ದೇವಕಿ, ಯಶೋದೆಯರ ಕಣ್ಣೀರೂ,ಗೋರಖ್‌ಪುರದ ಕಂಸನ ಕೃಷ್ಣಭಕ್ತಿ

Update: 2017-08-15 04:57 GMT

70 ತುಂಬಿದ ದೇಶದ ಸ್ವಾತಂತ್ರದ ಮೊಗದಲ್ಲಿ ಸೂತಕದ ಛಾಯೆ. ಉತ್ತರ ಪ್ರದೇಶದಲ್ಲಿ 70ಕ್ಕೂ ಅಧಿಕ ಮಕ್ಕಳು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿರುವ ಘಟನೆ ಮತ್ತು ಆನಂತರದ ಬೆಳವಣಿಗೆ ಈ ದೇಶದ ಸ್ವಾತಂತ್ರದ ರುದ್ರ ರೂಪಕವಾಗಿದೆ. ಇದು ದೇಶದ ಸ್ವಾತಂತ್ರ ನಿಜಕ್ಕೂ ದೊರಕಿರುವುದು ಯಾರಿಗೆ ಎನ್ನುವುದನ್ನು ಈ ಹಸುಳೆಗಳ ಸಾವು ಈಗಾಗಲೇ ಘೋಷಿಸಿ ಬಿಟ್ಟಿದೆ. 70 ವರ್ಷಗಳಲ್ಲಿ ಈ ದೇಶದ ಆರೋಗ್ಯದ ಮಟ್ಟ ತಲುಪಿರುವ ಪಾತಾಳವನ್ನು ಇದು ಹೇಳುತ್ತಿದೆ. ಇಂತಹದೊಂದು ಆಘಾತಕಾರಿಯಾದ ಘಟನೆ ನಡೆದಿದ್ದರೂ ಈ ದೇಶದ ಪ್ರಧಾನಿ ಆ ಕುರಿತಂತೆ ಈವರೆಗೆ ತುಟಿ ಬಿಚ್ಚಿಲ್ಲ.

ಪ್ರಧಾನಿಯ ವಕ್ತಾರರಂತಿರುವ ಅಮಿತ್ ಶಾ ಅವರು ಈ ಘಟನೆಯ ಬಗ್ಗೆ ವ್ಯಕ್ತಪಡಿಸಿರುವ ಪ್ರತಿಕ್ರಿಯೆ, ಸ್ವಾತಂತ್ರಕ್ಕೆ ಹೊಸ ವ್ಯಾಖ್ಯಾನ ನೀಡಿದೆ. ಗೋರಖ್‌ಪುರದ ಮಕ್ಕಳ ಸಾವಿನ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ‘‘ಈ ದೇಶದಲ್ಲಿ ಇಂತಹ ಘಟನೆ ಸಾಮಾನ್ಯ’’ ಎಂದು ಹೇಳಿದರು. ಕನಿಷ್ಠ ಔಪಚಾರಿಕ ವಿಷಾದವನ್ನೂ ವ್ಯಕ್ತಪಡಿಸದೇ, ಇಂತಹ ಘಟನೆಗಳು ಈ ದೇಶದಲ್ಲಿ ಪದೇ ಪದೇ ನಡೆಯುತ್ತಿರುವುದರಿಂದ, ಗೋರಖ್ ಪುರ ಘಟನೆಯನ್ನು ವಿಶೇಷವೆಂದು ಪರಿಗಣಿಸಬೇಕಾಗಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಸದ್ಯಕ್ಕೆ ಪ್ರಧಾನಿಯವರು ದೇಶದ ಯಾವುದೇ ದುರ್ಘಟನೆಗಳಿಗೆ ಪ್ರತಿಕ್ರಿಯೆಯನ್ನು ನೀಡುವ ಪ್ರವೃತ್ತಿ ಹೊಂದಿಲ್ಲದ ಕಾರಣ, ಪ್ರಧಾನಿಯವರ ಆನಂತರದ ಸ್ಥಾನದಲ್ಲಿ ಸದ್ಯಕ್ಕೆ ಗುರುತಿಸಿಕೊಂಡಿರುವ ಅಮಿತ್ ಶಾ ಅವರ ಹೇಳಿಕೆಯನ್ನೇ ಪ್ರಧಾನಿಯ ಹೇಳಿಕೆಯಾಗಿ ನಾವು ಸ್ವೀಕರಿಸಬೇಕಾದಂತಹ ಸ್ಥಿತಿಯಲ್ಲಿದ್ದೇವೆ. ಈ ದೇಶದಲ್ಲಿ ಇಂತಹದು ಈ ಹಿಂದೆಯೂ ಸಂಭವಿಸಿದ ಕಾರಣಕ್ಕಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲವೆಂದಾದರೆ, ನಾವು ಮುಂದೆಯೂ ಇಂತಹ ದುರಂತಗಳನ್ನು ಎದುರು ನೋಡುವು ಅನಿವಾರ್ಯವಾಗುತ್ತದೆ.

