ಮಗದೊಮ್ಮೆ ಕೊಲೆಯಾದ ವೇಮುಲಾ

Update: 2017-08-17 18:33 GMT

ರೋಹಿತ್ ವೇಮುಲಾ ಅವರ ಆತ್ಮಹತ್ಯೆಯ ವಿಚಾರಣೆಯನ್ನು ನ್ಯಾಯಮೂರ್ತಿ ರೂಪನ್ವಾಲ್ ಆಯೋಗ ಅಚ್ಚುಕಟ್ಟಾಗಿ ಮುಗಿಸಿದೆ. ತಮಗೆ ಸಿಕ್ಕಿರುವ ನಿರ್ದೇಶನವನ್ನು ತಲೆಬಾಗಿ ನಿರ್ವಹಿಸಿ ತಮ್ಮ ಋಣವನ್ನು ಸಂದಾಯ ಮಾಡಿದ್ದಾರೆ ಎನ್ನುವುದನ್ನು ಅವರ ವರದಿಯ ಅಕ್ಷರಕ್ಷರಗಳು ಬಹಿರಂಗ ಪಡಿಸಿವೆ. ರೋಹಿತ್ ವೇಮುಲಾ ಅವರ ಸಾವಿನಲ್ಲಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ, ಹೈದರಾಬಾದ್ ವಿವಿ ಕುಲಪತಿ ಅಪ್ಪಾರಾವ್, ವಿಧಾನಪರಿಷತ್ ಸದಸ್ಯ ರಾಮಚಂದ್ರ... ಸರಕಾರಕ್ಕೆ ಸಂಬಂಧಿಸಿದ ಯಾವೊಬ್ಬನ ಪಾತ್ರವೂ ಇಲ್ಲ ಎನ್ನುವುದನ್ನು ಸರ್ವ ರೀತಿಯಲ್ಲಿ ಸಾಬೀತು ಮಾಡಲು ಅವರು ಹೆಣಗಿದ್ದಾರೆ.

ಸಮಿತಿಯ ವರದಿಯಲ್ಲಿ, ‘‘ವೇಮುಲಾಗೆ ಹಲವು ತೊಂದರೆಗಳಿದ್ದವು. ಹಲವು ಕಾರಣಗಳಿಗೆ ಅವರ ನೆಮ್ಮದಿ ಕೆಟ್ಟಿತ್ತು. ಅವರು ಆತ್ಮಹತ್ಯೆ ಟಿಪ್ಪಣಿಯಲ್ಲೇ ಆತ್ಮಹತ್ಯೆಗೆ ವೈಯಕ್ತಿಕ ಸಮಸ್ಯೆಗಳು ಕಾರಣ, ಹೊರಜಗತ್ತಿನ ವ್ಯವಹಾರಗಳೇ ತನ್ನ ನೆಮ್ಮದಿ ಕೆಡಿಸಿವೆ ಎಂಬ ಸ್ಪಷ್ಟ ಉಲ್ಲೇಖವಿದೆ...’’ ಎಂದೆಲ್ಲ ಹೇಳುತ್ತಾ, ಕೊನೆಗೂ ರೋಹಿತ್ ವೇಮುಲಾ ಆತ್ಮಹತ್ಯೆಯನ್ನು ಸಂತ್ರಸ್ತನ ತಲೆಗೇ ಕಟ್ಟಿ ಬಿಜೆಪಿಯ ಎಲ್ಲ ನಾಯಕರನ್ನೂ ಆರೋಪ ಮುಕ್ತಗೊಳಿಸಿದೆ. ಆಯೋಗದ ಈ ತೀರ್ಪು ಅನಿರೀಕ್ಷಿತ ಆಗಿರದೇ ಇರುವುದರಿಂದ ಯಾರಿಗೂ ಆಘಾತವಾಗಿಲ್ಲ. ಈ ಆಯೋಗ ರಚನೆಯಾಗುವ ಮೊದಲೇ, ರೋಹಿತ್ ವೇಮುಲಾ ಆತ್ಮಹತ್ಯೆ ಕಾರಣವನ್ನು ಸರಕಾರ ಘೋಷಿಸಿತ್ತು. ಅದಕ್ಕೆ ಪೂರಕವಾದ ವರದಿಯೊಂದನ್ನು ತಯಾರಿಸುವುದಕ್ಕಾಗಿ ಮಾತ್ರ ಆಯೋಗವನ್ನು ರಚಿಸಲಾಗಿತ್ತು. ಆದುದರಿಂದ, ವರದಿಯ ಕುರಿತಂತೆ ನಾವು ನ್ಯಾಯಮೂರ್ತಿಗಳನ್ನು ಯಾವ ರೀತಿಯಲ್ಲೂ ಹೊಣೆ ಮಾಡುವಂತೆ ಇಲ್ಲ.

