ಗಣ್ಯರ ಹೆಸರಿನ ಮುಂದೆ ಪ್ರಶಸ್ತಿಗಳ ಹೆಸರು ಸೇರ್ಪಡೆ ಕಾನೂನು ಬಾಹಿರ: ನ್ಯಾ.ಸಂತೋಷ್ ಹೆಗ್ಡೆ

Update: 2017-08-08 13:15 GMT

ಬೆಂಗಳೂರು, ಆ.8: ಗಣ್ಯರ ಹೆಸರಿನ ಮುಂದೆ ಭಾರತ ರತ್ನ, ಪದ್ಮಶ್ರೀ ಸೇರಿದಂತೆ ಯಾವುದೇ ಪ್ರಶಸ್ತಿಯ ಹೆಸರನ್ನು ಬಳಕೆ ಮಾಡುವುದು ಕಾನೂನಿಗೆ ವಿರುದ್ಧವಾದದ್ದೆಂದು ಲೋಕಾಯುಕ್ತ್ತ ನಿವೃತ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಗಾಂಧಿ-ಕಾಮರಾಜ್ ಸ್ಮಾರಕ ಟ್ರಸ್ಟ್ ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಪದ್ಮಶ್ರೀ ಡಾ.ಮತ್ತೂರು ಕೃಷ್ಣಮೂರ್ತಿರವರ 89ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಣ್ಯರೊಬ್ಬರಿಗೆ ಭಾರತ ರತ್ನ ಪ್ರಶಸ್ತಿ ಸೇರಿದಂತೆ ಯಾವುದೇ ಪ್ರಶಸ್ತಿ ಬಂದಾಗ ಅವರ ಹೆಸರಿನ ನಂತರದಲ್ಲಿ ಆ ಬಿರುದನ್ನು ಹಾಕಬೇಕೇ ವಿನಃ ಹೆಸರಿನ ಮೊದಲು ಹಾಕಬಾರದು ಎಂದು ಸುಪ್ರೀ ಕೋರ್ಟ್ ತಿಳಿಸಿದೆ. ಆದರೂ ಹೆಸರಿನ ಮುಂದೆಯೇ ಪ್ರಶಸ್ತಿಗಳ ಹೆಸರನ್ನು ಹಾಕಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಅಧಿಕಾರವನ್ನು ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರಿಂದ ಏನನ್ನೂ ನಿರೀಕ್ಷೆ ಮಾಡಲಾಗದ ಮಟ್ಟಕ್ಕೆ ತಲುಪಿದ್ದಾರೆ. ಇನ್ನು ಕಾರ್ಯಾಂಗ ಜನರ ಹಿತಕ್ಕೆ ಸ್ಪಂದಿಸುತ್ತಿಲ್ಲ. ಸರಕಾರದ ಸೌಕರ್ಯ, ಸೌಲಭ್ಯಗಳನ್ನು ನ್ಯಾಯಯುತವಾಗಿ ಪಡೆಯಲು ಪರಿತಪಿಸಬೇಕಾಗಿದೆ. ಆಸ್ಪತ್ರೆಯಲ್ಲಿ ಹೆಣ ಪಡೆಯಲೂ, ಮರಣೋತ್ತರ ಪರೀಕ್ಷೆಗೂ ದುಡ್ಡು ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾ.ಸಂತೋಷ್ ಹೆಗ್ಡೆ ವಿಷಾದಿಸಿದರು.

ಆಧುನಿಕ ಜೀವನಕ್ಕೆ ಮಾರುಹೋಗಿರುವ ಪ್ರಸ್ತುತ ಸಮಾಜದಲ್ಲಿ ಸಂಸ್ಕಾರ, ಪ್ರಾಮಾಣಿಕತೆ, ಮಾನವೀಯ ವೌಲ್ಯಗಳು ಕುಸಿಯುತ್ತಿವೆ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಂಡು ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸಬೇಕಾಗಿದೆ. ಮಕ್ಕಳಲ್ಲಿ ಉತ್ತಮವಾದ ಕನಸನ್ನು ಬಿತ್ತುವ ಮೂಲಕ ಆದರ್ಶ ಸಮಾಜವನ್ನ ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು. ಟ್ರಸ್ಟ್ ಅಧ್ಯಕ್ಷ ನಟರಾಜ್, ಭಾರತೀಯ ವಿಧ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ಪೆರುಮಾಳ್ ವಿದ್ಯಾನಿಕೇತನ್ ಕಾರ್ಯದರ್ಶಿ ಎ.ಮಧುಸೂದನ್ ಬಾಬು, ಮಾಜಿ ಪಾಲಿಕೆ ಸದಸ್ಯ ಕೆ.ರವೀಂದ್ರ ಸೇರಿದಂತೆ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News