ಮಲಹೊರುವ ಕಾರ್ಮಿಕರ ಬಗ್ಗೆ ತಪ್ಪು ಮಾಹಿತಿ: ಸರಕಾರದ ಬಗ್ಗೆ ಮಾನವ ಹಕ್ಕು ಕಾರ್ಯಕರ್ತರ ಆಕ್ರೋಶ

Update: 2017-08-13 13:54 GMT

ಹೊಸದಿಲ್ಲಿ, ಆ.13: ದೇಶದಲ್ಲಿ 2013ರ ಬಳಿಕ ಕಾರ್ಯನಿರ್ವಹಣೆಯ ಸಂದರ್ಭ ಮೃತಪಟ್ಟ ಮಲಹೊರುವ ಕಾರ್ಮಿಕರ ( ಜಾಡಮಾಲಿ ) ಸಂಖ್ಯೆ 70 ಎಂದು ಸರಕಾರ ಹೇಳುತ್ತಿದೆ. ಆದರೆ ಈ ಅಂಕಿಅಂಶ ಸರಿಯಲ್ಲ, ಮೃತಪಟ್ಟವರ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದು ಮಾನವ ಹಕ್ಕು ಕಾರ್ಯಕರ್ತರು ಹೇಳುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ 10 ಮಂದಿ ಮಲಹೊರುವ ಕಾರ್ಮಿಕರು ಕರ್ತವ್ಯದ ಸಂದರ್ಭ ಮೃತಪಟ್ಟಿದ್ದಾರೆ . ಈ ವರ್ಷ ದೇಶದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭ 126 ಮಂದಿ ಸಾವನ್ನಪ್ಪಿದ್ದು ಇದರಲ್ಲಿ 14 ಪ್ರಕರಣ ದಿಲ್ಲಿಯಲ್ಲೇ ನಡೆದಿದೆ. ಜುಲೈ 31ರವರೆಗೆ ದೇಶದಾದ್ಯಂತ ಒಟ್ಟು 13,368 ದೈಹಿಕವಾಗಿ ಚರಂಡಿ ಸ್ವಚ್ಛಗೊಳಿಸುವ(ಮಲಹೊರುವ) ಕಾರ್ಮಿಕರಿದ್ದಾರೆ ಎಂದು ಕಳೆದ ವಾರ ರಾಜ್ಯಸಭೆಗೆ ನೀಡಿದ ಮಾಹಿತಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ತಿಳಿಸಿತ್ತು.

 22 ರಾಜ್ಯಗಳಲ್ಲಿ ಮಲಹೊರುವ ಕಾರ್ಮಿಕರೇ ಇಲ್ಲ. ಶೇ.93ರಷ್ಟು ಕಾರ್ಮಿಕರಿಗೆ (12,488 ಕಾರ್ಮಿಕರಿಗೆ) ‘ಒಂದು ಅವಧಿಯ ಹಣದ ನೆರವು’ ಪ್ರಕ್ರಿಯೆಯಡಿ ಪುನಶ್ಚೈತನ್ಯ ಪರಿಹಾರಧನ ನೀಡಲಾಗಿದೆ ಎಂದು ಸರಕಾರ ತಿಳಿಸಿತ್ತು.

     ಸರಕಾರ ನೀಡಿರುವ ಅಂಕಿಅಂಶ ಸರಿಯಲ್ಲ. ಸಾವಿರಾರು ಜನರಿಗೆ ಇನ್ನೂ ಪುನಶ್ಚೈತನ್ಯ ಪರಿಹಾರಧನ ದೊರೆತಿಲ್ಲ ಎಂದು ಮಲಹೊರುವ ಕಾರ್ಯವನ್ನು ರದ್ದುಗೊಳಿಸಲು ನಡೆಸಿದ ಪ್ರಯತ್ನಕ್ಕಾಗಿ 2016ರಲ್ಲಿ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತರಾದ ಹಾಗೂ ‘ಸಫಾಯಿ ಕರ್ಮಚಾರಿ ಆಂದೋಲನ’ದ ರಾಷ್ಟ್ರೀಯ ಸಂಯೋಜಕ ಬೆಝ್‌ವಾಡ ವಿಲ್ಸನ್ ಹೇಳುತ್ತಾರೆ.

   ದೇಶದಲ್ಲಿ ಕಾರ್ಮಿಕರು ಕೈಗಳನ್ನು ಬಳಸಿ ಶೌಚಾಲಯ ಅಥವಾ ಒಳಚರಂಡಿ ಸ್ವಚ್ಛಗೊಳಿಸುವುದು, ಮಲ ಹೊರುವುದು, ವಿಲೇವಾರಿ ಮಾಡುವುದು ಮುಂತಾದ ಕೃತ್ಯಗಳನ್ನು 1993ರಲ್ಲಿ ನಿಷೇಧಿಸಲಾಗಿದೆ. ಆದರೆ ಕೆಲವೆಡೆ ಈ ಅನಿಷ್ಟ ಪದ್ದತಿ ಇನ್ನೂ ಚಾಲ್ತಿಯಲ್ಲಿದೆ ಮತ್ತು ಇದರಿಂದ ಹಲವಾರು ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

2011ರಲ್ಲಿ ನಡೆದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 1,82,505 ಕುಟುಂಬಗಳ ಕನಿಷ್ಠ ಒಬ್ಬ ಸದಸ್ಯ ಕೈಗಳನ್ನು ಬಳಸಿ ಚರಂಡಿ, ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಾನೆ.

ಆದರೆ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಇಂತಹ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರಲ್ಲಿ ಶೇ.99ರಷ್ಟು ಮಂದಿ ದಲಿತರು. ದಲಿತರನ್ನು ತನ್ನ ಮತಬ್ಯಾಂಕ್ ಎಂದು ಕೇಂದ್ರ ಸರಕಾರ ಪರಿಗಣಿಸದಿರುವ ಕಾರಣ ಇವರ ಬಗ್ಗೆ ಸರಕಾರ ನಿರ್ಲಕ್ಷದ ಧೋರಣೆ ತಳೆದಿದೆ ಎಂದು ವಿಲ್ಸನ್ ಹೇಳುತ್ತಾರೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News