ಕಾಶ್ಮೀರಿಗಳನ್ನು ಅಪ್ಪಿಕೊಳ್ಳುವುದರಿಂದ ಕಾಶ್ಮೀರದ ಸಮಸ್ಯೆಗೆ ಪರಿಹಾರ ಸಾಧ್ಯ: ಪ್ರಧಾನಿ ಮೋದಿ

Update: 2017-08-15 08:21 GMT

ಹೊಸದಿಲ್ಲಿ,ಆ.15: ‘ಧರೆಯ ಮೇಲಿನ ಸ್ವರ್ಗ’ವೆಂಬ ಕಾಶ್ಮೀರದ ಹೆಗ್ಗಳಿಕೆಯನ್ನು ಮರುಸ್ಥಾಪಿಸಲು ಸರಕಾರವು ಬದ್ಧವಾಗಿದೆ ಎಂದು ಮಂಗಳವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯದ ಯುವಜನರನ್ನು ಮುಖ್ಯವಾಹಿನಿಗೆ ತರುವುದರ ಲ್ಲಿಯೇ ಜಮ್ಮ್ಮು-ಕಾಶ್ಮೀರದ ಪ್ರಗತಿಯಿದೆ ಎಂದು ಒತ್ತಿ ಹೇಳಿದರು. ಆದರೆ ಭಯೋತ್ಪಾದನೆ ವಿರುದ್ಧ ದಾಳಿ ಮುಂದುವರಿಯಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ದಿಲ್ಲಿಯ ಕೆಂಪುಕೋಟೆಯಿಂದ ಸ್ವಾತಂತ್ರೋತ್ಸವ ಭಾಷಣವನ್ನು ಮಾಡುತ್ತಿದ್ದ ಪ್ರಧಾನಿ, ಜಮು-ಕಾಶ್ಮೀರದ ಪ್ರಗತಿಗಾಗಿ ನಾವೆಲ್ಲ ಶ್ರಮಿಸಬೇಕಿದೆ. ಸಮಸ್ಯೆಗಳು ಗುಂಡುಗಳು ಅಥವಾ ಬೈಗುಳಗಳಿಂದ ಪರಿಹಾರಗೊಳ್ಳುವುದಿಲ್ಲ. ಕಾಶ್ಮೆರಿಗಳನ್ನು ನಮ್ಮವರೆಂದು ಅಪ್ಪಿಕೊಳ್ಳುವುದರಿಂದ ಮಾತ್ರ ಅವರ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಹೇಳಿದರು.

ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ನಲುಗಿರುವ ಜಮ್ಮು-ಕಾಶ್ಮೀರವನ್ನು ಅಭಿವೃದ್ಧಿಗೊಳಿಸಲು ಸರಕಾರವು ದೃಢ ನಿರ್ಧಾರವನ್ನು ಮಾಡಿದೆ ಎಂದ ಅವರು ಇದಕ್ಕಾಗಿ ಮಾರ್ಗಸೂಚಿಯನ್ನು ಮಂಡಿಸಿದರು. ಯುವಜನರಿಗೆ ಶಿಕ್ಷಣ, ಅವರಿಗೆ ಉದ್ಯೋಗ ಒದಗಿಸುವಿಕೆ, ಮುಖ್ಯವಾಹಿನಿಗೆ ಅವರ ಸೇರ್ಪಡೆ, ವ್ಯವಹಾರ ಮತ್ತು ಉದ್ಯೋಗ ವೃದ್ಧಿಯೊಂದಿಗೆ ಅವರು ಸಂತಸ ಪಡಲು ಕಾರಣಗಳನ್ನೊದಗಿಸುವುದು ಸರಕಾರದ ಗುರಿಯಾಗಿದೆ ಎಂದರು.

ಹಿಂಸೆಯತ್ತ ಆಕರ್ಷಿತರಾಗಿರುವ ರಾಜ್ಯದ ಯುವಜನತೆಗೆ ಅದರಿಂದ ವಿಮುಖ ರಾಗುವಂತೆ ಮನವಿ ಮಾಡಿಕೊಂಡ ಮೋದಿ, ಭಾರತೀಯ ಪ್ರಜಾಪ್ರಭುತ್ವದಲ್ಲಿ ನಿಮ್ಮ ಧ್ವನಿಗಳು ಕೇಳುವಂತೆ ಮಾಡುವ ಪ್ರತಿಯೊಂದೂ ಹಕ್ಕು ನಿಮಗಿದೆ ಎಂದರು.

ಇಡೀ ದೇಶವೇ ಜಮ್ಮು-ಕಾಶ್ಮೀರದ ಜನತೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆಯಾದರೂ, ಭಯೋತ್ಪಾದನೆಯಿಂದ ನಾವು ಬಹಳಷ್ಟು ಸಂಕಷ್ಟಗಳನ್ನು ಅನುಭವಿಸಿದ್ದೇವೆ. ಭೀತಿವಾದ ಅಥವಾ ಭಯೋತ್ಪಾದಕರ ಬಗ್ಗೆ ಮೃದು ನಿಲುವು ತಳೆಯುವುದು ಸಾಧ್ಯವೇ ಇಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News