ರಾಷ್ಟ್ರೀಯ ಹೆದ್ದಾರಿಗಳ ಡಿನೋಟಿಫೈ: ರಾಜ್ಯ ಸರಕಾರದ ಪ್ರಸ್ತಾವ ತಿರಸ್ಕರಿಸಿದ ಕೇಂದ್ರ ಸರಕಾರ

Update: 2017-08-17 17:52 GMT

   ಬೆಂಗಳೂರು, ಆ.17: ನಗರ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರವು, ರಾಜ್ಯ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಈ ಸಂಬಂಧ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯವು ಆ.14ರಂದು ಬರೆದಿರುವ ಉತ್ತರವನ್ನು ಕೇಂದ್ರ ಸರಕಾರದ ವಕೀಲ ಜಯಕರ ಶೆಟ್ಟಿ ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

    ಬೆಂಗಳೂರು ನಗರದಲ್ಲಿ ಹಾದು ಹೋಗಿರುವ 77.64 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಳೀಯ ಅಥವಾ ನಗರ ಪ್ರಾಧಿಕಾರ ವ್ಯಾಪ್ತಿಯ ರಸ್ತೆ ಎಂದು ಘೋಷಿಸಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾಗಿರುವ ಅರ್ಜಿಗಳನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

 ವಿಚಾರಣೆ ವೇಳೆ ಜಯಕರ ಶೆಟ್ಟಿ, ಕೇಂದ್ರದ ಉತ್ತರವು ಸುಪ್ರಿಂ ಕೋರ್ಟ್‌ನ ತೀರ್ಪಿನ ಅನುಸಾರ ರಾಜ್ಯದ ಪ್ರಸ್ತಾವನೆ ಕಾರ್ಯಸಾಧುವಲ್ಲ ಎಂದು ತಿಳಿಸಿ ಬರೆದಿರುವ ಪತ್ರದ ಕುರಿತಂತೆ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿದರು. ಜ್ಞಾಪನಾ ಪತ್ರದಲ್ಲಿ ಏನಿದೆ: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಾದು ಹೋಗಿರುವ ರಸ್ತೆಗಳಿಗೆ ವಿನಾಯಿತಿ ನೀಡಿದರೆ ಸಾರ್ವಜನಿಕ ಸುರಕ್ಷಾ ನೀತಿಯ ಮುಖ್ಯ ಉದ್ದೇಶವೇ ವಿಫಲವಾದಂತಾಗುತ್ತದೆ. ಹೀಗಾಗಿ ಸಂವಿಧಾನದ 142ನೇ ವಿಧಿಯ ಅನುಸಾರ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪಾಲಿಸುವುದು ಅವಶ್ಯವಿದೆ ಎಂದು ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.
   609.65 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಡಿನೋಟಿಫೈ ಮಾಡುವಂತೆ ಕೋರಿ ರಾಜ್ಯ ಸರಕಾರ ಕಳುಹಿಸಿರುವ ಪ್ರಸ್ತಾವನೆಯನ್ನು ನಾವು ತಾಂತ್ರಿಕ ಕಾರಣಗಳೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ನಿಮ್ಮ ಪ್ರಸ್ತಾವನೆ ಜಾರಿಗೆ ತರಲು ಆಗುವುದಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.
   ಕೇಂದ್ರದ ಉತ್ತರ: ನಗರ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ. ಬೆಂಗಳೂರು ನಗರಕ್ಕೆ ಪೆರಿಫೆರಲ್ ರಸ್ತೆ ಇಲ್ಲ. ಇಂತಹ ರಸ್ತೆಗಳನ್ನು ಡಿನೋಟಿಫೈ ಮಾಡಲು ಸಾಧ್ಯವಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ತಿಳಿಸಿದೆ. ಹೀಗಾಗಿ, ನಿಮ್ಮ ಪ್ರಸ್ತಾವನೆ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂದು ಕೇಂದ್ರದ ಉತ್ತರದಲ್ಲಿ ತಿಳಿಸಲಾಗಿದೆ.
  ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬದಿಯಿಂದ 500 ಮೀಟರ್ ಅಂತರದಲ್ಲಿ ಯಾವುದೇ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದನ್ನು ಎಲ್ಲ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸ್ಥಗಿತಗೊಳಿಸಬೇಕು. ಇದು ಮಹಾನಗರ ಪಾಲಿಕೆ, ನಗರ, ಪಟ್ಟಣ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧೀನ ರಸ್ತೆಗಳಿಗೆ ಅನ್ವಯ ಆಗುತ್ತದೆ ಎಂಬುದನ್ನೂ ಪತ್ರದಲ್ಲಿ ವಿವರಿಸಲಾಗಿದೆ.
 ರಸ್ತೆ ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ರಾಷ್ಟ್ರೀಯ ರಸ್ತೆ ಸುರಕ್ಷಾ ಮಂಡಳಿ (ಎನ್‌ಆರ್‌ಎಸ್‌ಸಿ) 2004ರ ಜನವರಿ 14ರಂದೇ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಈ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಎಲ್ಲ ರಾಜ್ಯಸರಕಾರಗಳಿಗೆ 2007ರ ಅಕ್ಟೋಬರ್ 26ರಂದು ಸುತ್ತೋಲೆ ಮೂಲಕ ತಿಳಿಸಿದೆ.
ನಗರ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಸ್ಥಳೀಯ ಅಥವಾ ನಗರ ಪ್ರಾಧಿಕಾರ ವ್ಯಾಪ್ತಿಯ ರಸ್ತೆ ಎಂದು ಘೋಷಿಸಬೇಕು ಎಂದು ಕೋರಿ ರಾಜ್ಯ ಸರಕಾರ 2017ರ ಜುಲೈ 31ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News