ಬೈಸಿಕಲ್‌ ಕಳ್ಳತನ ಪ್ರಕರಣ: ಮಾಜಿ ‘ಬಿಗ್‌ಬಾಸ್’ ಸ್ಪರ್ಧಿ ಸ್ವಾಮಿ ಓಂ ಬಂಧನ

Update: 2017-08-10 06:52 GMT

 ಹೊಸದಿಲ್ಲಿ, ಆ.10: ಒಂಭತ್ತು ವರ್ಷಗಳ ಹಿಂದೆ ತನ್ನ ಸಹೋದರನ ಅಂಗಡಿಗೆ ನುಗ್ಗಿ ಬೈಸಿಕಲ್‌ಗಳನ್ನು ಹಾಗೂ ಕೆಲವು ದಾಖಲೆಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿವಾದಿತ ಸ್ವಯಂಘೋಷಿತ ದೇವಮಾನವ, ಮಾಜಿ ‘ಬಿಗ್‌ಬಾಸ್’ ಸ್ಪರ್ಧಿ ಸ್ವಾಮಿ ಓಂ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ದಿಲ್ಲಿಯ ಸಾಕೇತ್ ನ್ಯಾಯಾಲಯ ಸ್ವಾಮಿ ಓಂ ಎಂದೇ ಕರೆಯಲ್ಪಡುತ್ತಿರುವ ವಿನೋದಾನಂದ ಝಾರನ್ನು ಕಳ್ಳತನ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿತ್ತು.

ಕಿರಿಯ ಸಹೋದರ ಪ್ರಮೋದ್ ಝಾ ನೀಡಿರುವ ದೂರಿನ ಆಧಾರದಲ್ಲಿ 2008ರ ನವೆಂಬರ್‌ನಲ್ಲಿ ಲೋಧಿ ಕಾಲೊನಿ ಪೊಲೀಸ್ ಠಾಣೆಯಲ್ಲಿ ಸ್ವಾಮಿ ಓಂ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

 ಸ್ವಾಮಿ ಓಂ ಇತರ ಮೂವರು ಸಹಚರರ ಜೊತೆಗೆ ಲೋಧಿ ಕಾಲೊನಿಯಲ್ಲಿರುವ ತನ್ನ ಬೈಸಿಕಲ್‌ ಅಂಗಡಿಯ ಬೀಗ ಮುರಿದು ಒಳ ಪ್ರವೇಶಿಸಿ 11 ಸೈಕಲ್‌ಗಳನ್ನು, ದುಬಾರಿ ಬಿಡಿಭಾಗಗಳನ್ನು ಕಳ್ಳತನ ಮಾಡಿದ್ದ. ಮನೆ ಮಾರಾಟದ ಕರಾರುಪತ್ರ ಹಾಗೂ ಇತರ ಮುಖ್ಯ ದಾಖಲೆಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಪ್ರಮೋದ್ ಆರೋಪಿಸಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಸ್ವಾಮಿ ಓಂ ಅಪರಾಧಿ ಎಂದು ಕಳೆದ ವರ್ಷ ಘೋಷಿಸಿದ್ದ ಸಾಕೇತ್ ನ್ಯಾಯಾಲಯ ಸ್ವಾಮಿಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.

ಲೋಧಿ ಕಾಲೊನಿ ಠಾಣೆಯ ಪೊಲೀಸರು ಹಾಗೂ ಅಂತರ್-ಜಿಲ್ಲಾ ಕ್ರೈಂ ಬ್ರಾಂಚ್ ಘಟಕವು ದಿಲ್ಲಿಯ ಭಜನಪುರದ ಮನೆಯೊಂದರಲ್ಲಿ ಅಡಗಿಕುಳಿತ್ತಿದ್ದ ಸ್ವಯಂಘೋಷಿತ ದೇವಮಾನವನನ್ನು ಪತ್ತೆ ಹಚ್ಚಿ ಬಂಧಿಸಿದೆ.

‘ಬಿಗ್‌ಬಾಸ್’ನಲ್ಲಿ ಸ್ಪರ್ಧಿಸಿದ್ದ ಓಂ ಸ್ವಾಮಿ ಕೆಟ್ಟ ವರ್ತನೆ ಹಿನ್ನೆಲೆಯಲ್ಲಿ 'ಬಿಗ್‌ಬಾಸ್' ಮಧ್ಯದಲ್ಲೇ ಹೊರ ನಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News