‘‘ರೋಹಿತ್ ವೇಮುಲಾರ ಸಾವಿಗೆ ಹೊರ ಜಗತ್ತಿನ ವ್ಯವಹಾರಗಳೇ ಕಾರಣ..’’ ಎನ್ನುವುದನ್ನು ವರದಿ ಸ್ಪಷ್ಟಪಡಿಸುತ್ತದೆ. ಆದರೆ ಹೊರಜಗತ್ತಿನ ಯಾವ ವ್ಯವಹಾರ ಎನ್ನುವುದನ್ನು ಅದು ಗುರುತಿಸಿಲ್ಲ. ಯಾವುದೋ ಮಂಗಳಗ್ರಹಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ವೇಮುಲಾ ಗುರುತಿಸಿಕೊಂಡಿರುವ ಅಂಶಗಳೂ ಈವರೆಗೆ ಬಹಿರಂಗವಾಗಿಲ್ಲ. ಆತ್ಮಹತ್ಯೆಗೆ ವೈಯಕ್ತಿಕ ಸಮಸ್ಯೆ ಕಾರಣ ಎನ್ನುವುದೇನೋ ಸರಿ. ಆದರೆ ಆ ಸಮಸ್ಯೆ ಅವರಿಗೆ ಆರಂಭವಾದುದು ಹೇಗೆ, ಏನು ಎನ್ನುವುದರ ಕುರಿತಂತೆ ಆಯೋಗ ವಿಚಾರಣೆ ಮಾಡಿಲ್ಲ. ಇಡೀ ವರದಿಯನ್ನು ಗಮನಿಸಿದರೆ, ಅದು ವೇಮುಲಾರ ಸಾವಿನ ವಿಚಾರಣೆಗೆ ಆದ್ಯತೆ ನೀಡಿರುವುದಕ್ಕಿಂತ, ಸಚಿವರು, ಜನಪ್ರತಿನಿಧಿಗಳ ನಿರಪರಾಧಿತ್ವ ಸಾಬೀತಿಗೆ ಹೆಚ್ಚು ಗಮನ ನೀಡಿದೆ. ಆದುದರಿಂದಲೇ, ರೋಹಿತ್ ವೇಮುಲಾರ ಆತ್ಮಹತ್ಯೆಗೆ ಕಾರಣವಾದ ವೈಯಕ್ತಿಕ ಸಮಸ್ಯೆಗಳು ಏನು ಎನ್ನುವುದನ್ನು ಸ್ಪಷ್ಟಪಡಿಸಲು ವರದಿ ವಿಫಲವಾಗಿದೆ.

