ಪರಭಾಷೆ ಆಧಿಪತ್ಯದಿಂದ ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ಧಕ್ಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-08-15 13:46 GMT

ಬೆಂಗಳೂರು, ಆ.15: ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ. ನಮ್ಮ ನೆಲದ ಮೇಲೆ ಪರಭಾಷೆ ಆಧಿಪತ್ಯ ಸಾಧಿಸುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ಧಕ್ಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 71ನೆ ಸ್ವಾತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಕ್ಷಣಾ ತಂಡಗಳಿಂದ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದರು.

ಸ್ಥಳೀಯ ಭಾಷೆಯ ಸ್ವಾಯತ್ತತೆಯ ರಕ್ಷಣೆಯ ಜೊತೆಗೆ ಅನ್ಯಭಾಷೆಗಳನ್ನು ಕಲಿಯಲು ಅವಕಾಶ ನೀಡುವ ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆಗೆ ಸರಕಾರ ಕಟ್ಟಿ ಬದ್ಧವಾಗಿದೆ ಎಂದು ತಿಳಿಸಿದರು.

  ನಮ್ಮದು ಬಹು ಭಾಷೆ, ಬಹುಧರ್ಮ, ಬಹು ಸಂಸ್ಕೃತಿ, ಬಹು ಮಾದರಿಯ ಬಹುತ್ವದ ವ್ಯವಸ್ಥೆ. ಆಯಾ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಮೊದಲ ಆದ್ಯತೆ. ಸ್ಥಳೀಯ ನೆಲದ ಮೇಲೆ ಪರ ಭಾಷೆ ಆಧಿಪತ್ಯ ಮೆರೆಯುವುದನ್ನು ಸಂವಿಧಾನವೂ ಒಪ್ಪುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರಕಾರದ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.

 ಕನ್ನಡ ನಾಡು, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರಲಾಗಿದೆ. ಕನ್ನಡ ನಾಡುನುಡಿಯ ಗರಿವೆುಯನ್ನು ವಿಶ್ವದಾದ್ಯಂತ ಪಸರಿಸಲು ಈ ವರ್ಷದಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ. ಕನ್ನಡದ ತತ್ವಪದ ಸಾಹಿತ್ಯದ 32 ಸಂಪುಟಗಳ ಜೊತೆಗೆ ಇನ್ನೂ 18 ಹೊಸ ಸಂಪುಟಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಯಚೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ಎಲ್ಲ ಕಾಲೇಜುಗಳನ್ನು ಈ ವಿವಿಯ ವ್ಯಾಪ್ತಿಗೆ ತರಲಾಗುವುದು ಎಂದರು.

 ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ವಿ.ಶಂಕರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ವೌಲಾನ ಆಜಾದ್ ಮಾದರಿ ಶಾಲೆ

 ಈಗಾಗಲೇ ಮುಚ್ಚಿರುವ ಸರಕಾರಿ ಉರ್ದು ಶಾಲೆಗಳ ಸ್ಥಳಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ 200 ವೌಲಾನ ಆಜಾದ್ ಮಾದರಿ ಶಾಲೆಗಳನ್ನು ತೆರೆಯಲು ಚಿಂತಿಸಲಾಗಿದ್ದು, ಈ ಮೂಲಕ ಶಾಲೆಗಳಿಂದ ಹೊರಗುಳಿದ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ತರಲಾಗುವುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News