ಐಪಿಎಸ್ ಅಧಿಕಾರಿಯ ಉದ್ಯೋಗಕ್ಕೆ ಸಂಚಕಾರ ತಂದ 2ನೆ ವಿವಾಹ

Update: 2017-08-07 04:37 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ.7: ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಅಕ್ರಮವಾಗಿ ಎರಡನೆ ವಿವಾಹವಾದ ಆರೋಪದಲ್ಲಿ ಒಬ್ಬರು ಐಪಿಎಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಕೇಂದ್ರ ಸರ್ಕಾರ ಸೇವೆಯಿಂದ ವಜಾ ಮಾಡಿದೆ.

ಸಾರ್ವಜನಿಕ ಹಿತಾಸಕ್ತಿಯಿಂದ ನಾಗರಿಕ ಸೇವಾ ಅಧಿಕಾರಿಗಳ ಕಡ್ಡಾಯ ನಿವೃತ್ತಿ ನಿಯಮಾವಳಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇಬ್ಬರೂ ಅಧಿಕಾರಿಗಳು ಛತ್ತೀಸ್‌ಗಢ ಕೇಡರ್‌ನವರಾಗಿದ್ದು, ಡಿಐಜಿ ಶ್ರೇಣಿಯ ಅಧಿಕಾರಿಗಳು. ಅಖಿಲ ಭಾರತ ಸೇವೆಗಳ ನಿಯಮಾವಳಿ- 1958ರ ಅನ್ವಯ 2000ನೇ ಐಪಿಎಸ್ ಬ್ಯಾಚ್ ಅಧಿಕಾರಿ ಎ.ಎಂ.ಜೂರಿ ಹಾಗೂ 2002ನೇ ಬ್ಯಾಚ್ ಅಧಿಕಾರಿ ಕೆ.ಸಿ.ಅಗರ್‌ವಾಲ್ ಶಿಕ್ಷೆಗೆ ಒಳಗಾದವರು.

ಜೂರಿ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೆ ವಿವಾಹವಾಗಿದ್ದಾರೆ. ಇದು ಅಖಿಲ ಭಾರತ ಸೇವಾ (ನಡತೆ) ನಿಯಮಾವಳಿ- 1968ರ ಅನ್ವಯ ನಿಷಿದ್ಧ. ಅಗರ್‌ವಾಲ್ ಅವರನ್ನು ಅದಕ್ಷತೆ ಆರೋಪದಲ್ಲಿ ವಜಾ ಮಾಡಲಾಗಿದೆ. ಛತ್ತೀಸ್‌ಗಢ ಸರ್ಕಾರ ನೀಡಿದ ವ್ಯತಿರಿಕ್ತ ವರದಿ ಹಿನ್ನೆಲೆಯಲ್ಲಿ ಇವರನ್ನು ವಜಾಗೊಳಿಸಲಾಗಿದೆ. ಜೂರಿ ಎರಡನೆ ಪತ್ನಿಯಲ್ಲಿ ಇಬ್ಬರು ಮಕ್ಕಳನ್ನೂ ಹೊಂದಿದ್ದಾರೆ. ಈ ಬಗ್ಗೆ ಎಲ್ಲ ಮೇಲಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೆ ತಿಳಿದಿದ್ದರೂ, ಎರಡನೆ ಪತ್ನಿ ಅಧಿಕೃತವಾಗಿ ದೂರು ನೀಡಿದ ಬಳಿಕ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News