ತ್ರಿಪುರಾ ಸಿಎಂ ಭಾಷಣ ಪ್ರಸಾರಕ್ಕೆ ಡಿಡಿ ನಕಾರ

Update: 2017-08-16 04:08 GMT

ಹೊಸದಿಲ್ಲಿ, ಆ. 16: ಎಡಪಕ್ಷಗಳ ರಂಗಕ್ಕೆ ಸೇರಿದ ತ್ರಿಪುರಾ ಮುಖ್ಯಮಂತ್ರಿಯ ಸ್ವಾತಂತ್ರ್ಯೋತ್ಸವ ಭಾಷಣವನ್ನು ಪ್ರಸಾರ ಮಾಡಲು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊ ನಿರಾಕರಿಸಿರುವುದು ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿಯ ಪಕ್ಷಪಾತ ಧೋರಣೆ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಭಾಷಣವನ್ನು ಪ್ರಸಾರ ಮಾಡಬೇಕಿದ್ದರೆ, ಅದನ್ನು ಸರಿಪಡಿಸಿ ನೀಡಬೇಕು ಎಂದು ದೂರದರ್ಶನ ಸೂಚಿಸಿತ್ತು. ಮುಂಜಾನೆ 6.30ಕ್ಕೆ ತ್ರಿಪುರಾ ಸಿಎಂ ಅವರ ಆರು ನಿಮಿಷಗಳ ಭಾಷಣವನ್ನು ಪ್ರಸಾರ ಮಾಡಬೇಕಿತ್ತು. ಅದರೆ ಬದಲಾವಣೆಗಳನ್ನು ಮಾಡಲು ತ್ರಿಪುರಾ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಭಾಷಣ ಪ್ರಸಾರ ಮಾಡಲು ದೂರದರ್ಶನ ನಿರಾಕರಿಸಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಪ್ರಸಾರ ಭಾರತಿ ಸಂಸ್ಥೆ, ಅಗರ್ತಲ ಆಕಾಶವಾಣಿಗೆ ಬರೆದ ಪತ್ರದ ಪ್ರತಿ ಟೈಮ್ಸ್ ಆಫ್ ಇಂಡಿಯಾಗೆ ಲಭ್ಯವಾಗಿದೆ. ಕಾರ್ಯಕ್ರಮ (ನಿಯಮಾವಳಿ) ಸಹಾಯಕ ನಿರ್ದೇಶಕ ಸಂಜೀವ್ ದೋಸಜ್ ಅವರು, ಮಹಾನಿರ್ದೇಶಕರ ಪರವಾಗಿ ಪತ್ರ ಬರೆದಿದ್ದಾರೆ.

'ಪ್ರಸಾರ ಮಾಡುವ ಕಾರ್ಯಕ್ರಮದ ಪಾವಿತ್ರ್ಯ ಮತ್ತು ಘನತೆಯ ಹಿನ್ನೆಲೆಯಲ್ಲಿ, ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನೂ ಸಂಪರ್ಕಿಸಿ, ದೆಹಲಿಯಲ್ಲಿ ಎಲ್ಲರೂ ಸೇರಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಲಿ ಇರುವ ಅಂಶಗಳನ್ನು ಪ್ರಸಾರ ಮಾಡಲು ಸಾಧ್ಯವಿಲ್ಲ. ಮಾನ್ಯ ಮುಖ್ಯಮಂತ್ರಿಗಳು, ಜನರ ಭಾವನೆಗಳು ಮತ್ತು ದೇಶದ ಭಾವನೆಗಳಿಗೆ ತಕ್ಕಂತೆ ಬದಲಾವಣೆ ಮಾಡಿಕೊಟ್ಟಲ್ಲಿ, ಪ್ರಸಾರ ಮಾಡಬಹುದಾಗಿದೆ' ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸಾಂಪ್ರದಾಯಿಕವಾಗಿ ಭಾರತ ಕಾಪಾಡಿಕೊಂಡು ಬಂದ ವಿವಿಧತೆಯಲ್ಲಿ ಏಕತೆ ಎಂಬ ತತ್ವದ ಮೇಲೆ ಇಂದು ದಾಳಿ ನಡೆಯುತ್ತಿದೆ. ಅನಪೇಕ್ಷಿತ ಸಂಕೀರ್ಣತೆ ಮತ್ತು ಸಮಾಜ ವಿಭಜನೆಯ ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ತಮ್ಮ ಭಾಷಣದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News