  ಅಮಿತ್ ಶಾರ ಹೇಳಿಕೆ, ಗುಜರಾತ್ ಹತ್ಯಾಕಾಂಡದ ಕುರಿತಂತೆ ನರೇಂದ್ರ ಮೋದಿಯವರು ಈ ಹಿಂದೆ ನೀಡಿರುವ ಪ್ರತಿಕ್ರಿಯೆಯನ್ನು ಹೋಲುತ್ತದೆ. ಕಾರು ವೇಗವಾಗಿ ಚಲಿಸುವಾಗ ಕೆಲವೊಮ್ಮೆ ನಾಯಿಮರಿಗಳು ಅದರ ಅಡಿಗೆ ಬಿದ್ದು ಸಾಯುವುದು ಸಹಜ ಎಂದ ಮೋದಿಯನ್ನೇ ಅನುಕರಿಸಿ, ಉತ್ತರ ಪ್ರದೇಶದ ಗೋರಖ್‌ಪುರದ ಆಸ್ಪತ್ರೆಯ ದುರಂತವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಇದರ ಕುರಿತಂತೆ ಸರಕಾರ ಯಾವ ಹೊಣೆಗಾರಿಕೆಯನ್ನೂ ವಹಿಸುವುದಿಲ್ಲ ಎಂದೂ ಅವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಗೋರಖ್‌ಪುರ ಆಸ್ಪತ್ರೆಯಲ್ಲಿ ನಡೆದಿರುವ ದುರಂತಕ್ಕೆ ಬರೇ ಅಲ್ಲಿಯ ಆಸ್ಪತ್ರೆಯ ಸಿಬ್ಬಂದಿಯನ್ನು ಹೊಣೆ ಮಾಡಿ ಪ್ರಕರಣವನ್ನು ಮುಗಿಸಿ ಬಿಡುವ ಉದ್ದೇಶವನ್ನು ಸರಕಾರ ಹೊಂದಿದೆಯೇ? ಗೋರಖ್‌ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಿಂದ ದುರಂತ ಸಂಭವಿಸಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಆದಿತ್ಯನಾಥ್ ಅವರೇ ಹೇಳಿ ಗೊಂದಲ ಸೃಷ್ಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ಈ ಆಸ್ಪತ್ರೆಯಲ್ಲಿ ಹಲವು ಸಮಯದಿಂದ ಇಂತಹ ಸಾವುಗಳು ಸಂಭವಿಸುತ್ತಲೇ ಇವೆ ಮತ್ತು ಈ ಬಗ್ಗೆ ಸರಕಾರ ಘೋರ ನಿರ್ಲಕ್ಷ ವಹಿಸಿತ್ತು ಎನ್ನುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿರುವ ಮೂಲಭೂತ ಅಗತ್ಯಗಳ ಕುರಿತಂತೆ ಆಸ್ಪತ್ರೆ ಪದೇ ಪದೇ ಸರಕಾರಕ್ಕೆ ಮಾಹಿತಿಗಳನ್ನು ನೀಡಿತ್ತು ಮತ್ತು ಅನುದಾನಗಳಿಗಾಗಿ ಮೊರೆ ಹೋಗಿತ್ತು. ಆದರೆ ಈ ಬಗ್ಗೆ ಸರಕಾರ ಸ್ಪಂದಿಸಿರಲಿಲ್ಲ. ಗೋರಖ್ ಪುರದಲ್ಲಿ ಕೇವಲ ಆಕ್ಸಿಜನ್ ಕೊರತೆ ಮಾತ್ರ ಕಂಡು ಬಂದಿರುವುದಲ್ಲ. ಅದರಾಚೆಗೆ ಇನ್ನಾವುದೋ ಕಾಣದ ಶಕ್ತಿಗಳು ಈ ಸಾವಿನ ಹಿಂದಿವೆೆ. ಈ ಬಗ್ಗೆ ಗಂಭೀರ ತನಿಖೆ ನಡೆಯದಂತೆ ಸರಕಾರವೇ ಅಡೆತಡೆಗಳನ್ನು ಒಡ್ಡುತ್ತಿದೆ. ಆ ಮೂಲಕ ಬಡವರ ಮಕ್ಕಳ ಜೀವ ಈ ದೇಶದಲ್ಲಿ ಗೋವಿನ ಜೀವಕ್ಕಿಂತ ಅಗ್ಗ ಎನ್ನುವುದನ್ನು ಜಾಹೀರು ಪಡಿಸಿದೆ.

