ಉತ್ತರಪ್ರದೇಶದ ಈ ಗ್ರಾಮ ಯೋಧರ ಫ್ಯಾಕ್ಟರಿ!

Update: 2017-08-12 03:59 GMT

ಲಕ್ನೋ, ಆ.12: ಉತ್ತರ ಪ್ರದೇಶದ ಈ ಪುಟ್ಟ ಗ್ರಾಮ ಭಾರತದ ಸೇನೆಯ ಫ್ಯಾಕ್ಟರಿ ಎಂದರೆ ಅತಿಶಯೋಕ್ತಿ ಅಲ್ಲ. ಏಕೆ ಗೊತ್ತೇ? ಈ ಗ್ರಾಮದ ಯುವಕರ ಪೈಕಿ ಶೇಕಡ 30ಕ್ಕಿಂತಲೂ ಹೆಚ್ಚು ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮದ 800 ಮಂದಿ ಯೋಧರಾಗಿ ಸೇವೆ ಸಲ್ಲಿಸುತ್ತಿರುವುದು ವಿಶೇಷ.

ಆಗ್ರಾ ನಗರದಿಂದ 15 ಕಿಲೋ ಮೀಟರ್ ದೂರದ ಈ ಗ್ರಾಮದ ಜನಸಂಖ್ಯೆ 6,000. ಗ್ರಾಮದಲ್ಲಿ 200 ಮಂದಿ ನಿವೃತ್ತ ಯೋಧರಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಯೋಧರು ಇಲ್ಲಿ ಸಜ್ಜಾಗಲು ಕಾರಣ ನೆರೆಯ ಪಾಕಿಸ್ತಾನ!. 2000ನೇ ಇಸವಿಯಲ್ಲಿ ಗ್ರಾಮದ ಯೋಧ ದಶರಥ್ ಸಿಂಗ್ ಎಂಬಾತ ಪಾಕಿಸ್ತಾನ ಸೇನೆಯಿಂದ ಹತ್ಯೆಗೀಡಾಗಿದ್ದ. ಯೋಧನ ತಲೆ ತೆಗೆದು ದೇಹವನ್ನು ಬಾಂಬ್ ಸಿಡಿಸಿ ಛಿದ್ರಗೊಳಿಸಲಾಗಿತ್ತು. ಆ ಬಳಿಕ ಪಾಕಿಸ್ತಾನದ ವಿರುದ್ಧ ಹೋರಾಡಲೇಬೇಕು ಎಂಬ ಛಲದಿಂದ ಇಲ್ಲಿನ ಯುವಕರು ಸೇನೆ ಸೇರುತ್ತಿದ್ದಾರೆ ಎಂದು ನಿವೃತ್ತ ಸೈನಿಕ ಹರ್ವೀರ್ ವಿವರಿಸುತ್ತಾರೆ.

ಈ ಗ್ರಾಮದಲ್ಲಿ ವಿಶಿಷ್ಟವಾದ ನಿಯಮಾವಳಿ ಇದೆ. ಜತೆಗೆ ವಿಶಿಷ್ಟ ಶಿಕ್ಷೆ ಕೂಡಾ ಇದೆ. "ಯುವಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ದುರ್ಬಲರಾಗಬಾರದು ಎಂಬ ಕಾರಣಕ್ಕೆ ಗ್ರಾಮದಲ್ಲಿ ಮದ್ಯ ನಿಷೇಧ. ಗ್ರಾಮದಲ್ಲಿ ಯಾರಾದರೂ ಮದ್ಯ ಸೇವಿಸಿದ್ದು ಕಂಡುಬಂದರೆ 500 ರೂಪಾಯಿ ದಂಡ ವಿಧಿಸಿ ಅದನ್ನು ಆ ಮಾಹಿತಿ ನೀಡಿದ ವ್ಯಕ್ತಿಗೆ ಬಹುಮಾನವಾಗಿ ನೀಡಲಾಗುತ್ತದೆ, ಇಷ್ಟು ಮಾತ್ರವಲ್ಲದೇ ಪಂಚಾಯ್ತಿ ಎದುರು ಎಲ್ಲರ ಸಮ್ಮುಖದಲ್ಲಿ ಆ ವ್ಯಕ್ತಿಗೆ ಛಡಿಯೇಟು ನೀಡಲಾಗುತ್ತದೆ. ಇದು ಪ್ರಬಲ ಸಂದೇಶ ರವಾನಿಸುತ್ತದೆ" ಎಂದು ಹೇಳುತ್ತಾರೆ.

ಸ್ಥಳೀಯ ನಿವಾಸಿ ಅಮಿತ್ ಆರ್ಯನ್ ಐದು ವರ್ಷಗಳ ಹಿಂದೆ ಸೇನೆ ಸೇರಿದ್ದರು. ಇದೀಗ ತಮ್ಮ ಹೆಜ್ಜೆಯಲ್ಲಿ ಗ್ರಾಮದ ಯುವಕರು ಮುನ್ನಡೆಯುವಂತೆ ಅವರು ಪ್ರೇರೇಪಿಸುತ್ತಿದ್ದಾರೆ. ಇದೀಗ ಅವರು ಸೇನೆಯ ತರಬೇತಿ ಶಾಲೆಯಲ್ಲಿ ನಾಯಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. "ನಾನು ಗ್ರಾಮಕ್ಕೆ ಬಂದಾಗಲೆಲ್ಲ, ನಮ್ಮ ಯುವಕರಿಗೆ ಸೇನೆ ಸೇರಿ ದೇಶ ಸೇವೆ ಮಾಡುವ ಅರ್ಹತೆ ಇದೆ ಎನ್ನುವುದು ಮನದಟ್ಟಾಗುತ್ತದೆ. ತರಬೇತಿ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಧಿಯಲ್ಲಿ ನಾನು ಸೇನೆ ಸೇರಲು ಅಗತ್ಯ ಕೌಶಲ ರೂಢಿಸಿಕೊಂಡೆ. ಇದೀಗ ಗ್ರಾಮದ ಯುವಕರಿಗೆ ಈ ತರಬೇತಿ ನೀಡುತ್ತಿದ್ದೇನೆ" ಎಂದು ಆರ್ಯನ್ ವಿವರಿಸಿದರು.

ಪ್ರಾದೇಶಿಕ ಪದವಿ ಕಾಲೇಜು ಮೈದಾನ ಪ್ರತೀ ಮುಂಜಾನೆ ಮಿಲಿಟರಿ ಮೈದಾನವಾಗುತ್ತದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಇದೀಗ ಗ್ರಾಮದಲ್ಲಿ 10ನೇ ತರಗತಿ ಉತ್ತೀರ್ಣರಾಗುವ ಪ್ರತಿಯೊಬ್ಬನೂ ಯೋಧನಾಗುವ ಕನಸು ಕಾಣುತ್ತಾನೆ ಎಂದು ನೆರೆಯ ಫತೇಹಬಾದ್‌ನ ಹರದಯಾಳ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News