ಡಿ.17ರಿಂದ ಮಂಗಳೂರಿನಲ್ಲಿ ಜಾಂಬೂರಿ ಉತ್ಸವ: ಯು.ಟಿ.ಖಾದರ್

Update: 2017-08-16 13:06 GMT

ಬೆಂಗಳೂರು, ಆ.16: ಶಿಸ್ತು, ಸಹನೆ ರೂಢಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಕೆಯಾಗಿದ್ದು, ಡಿ.17 ರಿಂದ ಏಳು ದಿನ ಮಂಗಳೂರಿನಲ್ಲಿ ಜಾಂಬೂರಿ (ಮಕ್ಕಳ) ಉತ್ಸವ ನಡೆಯಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

 ಬುಧವಾರ ನಗರದ ಶಾಂತಿಗೃಹದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕವತಿಯಿಂದ ಸ್ಕೌಟ್ಸ್-ಗೈಡ್ಸ್‌ನ ರಾಷ್ಟ್ರೀಯ ಆಯುಕ್ತರಾಗಿದ್ದ ದಿವಂಗತ ವಿ.ಪಿ.ದೀನದಯಾಳು ನಾಯ್ಡು ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿ.17ರಿಂದ ಏಳು ದಿನ ಮಂಗಳೂರಿನಲ್ಲಿ ಜಾಂಬೂರಿ (ಮಕ್ಕಳ) ಉತ್ಸವ ನಡೆಯಲಿದ್ದು, ಐದನೆ ತರಗತಿಯಿಂದ ಹತ್ತನೆ ತರಗತಿಯ ಏಳು ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ, ಒಂದು ಸಾವಿರ ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಬರಲಿದ್ದಾರೆ ಎಂದು ಖಾದರ್ ನುಡಿದರು.

 ಶಾಲಾ ಮಕ್ಕಳಲ್ಲಿ ಸ್ವಯಂಸೇವೆ, ಶಿಸ್ತು, ಸಜ್ಜನಿಕೆ, ಉತ್ತಮ ನಡೆನುಡಿ, ಸೇವಾ ಮನೋಭಾವ, ಧೈರ್ಯ, ಸಾಹಸ ಪ್ರವೃತ್ತಿ ಬೆಳೆಸಲು ಈ ಮಾದರಿಯ ಉತ್ಸವಗಳು ನಡೆಯಬೇಕೆಂದ ಅವರು, ನಾನು ಸಹ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯನಾಗಿದ್ದು, ಜೀವನದಲ್ಲ್ಲಿ ಶಿಸ್ತು, ಸೇವಾ ಮನೋಭಾವ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.

ಮಾಜಿ ಸಚಿವ, ಸ್ಕೌಟ್ಸ್ ಮತ್ತು ಗೈಡ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ರಾಜ್ಯಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಯಾವುದೇ ಲಾಭ ಇಲ್ಲದೆ, ಸ್ಕೌಟ್ಸ್ ಮತ್ತು ಗೈಡ್ ಬೆಳೆಸಲು ಮುಂದಾಗಿರುವುದಲ್ಲದೆ, ಸಾವಿರಾರು ಮಕ್ಕಳನ್ನು ಈ ದಾರಿಗೆ ಕರೆ ತಂದಿದ್ದಾರೆ ಎಂದರು.

ಸೌಟ್ಸ್ ಮತ್ತು ಗೈಡ್ಸ್ ಪಕ್ಷಾತೀತ ಸಂಸ್ಥೆಯಾಗಿದ್ದು, ಜಾತಿ, ಧರ್ಮಗಳನ್ನು ಮೀರಿದ ವೈಚಾರಿಕ ಪ್ರಜ್ಞೆ ಮೂಡಿಸುವ ಸಂಸ್ಥೆಯಾಗಿದೆ. ಇಲ್ಲಿನ ಚಟುವಟಿಕೆಗಳು ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ. ವಿಶ್ವದೆಲ್ಲೆಡೆ ವ್ಯಾಪಿಸಿರುವ ಸಂಸ್ಥೆಯ ಸಂಘಟನೆಯನ್ನು ಬಲಪಡಿಸಲು ಪ್ರತಿ ಶಾಲೆಯಲ್ಲಿ ಘಟಕ ತೆರೆದು ಬಲವರ್ಧನೆ ಮಾಡಬೇಕಿದೆ ಎಂದು ಸಿಂಧ್ಯ ಕರೆ ನೀಡಿದರು.

 ಕಾರ್ಯಕ್ರಮದಲ್ಲಿ ಸೌಟ್ಸ್ ಮತ್ತು ಗೈಡ್ಸ್ ನ  ಉಪಾಧ್ಯಕ್ಷ ಕೊಂಡಜ್ಜಿ ಬ.ಷಣ್ಮುಖಪ್ಪ, ವಿ.ಪಿ.ದೀನದಯಾಳು ನಾಯ್ಡು ಅವರ ಪುತ್ರ ಡಿ.ವೆಂಕಟೇಶ್, ಸ್ಕೌಟ್ಸ್ ರಾಜ್ಯ ಆಯುಕ್ತ ಎಂ.ಎ.ಖಾಲಿದ್, ಗೈಡ್ಸ್ ಆಯುಕ್ತೆ ಗೀತಾ ನಟರಾಜ್, ಕಾರ್ಯದರ್ಶಿ ಚಿನ್ನಸ್ವಾಮಿ ರೆಡ್ಡಿ, ಕೋಶಾಧಿಕಾರಿ ಪ್ರಭುದೇವ, ಎಂ.ಕೆ.ಖಾನ್, ಸಂಚಾಲಕ ಎಂ.ಎ.ಚೆಲ್ಲಯ್ಯ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News