ಅಸಂಖ್ಯಾತ ಕಂದಮ್ಮಗಳ ಜೀವ ಕಾಪಾಡಿದ ಡಾ. ಕಫೀಲ್ ಖಾನ್

Update: 2017-08-12 19:02 GMT

ಹೊಸದಿಲ್ಲಿ, ಆ. 12 : ಗೋರಖ್ ಪುರದ ಬಾಬಾ ರಾಘವದಾಸ್ ಆಸ್ಪತ್ರೆಯಲ್ಲಿ ನಡೆದ ಭೀಕರ ದುರಂತದ ನಡುವೆಯೂ ತನ್ನಿಂದ ಸಾಧ್ಯವಿದ್ದಷ್ಟು ಕಂದಮ್ಮಗಳನ್ನು ಕಾಪಾಡಿದ ವೈದ್ಯರೊಬ್ಬರು ಹೀರೊ ಆಗಿ ಮೂಡಿ ಬಂದಿದ್ದಾರೆ.

ಆಸ್ಪತ್ರೆಯ ಮೆದುಳು ಜ್ವರ ವಿಭಾಗದ ಮುಖ್ಯಸ್ಥ ಡಾ. ಕಫೀಲ್ ಖಾನ್ ಅವರ ಸಮಯ ಪ್ರಜ್ಞೆ  ಹಾಗೂ ಮಾನವೀಯ ಸೇವೆ ಇಲ್ಲದಿದ್ದರೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಗಸ್ಟ್ 10ರ ರಾತ್ರಿ ಆಸ್ಪತ್ರೆಯ ಕೇಂದ್ರೀಯ ಆಮ್ಲಜನಕ ಪೂರೈಕೆ ಪೈಪ್‌ಲೈನ್ ಖಾಲಿಯಾಗುವ ಸೂಚನೆ ನೀಡಲು ಪ್ರಾರಂಭಿಸಿತು. ಅಂದರೆ ಮುಂದಿನ ಎರಡು ಗಂಟೆ ಮಾತ್ರ ಆಮ್ಲಜನಕ ಪೂರೈಕೆ ಆಗುತ್ತಿತ್ತು. ಚಿಂತಾಜನಕ ಪರಿಸ್ಥಿತಿಯಲ್ಲಿರುವ ಹಸುಳೆಗಳಿಗೆ ಆಮ್ಲಜನಕ ಪೂರೈಕೆಯೊಂದೇ ಜೀವನಾಧಾರವಾಗಿತ್ತು.

ಕೂಡಲೇ ಆಮ್ಲಜನಕ ಪೂರೈಕೆದಾರನಿಗೆ ಕರೆ ಮಾಡಿದರೂ ಆತ ಬಾಕಿ  ಹಣ ಪಾವತಿಸಿದ ಬಳಿಕವೇ ಸಿಲಿಂಡರ್ ಕಳಿಸಬಹುದು ಎಂದು ಹೇಳಿದ.  ಡಾ. ಕಫೀಲ್ ತಕ್ಷಣ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳ ಜೊತೆ ತನ್ನ ಸ್ನೇಹಿತನ ಖಾಸಗಿ ಆಸ್ಪತ್ರೆಗೆ ಹೋಗಿ ಮೂರು ಆಮ್ಲಜನಕ ಸಿಲಿಂಡರ್ ತಂದರು. ಈ ನಡುವೆ ಆಸ್ಪತ್ರೆ ಸಿಬ್ಬಂದಿಗಳು ಹೇಗೆ ಮಕ್ಕಳನ್ನು ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಿದ್ದರು ಡಾ. ಕಫೀಲ್.

ಆದರೆ ಮೂರು ಸಿಲಿಂಡರ್ ಕೇವಲ ಅರ್ಧ ಗಂಟೆಗೆ ಮಾತ್ರ ಸಾಕಾಗುತ್ತಿತ್ತು. ಮತ್ತೆ ಹೊರಟ ಡಾ. ಕಫೀಲ್ ತನಗೆ ಗೊತ್ತಿರುವ ಎಲ್ಲ ಆಸುಪಾಸಿನ ಆಸ್ಪತ್ರೆಗಳನ್ನು ಸಂಪರ್ಕಿಸಿ 12 ಸಿಲಿಂಡರ್ ಗಳನ್ನು ತಂದರು. ಅಷ್ಟು ಹೊತ್ತಿಗೆ ತಕ್ಷಣ ನಗದು ಪಾವತಿಸಿದರೆ ಸಿಲಿಂಡರ್ ಪೂರೈಕೆ ಮಾಡುವುದಾಗಿ ಸ್ಥಳೀಯ ಪೂರೈಕೆದಾರನೊಬ್ಬ ಹೇಳಿದ.  ತಕ್ಷಣ ತನ್ನ ಎಟಿಎಂ ಅನ್ನು ಸಿಬ್ಬಂದಿಗೆ ನೀಡಿ ಹತ್ತು ಸಾವಿರ ರೂಪಾಯಿ ತರಿಸಿ ಹೆಚ್ಚುವರಿ ಸಿಲಿಂಡರ್ ತರಿಸಿದರು ಡಾ. ಕಫೀಲ್.

"ಉಳಿದವರೆಲ್ಲರೂ ಕೈಬಿಟ್ಟಾಗಲೂ ಡಾ. ಕಫೀಲ್ ಅವರು ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದರು ಹಾಗೂ ಮಾನವೀಯವಾಗಿ ವರ್ತಿಸಿ ಹಲವರ ಜೀವ ಉಳಿಸಿದರು " ಎಂದು ಪ್ರತ್ಯಕ್ಷದರ್ಶಿ ಗೌರವ್ ತ್ರಿಪಾಠಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News