  ಗೋರಖ್ ಪುರದಲ್ಲಿ ನಡೆದಿರುವ ದುರಂತವನ್ನು ಅಲ್ಲಿನ ರಾಜ್ಯ ಸರಕಾರವೇ ನೇಮಿಸಿರುವ ಸಮಿತಿಯೊಂದು ತನಿಖೆ ನಡೆಸುತ್ತದೆಯಂತೆ. ಆದರೆ ಈ ಪ್ರಕರಣದಲ್ಲಿ ಸ್ವತಃ ಸರಕಾರವೇ ಆರೋಪಿ ಸ್ಥಾನದಲ್ಲಿ ನಿಂತಿದೆ. ಇಲ್ಲಿ ಬೇಜವಾಬ್ದಾರಿ ವೈದ್ಯರದ್ದಲ್ಲ, ಬದಲಿಗೆ ಆಡಳಿತ ಮಂಡಳಿಯದ್ದು. ಈ ಆಡಳಿತ ಮಂಡಳಿಯೊಳಗಿರುವ ಮುಖಂಡರ ಸಂಬಂಧ ಸರಕಾರ ಅಥವಾ ರಾಜಕಾರಣಿಗಳ ಜೊತೆಗೆ ಸಂಬಂಧವಿರುವುದು ಸಹಜ. ಹೀಗಿರುವಾಗ, ರಾಜ್ಯ ಸರಕಾರವೇ ನಡೆಸುವ ತನಿಖೆ ಅಂತಿಮವಾಗಿ ಆರೋಪಿಗಳನ್ನು ರಕ್ಷಿಸುವುದರಲ್ಲಷ್ಟೇ ಯಶಸ್ವಿಯಾದೀತು. ಇಡೀ ಘಟನೆ ಒಂದು ನ್ಯಾಯಾಂಗ ತನಿಖೆಗೆ ಸರ್ವ ರೀತಿಯಲ್ಲಿ ಅರ್ಹವಾಗಿದೆ. ಈ ಘಟನೆ ಕೇವಲ ಒಂದು ಆಸ್ಪತ್ರೆಗೆ ಸಂಬಂಧಿಸಿರುವುದು ಅಲ್ಲ.

ಈ ದೇಶದ ಆರೋಗ್ಯ ವ್ಯವಸ್ಥೆಗೆ ಸಂಬಂಧಿಸಿರುವುದು. ಇದನ್ನು ಸುತ್ತುವರಿದಿರುವ ಬೃಹತ್ ಮಾಫಿಯಾಗಳು, ರಾಜಕಾರಣಿಗಳು, ಅಧಿಕಾರಶಾಹಿ ವ್ಯವಸ್ಥೆ ಇವೆಲ್ಲವನ್ನೂ ಕೇಂದ್ರೀಕರಿಸಿ ತನಿಖೆ ನಡೆಯಬೇಕು ಮತ್ತು ಆರೋಪಿಗಳನ್ನು ಗುರುತಿಸುವ ಕೆಲಸ ನಡೆಯಬೇಕು. ಗೋರಖ್ ಪುರ ದುರಂತ ಯಾವ ಕಾರಣಕ್ಕೂ ಇತರ ಆಸ್ಪತ್ರೆಗಳಿಗೆ ಮಾದರಿಯಾಗಬಾರದು. ಇಲ್ಲಿನ ಸಿಬ್ಬಂದಿಗೆ ಕಠಿಣ ಶಿಕ್ಷೆಯಾದರೆ ಮಾತ್ರ, ಮುಂದೆ ಇಂತಹ ಘಟನೆ ಇತರ ಆಸ್ಪತ್ರೆಗಳಲ್ಲಿ ನಡೆಯದೇ ಇರುವಂತೆ ತಡೆಯಬಹುದು. ವಿಪರ್ಯಾಸವೆಂದರೆ, ಘಟನೆಯ ಗಂಭೀರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ರಾಜ್ಯದಲ್ಲಿ ಕೃಷ್ಣಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲು ಜನರಿಗೆ ಕರೆ ನೀಡಿದ್ದಾರೆ. ತನ್ನನ್ನು ತಾನು ಸನ್ಯಾಸಿ, ಯೋಗಿ ಎಂದು ಕರೆಯುವ ಈ ಮುಖ್ಯಮಂತ್ರಿ ಸೂತಕದ ಮನೆಯೊಳಗೆ ನಿಂತು ಇಂತಹದೊಂದು ಕರೆ ನೀಡುತ್ತಾರೆ ಎಂದಾದರೆ, ಈ ಮನುಷ್ಯ ಅದೆಷ್ಟು ಸಂವೇದನಾಹೀನರಾಗಿರಬೇಕು? ಕನಿಷ್ಠ ಶೋಕಸಂದೇಶವನ್ನೂ ನೀಡದ ಮುಖ್ಯಮಂತ್ರಿ ಕೃಷ್ಣಾಷ್ಟಮಿಯ ಅಣಕ ಮಾಡುವುದಕ್ಕೆ ಹೊರಟಿದ್ದಾರೆ.

