ಬಿಆರ್ ಡಿ ಮೆಡಿಕಲ್ ಕಾಲೇಜ್ ನಲ್ಲಿ 6 ವರ್ಷಗಳಲ್ಲಿ 3 ಸಾವಿರ ಮಕ್ಕಳ ಸಾವು

Update: 2017-08-12 07:13 GMT

ಗೋರಖಪುರ, ಆ.12: ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ್ ಅವರ ಲೋಕಸಭಾ ಕ್ಷೇತ್ರ  ಗೋರಖಪುರದಲ್ಲಿರುವ ಬಿಆರ್ ಡಿ ಮೆಡಿಕಲ್ ಕಾಲೇಜ್ ನಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ 3 ಸಾವಿರ ಮಕ್ಕಳು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಅಮ್ಲಜನಕದ ಕೊರತೆಯಿಂದ ಎರಡು ದಿನಗಳ  ಅವಧಿಯಲ್ಲಿ 30 ಮಕ್ಕಳು ಸಾವಿಗೀಡಾಗಿದ್ದಾರೆಂದು ವರದಿ ತಿಳಿಸಿದೆ. ಐದು ದಿನಗಳ ಅವಧಿಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 63ಕ್ಕೇರಿದೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶದಲ್ಲಿ ಮಿದುಳು ಜ್ವರದ ಕಾರಣದಿಂದಾಗಿ ಚಿಕಿತ್ಸೆಗಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರು. ಜಪಾನ್ ಮೂಲದ  ಎನ್ಸೆಫಾಲಿಟಿಸ್ (ಜೆಇ) ಮತ್ತು ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ನಿಂದಾಗಿ ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ  ಪೂರ್ವ ಉತ್ತರ ಪ್ರದೇಶದಲ್ಲಿ 50 ಸಾವಿರ ಮಕ್ಕಳು ಕೊನೆಯುಸಿರೆಳೆದಿದ್ದರು ಎಂದು ವರದಿ ತಿಳಿಸಿದೆ.

ಬಿಆರ್ ಡಿ ಮೆಡಿಕಲ್ ಕಾಲೇಜ್ ನಲ್ಲಿ 2012ರಲ್ಲಿ 557, 2013ರಲ್ಲಿ 650, 2014ರಲ್ಲಿ 525, 2015ರಲ್ಲಿ 491, 2016ರಲ್ಲಿ 641 ಮತ್ತು 2017ರಲ್ಲಿ ಈ ತನಕ 163 ಮಕ್ಕಳು ಮೃತಪಟ್ಟಿದ್ದಾರೆ ಎನ್ನುವುದು ಮೆಡಿಕಲ್ ಕಾಲೇಜ್ ದಾಖಲೆಯಿಂದ ತಿಳಿದು ಬಂದಿದೆ.
ಮುಖ್ಯ ಮಂತ್ರಿ ಆದಿತ್ಯನಾಥ್ ಅವರ ಊರಲ್ಲಿ ವೈದ್ಯರುಗಳ  ದಿವ್ಯ ನಿರ್ಲಕ್ಷ್ಯದಿಂದಾಗಿ  ಭಾರೀ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗಿದೆ.“ ಬಿಆರ್ ಡಿ ಆಸ್ಪತ್ರೆ ಮಕ್ಕಳ ಮೆದುಳು ಸೋಂಕಿಗೆ ಚಿಕಿತ್ಸೆ ನೀಡುವ ಈ ಭಾಗದ  ಏಕೈಕ ಆಸ್ಪತ್ರೆಯಾಗಿದೆ. ಆದರೆ ಇಲ್ಲಿ ಬಹುತೇಕ ಮಂದಿ ಮಕ್ಕಳು  ವೈದ್ಯರ ನಿರ್ಲಕ್ಷ್ಯದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’’ ಎಂದು ಗೋರಖಪುರದ ತಜ್ಞ ವೈದ್ಯರಾದ ಡಾ.ಎ.ಕೆ. ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಮೇ ತಿಂಗಳಲ್ಲಿ  ಆಸ್ಪತ್ರೆಯಲ್ಲಿ ಅಗತ್ಯದ ಸೌಲಭ್ಯಗಳಿಗಾಗಿ ಕಾಲೇಜಿನ ಆಡಳಿತ ಸಮಿತಿ 37 ಕೋಟ ರೂ. ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರಕಾರ ಈ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸಿತ್ತು ಎಂದು ಗೊತ್ತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News