ಪ್ರಗತಿ ಗುರಿ ಸಾಧನೆ ಕಷ್ಟ ಎಂದು ಒಪ್ಪಿಕೊಂಡ ಕೇಂದ್ರ ಸರ್ಕಾರ

Update: 2017-08-12 03:46 GMT

ಹೊಸದಿಲ್ಲಿ, ಆ.12: ಭಾರತದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಸಕ್ತ ಅಂದಾಜಿನಂತೆ ಶೇಕಡ 6.75ರಿಂದ 7.5ರ ಗುರಿಯಲ್ಲಿ ಗರಿಷ್ಠ ದರದ ಪ್ರಗತಿ ದಾಖಲಿಸುವುದು ಕಷ್ಟಸಾಧ್ಯ ಎಂದು ಕೇಂದ್ರ ಸರ್ಕಾರ ಅರ್ಧವಾರ್ಷಿಕ ಆರ್ಥಿಕ ಸಮೀಕ್ಷೆಯಲ್ಲಿ ಒಪ್ಪಿಕೊಂಡಿದೆ.

ಹಣದುಬ್ಬರ ತಡೆಯುವ ಒತ್ತಡ, ಕೃಷಿ ಸಂಕಷ್ಟ, ಕೃಷಿ ಸಾಲ ಮನ್ನಾ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಮತ್ತಿತರ ಕಾರಣಗಳಿಂದಾಗಿ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಈ ಪ್ರಗತಿದರ ದಾಖಲಿಸುವುದು ಅಸಾಧ್ಯ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ವರದಿಯಲ್ಲಿ ವಿವರಿಸಲಾಗಿದೆ. "ಅಂದಾಜಿನ ಗರಿಷ್ಠ ಪ್ರಮಾಣವನ್ನು ತಲುಪುವುದು ಅಸಾಧ್ಯ" ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕಳೆದ ವರ್ಷದ ನವೆಂಬರ್ 8ರಂದು 500 ಮತ್ತು 1000 ರೂಪಾಯಿ ಹಳೆನೋಟುಗಳ ಚಲಾವಣೆಯನ್ನು ಅಮಾನ್ಯಗೊಳಿಸಿದ್ದರಿಂದ ಚಲಾವಣೆಯಲ್ಲಿದ್ದ ಶೇಕಡ 80ರಷ್ಟು ನೋಟುಗಳು ಮಾರುಕಟ್ಟೆಯಿಂದ ಮರೆಯಾದವು. ಇದರಿಂದಾಗಿ ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಗತಿದರ ಶೇಕಡ 6.1ಕ್ಕೆ ಕುಸಿದಿತ್ತು. ಇಷ್ಟಾಗಿಯೂ ಇಡೀ ವರ್ಷದ ಪ್ರಗತಿದರ ಶೇಕಡ 7.1 ಆಗಿತ್ತು. ವಿಶ್ವಬ್ಯಾಂಕ್ ಹಾಗೂ ಐಎಂಎಫ್ ಕೂಡಾ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರವನ್ನು ಶೇಕಡ 7.2 ಎಂದು ಅಂದಾಜು ಮಾಡಿವೆ.

ಆದರೆ ಜಿಎಸ್‌ಟಿ, ಪ್ರಬಲಗೊಂಡ ರೂಪಾಯಿ, ಏರ್‌ ಇಂಡಿಯಾ ಖಾಸಗೀಕರಣ ನಿರ್ಧಾರ ಹಾಗೂ ಬ್ಯಾಂಕ್ ಮತ್ತು ಕಂಪೆನಿಗಳ ಅನುತ್ಪಾದಕ ಆಸ್ತಿ ಸಮಸ್ಯೆ ಬಗೆಹರಿಸಲು ನಡೆಸಿರುವ ಪ್ರಯತ್ನಗಳು ಸುಧಾರಣೆ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆಗಳು ಎಂದು ವರದಿಯಲ್ಲಿ ವಿವರಿಸಲಾಗಿದೆ. 2016-17ರಲ್ಲಿ ಶೇಕಡ 3.5ರಷ್ಟಿದ್ದ ವಿತ್ತೀಯ ಕೊರತೆ ಪ್ರಮಾಣ 2017-18ರಲ್ಲಿ ಶೇಕಡ 3.2ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ವರದಿ ಅಂದಾಜು ಮಾಡಿದೆ.

ಅಲ್ಪಾವಧಿ ಅಂಶಗಳಾದ ವಾಣಿಜ್ಯ ಬ್ಯಾಂಕ್‌ಗಳ ಸಾಲ ಹೆಚ್ಚಳ ಹಾಗೂ ಜಿಎಸ್‌ಟಿಗೆ ಎದುರಾಗಿರುವ ಸವಾಲುಗಳು ಪ್ರಗತಿಗೆ ಮಾರಕವಾಗುವ ಸಾಧ್ಯತೆ ಇದೆ ಎಂದೂ ವರದಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News