ಕಂಸನ ಸಾವು ನವಜಾತ ಶಿಶುಗಳ ಕೊಲೆಯಿಂದಲೇ ಸಂಭವಿಸಿತು. ತನಗೆ ಅಪಾಯವಿದೆಯೆಂದು ತನ್ನ ತಂಗಿಯ ಮಕ್ಕಳನ್ನೇ ಕೊಂದು ಅದನ್ನು ಸಮರ್ಥಿಸಿಕೊಂಡ ಕಂಸ, ಅಂತಿಮವಾಗಿ ಆ ಕೃತ್ಯಕ್ಕೇ ತಾನೇ ಬಲಿಯಾಗಬೇಕಾಗುತ್ತದೆ. ಕೃಷ್ಣಾಷ್ಟಮಿಯ ಹೊತ್ತಿನಲ್ಲೇ 70 ಮಕ್ಕಳ ಸಾವಿನ ಪರೋಕ್ಷ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಆದಿತ್ಯನಾಥ್, ಉತ್ತರ ಪ್ರದೇಶದ ಪಾಲಿಗೆ ಆಧುನಿಕ ಕಂಸನಾಗಲು ಹೊರಟಿದ್ದಾರೆ. ಆ ಮೂಲಕ ಕೃಷ್ಣಾಷ್ಟಮಿಯ ವೌಲ್ಯವನ್ನೇ ಬುಡಮೇಲುಗೊಳಿಸಿದ್ದಾರೆ. ಸ್ವತಃ ಕೃಷ್ಣನಿಗೇ ಅವಮಾನವಾಗುವಂತಹ ಕೃತ್ಯವೆಸಗಿದ್ದಾರೆ. ಗೋರಖ್‌ಪುರದ ಮಕ್ಕಳ ಸಾವನ್ನು ಮುಚ್ಚಿ ಹಾಕಲು ಗೌಜಿ ಗದ್ದಲಗಳ ಜೊತೆಗೆ ಕೃಷ್ಣಾಷ್ಟಮಿ ಆಚರಿಸಿದಾಕ್ಷಣ ಆದಿತ್ಯನಾಥರು ಕೃಷ್ಣನನ್ನು ಒಲಿಸಿಕೊಳ್ಳಲು ಸಾಧ್ಯವೇ ಇಲ್ಲ.

ಆ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವ ಅಪಾರ ಸಂಖ್ಯೆಯ ಬಡವರ ಮನೆಯ ಬಾಲ ಕೃಷ್ಣರಿಗೆ ನ್ಯಾಯ ನೀಡುವುದೇ ಅರ್ಥಪೂರ್ಣ ಕೃಷ್ಣಾಷ್ಟಮಿ ಆಚರಿಸಲು ಆದಿತ್ಯನಾಥ್‌ಗೆ ಇರುವ ಮಾರ್ಗ. ನೂರಾರು ದೇವಕಿ, ಯಶೋದೆಯರ ಕಣ್ಣೀರಿನ ನಡುವೆ ಸಂಭ್ರಮದಿಂದ ಆಚರಿಸುವ ಕೃಷ್ಣಾಷ್ಟಮಿ, ಯಾವ ರೀತಿಯಲ್ಲೂ ಉತ್ತರ ಪ್ರದೇಶಕ್ಕಾಗಲಿ, ಆದಿತ್ಯನಾಥರಿಗಾಗಲಿ ಒಳಿತನ್ನು ಮಾಡಲಾರದು. ಆದುದರಿಂದ ಗೋರಖ್ ಪುರದ ಆಸ್ಪತ್ರೆಯಲ್ಲಿ ನಡೆದ ದುರಂತವನ್ನು ಒಂದು ರಾಷ್ಟ್ರೀಯ ಅವಮಾನ ಎಂದು ಘೋಷಿಸಿ, ಗಂಭೀರ ತನಿಖೆ ನಡೆಸಬೇಕು. ಮುಖ್ಯವಾಗಿ ರಾಜ್ಯ ಆರೋಗ್ಯ ಸಚಿವರ ರಾಜೀನಾಮೆಯನ್ನು ಕೋರಬೇಕು. ಈ ಮೂಲಕ 71ನೆ ಸ್ವಾತಂತ್ರ ಮತ್ತು ಕೃಷ್ಣಾಷ್ಟಮಿ ಎರಡೂ ಅರ್ಥಪೂರ್ಣವಾಗಿ ಆಚರಣೆಯಾಗುವಂತೆ ಅವರು ನೋಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News