಾರಂಭಿಸಲಿವೆ ಎಂದರು.

ತಾಲೂಕು ಆಸ್ಪತ್ರೆಗಳಲ್ಲಿ ಮೂರು ಹಾಸಿಗೆಗಳ ತೀವ್ರ ನಿಗಾ ಘಟಕ ಸ್ಥಾಪಿಸಲು 22 ಮಂದಿ ಶಾಸಕರು ಮತ್ತು 4 ಮಂದಿ ಸಂಸದರು ಅನುದಾನ ನೀಡಿದ್ದು, ಎಲ್ಲರೂ ನೀಡಿದರೆ ಘಟಕ ಆರಂಭಿಸಲಾಗುವುದು ಎಂದ ಅವರು, ಶಾಸಕರ ನಿಧಿಯಿಂದ 15 ಲಕ್ಷ ರೂ., ಸಂಸದರ ನಿಧಿಯಿಂದ 5 ಲಕ್ಷ ರೂ. ಹಾಗೂ ರಾಜ್ಯ ಸರಕಾರ 7ಲಕ್ಷ ರೂ.ಸೇರಿದಂತೆ ಒಟ್ಟು 27 ಲಕ್ಷ ರೂ.ವೆಚ್ಚದಲ್ಲಿ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿತ್ತು ಎಂದರು.

ಸರಕಾರಿ ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರ ಕೊರತೆ ನೀಗಿಸಲು ರಾಜ್ಯದ 11ಜಿಲ್ಲೆಗಳಲ್ಲಿ ಡಿಎನ್‌ಬಿ ಕೋರ್ಸ್ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ. ಜಯನಗರದ ಸಾರ್ವಜನಿಕ ಆಸ್ಪತ್ರೆ, ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲು ಅನುಮತಿ ಸಿಕ್ಕಿದೆ ಎಂದರು.

ಜನೌಷಧಿ ಮಳಿಗೆ

‘ತಾಲೂಕು ಆಸ್ಪತ್ರೆಗಳಲ್ಲಿ ಇನ್ನು ಮೂರು ತಿಂಗಳಲ್ಲಿ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲಾಗುವುದು. ಅನಂತರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಜನೌಷಧಿ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಮೊದಲ ಹಂತದಲ್ಲಿ 2 ಸಾವಿರ ಜನೌಷಧಿ ಮಳಿಗೆ ಸ್ಥಾಪಿಸಲು ಉದ್ದೇಶಿಸಿದ್ದು, ಎಂಎಸ್‌ಐಎಲ್, ಡ್ರಗ್ಸ್ ಆ್ಯಂಡ್ ಲಾಜಿಸ್ಟಿಕ್ಸ್ ವೇರ್ ಹೌಸ್ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳಿಗೆ ವಹಿಸಲಾಗಿದೆ’

-ಕೆ.ಆರ್.ರಮೇಶ್ ಕುಮಾರ್ ಆರೋಗ್ಯ ಸಚಿವ


‘ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕದ ಪರಿಶೀಲನೆಗೆ ರಚಿಸಲಾಗಿರುವ ಜಂಟಿ ಸದನ ಸಮಿತಿ ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದು, ಕೆಲ ವಿವರಣೆ ಕೋರಿದ್ದು ಅದನ್ನು ಒದಗಿಸಲಾಗುವುದು. ಇನ್ನೆರಡು ಅಥವಾ ಮೂರು ಸಭೆಗಳಲಿ ಎಲ್ಲವೂ ಅಂತಿಮಗೊಳ್ಳಲಿದ್ದು, ಅದಷ್ಟು ಶೀಘ್ರ ವರದಿ ಸಿದ್ಧವಾಗಲಿದೆ’

-ಕೆ.ಆರ್.ರಮೇಶ್ ಕುಮಾರ್ ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News