ಗೋರಕ್ ಪುರ ದುರಂತ: 63 ಕ್ಕೇರಿದ ಮಕ್ಕಳ ಸಾವಿನ ಸಂಖ್ಯೆ

Update: 2017-08-12 06:38 GMT

 ಬಿಲ್ ಪಾವತಿಸದೆ ಆಮ್ಲಜನಕ ಪೂರೈಕೆ ನಿಲ್ಲಿಸಿದ್ದರಿಂದ ಮಕ್ಕಳ ಸಾವು: ಗೋರಕ್ ಪುರ ಡಿಸಿ 

ಲಕ್ನೋ, ಆ.12: ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿನ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ಮತ್ತೆ ಮೂವರು ಮಕ್ಕಳು ಮೃತಪಟ್ಟಿದ್ದು, ಆಗಸ್ಟ್ ಏಳರಿಂದ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮಕ್ಕಳ ವಾರ್ಡ್ ನಲ್ಲಿ ಮೃತ ಪಟ್ಟ ಒಟ್ಟು ಮಕ್ಕಳ ಸಂಖ್ಯೆ 63ಕ್ಕೆ ಏರಿದೆ.

ರಾಜ್ಯ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹಾಗೂ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಅವರು ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಈ ವಿಚಾರ ಚರ್ಚಿಸಲು ಭೇಟಿಯಾಗಲಿದ್ದಾರೆ. ಗೋರಖಪುರ ಮುಖ್ಯಮಂತ್ರಿಯ ತವರು ಕ್ಷೇತ್ರವೂ ಹೌದು. ಇಬ್ಬರು ಸಚಿವರು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆಂದು ತಿಳಿದು ಬಂದಿದ್ದು ‘‘ಈ ಘಟನೆಯ ಶೀಘ್ರ ಮತ್ತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’’ ಎಂದು ಆರೋಗ್ಯ ಸಚಿವ ಸಿಂಗ್ ಹೇಳಿದ್ದಾರೆ.

ಆದರೆ ಆಮ್ಲಜನಕ ಕೊರತೆಯಿಂದ ಆಸ್ಪತ್ರೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಉತ್ತರ ಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳು ತೀವ್ರ ಜ್ವರ ಮತ್ತು ಮಿದುಳಿನ ಉರಿಯೂತವುಂಟು ಮಾಡುವ ಎನ್ಸಿಫ್ಯಾಲಿಟಿಸ್ ನಿಂದ ಸಂಭವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಆದರೆ ಆಸ್ಪತ್ರೆ ಶುಕ್ರವಾರ ಬಿಡುಗಡೆಗೊಳಿಸಿದ ವರದಿಯಂತೆ ಈ ಸಾವುಗಳು ಮಕ್ಕಳ ವಾರ್ಡಿನಲ್ಲಿ ಆಮ್ಲಜನಕದ ಕೊರತೆಯಿಂದ ಸಂಭವಿಸಿವೆ.

‘‘ಆಮ್ಲಜನಕ ಪೂರೈಕೆದಾರರ ರೂ.67 ಲಕ್ಷ ಬಿಲ್ ಅನ್ನು ಆಸ್ಪತ್ರೆ ಪಾವತಿಸದೇ ಇರುವುದರಿಂದ ಆಸ್ಪತ್ರೆಗೆ ಅಗತ್ಯ ಆಮ್ಲಜನಕ ಪೂರೈಕೆ ಮಾಡಲಾಗಿಲ್ಲ. ಆದರೆ ಪೂರೈಕೆ ನಿಲ್ಲಿಸದಂತೆ ವಿತರಕರನ್ನು ಕೇಳಿಕೊಳ್ಳಲಾಗಿತ್ತು’’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೇಲಾ ಹೇಳಿದ್ದಾರೆ.

ರಾಜ್ಯ ಸರಕಾರವನ್ನು ದೂರಿದ ವಿಪಕ್ಷಗಳು:

ಈ ದುರಂತದಿಂದ ತಮಗೆ ಅತೀವ ದುಃಖವಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದರು.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ರಾಜ್ಯ ಸರಕಾರವನ್ನೇ ಈ ದುರಂತಕ್ಕೆ ಹೊಣೆಯಾಗಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News