ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯಕ್ಕೆ ಚಾಲನೆ

Update: 2017-08-05 15:18 GMT

   ಬೆಂಗಳೂರು, ಆ.5: ಅಡುಗೆ ಮನೆ, ಶೌಚಾಲಯ, ಮಕ್ಕಳ ಆಟದ ಕೊಠಡಿ ಇರುವ ಮನೆಯಂತಿದ್ದರೂ ಅಲ್ಲಿಯೇ ನ್ಯಾಯಾಧೀಶರು, ವಕೀಲರು, ಪೊಲೀಸರು ಇರುತ್ತಾರೆ. ಹಾಗೆಯೇ ಅಲ್ಲಿ ಕೋರ್ಟ್ ಕಲಾಪಗಳೂ ನಡೆಯುತ್ತವೆ. ಹೌದು. ಇಂಥದ್ದೊಂದು ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯ ಶನಿವಾರ ನಗರದ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಉದ್ಘಾಟನೆಗೊಂಡಿದೆ.

  ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಮದನ್ ಬಿ. ಲೋಕೂರು ಮಕ್ಕಳ ಸ್ನೇಹಿ ನ್ಯಾಯಾಲಯವನ್ನು ಉದ್ಘಾಟಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, ನ್ಯಾಯಮೂರ್ತಿ ಅಸೋಕ್ ಬಿ. ಹಿಂಚಿಗೇರಿ, ನ್ಯಾ.ರತ್ನಕಲಾ ಅವರು ಹಾಜರಿದ್ದರು. ಆಡುವ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಗಳಿಗೆ ತುತ್ತಾಗುವ ಪುಟ್ಟ ಮಕ್ಕಳು ಕೋರ್ಟ್, ಕಚೇರಿ ಎಂದು ಹೋದಾಗ ಅಲ್ಲಿನ ವಾತಾವರಣ ಕಂಡು ಭಯಭೀತರಾಗುತ್ತಾರೆ. ಅದಾಗಲೇ ಲೈಂಗಿಕ ದೌರ್ಜನ್ಯದಿಂದ ಆಘಾತಕ್ಕೊಳಗಾದ ಮಕ್ಕಳ ಮನಸ್ಸಿನ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

 ಹೀಗಾಗಿ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣಗಳ ವಿಚಾರಣೆ ನಡೆಸುವಾಗ ಮಕ್ಕಳಿಗೆ ಯಾವುದೇ ಭೀತಿ ಕಾಡದಂತೆ, ಮನೆಯಲ್ಲಿರುವಂತೆಯೇ ಭಾಸವಾಗುವಂತಹ ವಾತಾವರಣ ಸೃಷ್ಟಿಸುವ ಸಲುವಾಗಿ ಮಕ್ಕಳಸ್ನೇಹಿ ಪರಿಕಲ್ಪನೆಯಲ್ಲಿ ಎರಡು ವಿಶೇಷ ನ್ಯಾಯಾಲಯಗಳನ್ನು ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ಸ್ಥಾಪಿಸಲಾಗಿದೆ. 

ಸದ್ಯ ಬೆಂಗಳೂರಿನ 750ಕ್ಕೂ ಹೆಚ್ಚು ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು ಹಾಗೂ ಬೆಂಗಳೂರು ಗ್ರಾಮಾಂತರದ ಸುಮಾರು 200 ಪ್ರಕರಣಗಳ ವಿಚಾರಣೆ ಈ ನ್ಯಾಯಾಲಯಗಳಲ್ಲಿ ನಡೆಯಲಿದೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಗಿರುವ ಮಕ್ಕಳ ವಿಶೇಷ ನ್ಯಾಯಾಲಯದ ಮೇಲ್ವಿಚಾರಣೆಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ನೋಡಿಕೊಳ್ಳಲಿದ್ದಾರೆ.

  ಹೀಗಿರಲಿದೆ ಮಕ್ಕಳ ಸ್ನೇಹಿ ಕೋರ್ಟ್: ಸಿವಿಲ್ ಕೋರ್ಟ್ ಆವರಣದಲ್ಲಿ ನಿರ್ಮಾಣವಾಗಿರುವ ಕಟ್ಟಡವೊಂದರ 5ನೆ ಮಹಡಿಯಲ್ಲಿರುವ ಎರಡು ಕೋರ್ಟ್ ಸಭಾಂಗಣ ಮಕ್ಕಳಸ್ನೇಹಿ ಕೋರ್ಟ್ ಆಗಿ ಪರಿವರ್ತನೆಯಾಗಿದೆ. ನ್ಯಾಯಾಧೀಶರು, ವಕೀಲರು, ಪೊಲೀಸರು ಹಾಗೂ ಅಪರಾಧಿಗಳನ್ನು ನೋಡಿ ಮಕ್ಕಳು ಹೆದರದಂತೆ ಮನೆಯ ವಾತಾವರಣ ಸೃಷ್ಟಿಸಲಾಗುತ್ತದೆ. ಮಕ್ಕಳಿಗಾಗಿ ಪ್ರತ್ಯೇಕ ಕೋಣೆಗಳು, ಆಟಿಕೆಗಳು, ಹಾಲು, ತಿಂಡಿ-ತಿನಿಸುಗಳು ಹಾಗೂ ಶೌಚಾಲಯದ ವ್ಯವಸ್ಥೆಯೂ ಇರಲಿದೆ. ಗೋಡೆಗಳ ಮೇಲೆ ಬಿಡಿಸುವ ಚಿತ್ರಗಳು ಮಕ್ಕಳನ್ನು ಆಕರ್ಷಿಸಲಿವೆ.

ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯನ್ನು ಕಂಡು ಮಕ್ಕಳು ಹೆದರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಮಕ್ಕಳಿಗೆ ಆರೋಪಿಗಳ ಮುಖ ಕಾಣಿಸದಂತೆ ನೋಡಿಕೊಳ್ಳಲಾಗುತ್ತದೆ. ಮಕ್ಕಳಿಂದ ಹೇಳಿಕೆ ಪಡೆಯುವಾಗ ಆರೋಪಿಗಳನ್ನು ಕಂಡು ಭಯದಿಂದ ಸತ್ಯ ಹೇಳಲು ಹೆದರುವ ಸಾಧ್ಯತೆ ಇರುವುದರಿಂದ ಆರೋಪಿಗಳಿಗಾಗಿ ಏಕಮುಖ ಗಾಜುಗಳನ್ನು ಅಳವಡಿಸಿದ ವಿಶೇಷ ಕಟಕಟೆಗಳಿರಲಿದ್ದು, ಅಲ್ಲಿ ನಿಂತ ಆರೋಪಿಯು ಮಕ್ಕಳ ಕಣ್ಣಿಗೆ ಬೀಳದಂತೆ ವ್ಯವಸ್ಥೆ ಮಾಡಲಾಗುತ್ತದೆ.

ಮಕ್ಕಳಿಗೆ ಯಾವುದೇ ರೀತಿಯಲ್ಲೂ ಭಯವಾಗದ ರೀತಿಯಲ್ಲಿ ಈ ವಿಷೇಶ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯಲಿದೆ. ನ್ಯಾಯಾಧೀಶರು, ವಕೀಲರೂ ಸಹ ಮಕ್ಕಳೊಂದಿಗೆ ಪ್ರೀತಿಯಿಂದ, ಮೃದುವಾಗಿ ಮಾತನಾಡಲಿದ್ದು, ಸಾಮಾನ್ಯ ಕೋರ್ಟ್‌ಗಳ ವಾತಾವರಣಕ್ಕಿಂತ ಭಿನ್ನವಾಗಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News