ಆಯೋಗ ಅದೆಷ್ಟು ಜಾಣತನದಿಂದ ತನ್ನ ವಿಚಾರಣೆಯನ್ನು ನಿರ್ವಹಿಸಿದೆ ಎಂದರೆ, ಆತ್ಮಹತ್ಯೆಯ ತನಿಖೆಗೆ ಕೇವಲ ಆತ್ಮಹತ್ಯಾ ಪತ್ರವನ್ನಷ್ಟೇ ಬಳಸಿಕೊಂಡಿದೆ. ಆತ್ಮಹತ್ಯೆಗೆ ಕೆಲವೇ ದಿನಗಳ ಹಿಂದೆ ವಿವಿ ಉಪಕುಲಪತಿಗೆ ರೋಹಿತ್ ವೇಮುಲಾ ಒಂದು ಪತ್ರವನ್ನು ಬರೆದಿದ್ದರು. ಅದರಲ್ಲಿ ತನಗೆ ಆತ್ಮಹತ್ಯೆಯೇ ಅನಿವಾರ್ಯ ದಾರಿ ಎನ್ನುವ ಸೂಚನೆಯನ್ನು ನೀಡಿದ್ದರು.‘‘ಹಾಸ್ಟೆಲ್‌ಗೆ ಸೇರ್ಪಡೆಯಾಗುವ ದಲಿತ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರದ ಜೊತೆಗೆ ಒಂದೊಂದು ನೇಣು ಹಗ್ಗವನ್ನೂ ಕೊಟ್ಟು ಬಿಡಿ. ಅವರಿಗೆ ಅನುಕೂಲವಾಗುತ್ತದೆ’’ ಎಂದು ಕಿಡಿಕಾರಿದ್ದರು. ಇಡೀ ವ್ಯವಸ್ಥೆಯ ವಿರುದ್ಧ ಆಕ್ರೋಶ ಉಪಕುಲಪತಿಯವರಿಗೆ ಬರೆದ ಪತ್ರದಲ್ಲಿತ್ತು. ವಿವಿಯ ಜಾತೀಯ ರಾಜಕೀಯವನ್ನು ಅದರಲ್ಲಿ ವ್ಯಂಗ್ಯ ಮಾಡಲಾಗಿತ್ತು. ಆ ಪತ್ರದ ಬಳಿಕವೂ ಕುಲಪತಿಯವರು ವೇಮುಲಾ ಅವರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ.

ಸಂಶೋಧನೆ ನಡೆಸುವ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಹಾಸ್ಟೆಲ್‌ನಿಂದ ವಜಾಗೊಳಿಸಲಾಗಿತ್ತು. ಅವರು ತನ್ನ ಹಕ್ಕಿಗಾಗಿ ಹಗಲು ರಾತ್ರಿ ಅದರ ಆವರಣದಲ್ಲೇ ಸತ್ಯಾಗ್ರಹ ಮಾಡುತ್ತಿದ್ದರು. ವಿಪರ್ಯಾಸವೆಂದರೆ ಇವರ ಹೋರಾಟದ ಜೊತೆಗೆ ಯಾವ ದಲಿತ ಸಂಘಟನೆಯಾಗಲಿ, ಕಮ್ಯುನಿಸ್ಟ್ ಸಂಗಾತಿಗಳಾಗಲಿ ಗುರುತಿಸಿಕೊಳ್ಳಲಿಲ್ಲ. ಈ ಬಗ್ಗೆ ರೋಹಿತ್ ವೇಮುಲಾಗೆ ದುಃಖವಿತ್ತು ನಿಜ. ವ್ಯವಸ್ಥೆಯಂತೂ ಇವರ ಕೂಗಿಗೆ ಸ್ಪಂದಿಸುವುದಕ್ಕೆ ಸಿದ್ಧವೇ ಇರಲಿಲ್ಲ. ಆದರೂ ಆಯೋಗದ ವರದಿ ಯಾವ ಸಂಕೋಚವೂ ಇಲ್ಲದೆ ‘‘ವೇಮುಲಾ ಆತ್ಮಹತ್ಯೆಗೆ ಅವರನ್ನು ಹಾಸ್ಟೆಲ್‌ನಿಂದ ವಜಾಗೊಳಿಸಿರುವುದು ಕಾರಣವಲ್ಲ’’ ಎಂದು ಹೇಳಿದೆ.

ಹಾಗಾದರೆ ಅವರು ಹಲವು ದಿನಗಳಿಂದ ಅಂಬೇಡ್ಕರ್ ಮತ್ತು ಸಾವಿತ್ರಿಬಾ ಫುಲೆ ಅವರ ಭಾವಚಿತ್ರವನ್ನು ಇಟ್ಟುಕೊಂಡು ಧರಣಿ ನಡೆಸಿರುವುದಾದರೂ ಯಾಕೆ? ತಾನು ನೆಮ್ಮದಿಯಿಂದ, ಸಮಸ್ಯೆ ರಹಿತನಾಗಿ ಕಾಲೇಜಿನಲ್ಲಿದ್ದೇನೆ ಎನ್ನುವುದನ್ನು ಘೋಷಿಸುವುದಕ್ಕಾಗಿ ಧರಣಿ ನಡೆಸಿದ್ದರೇ? ಆಯೋಗ ಹೇಳಿರುವ ‘ಹೊರಗಿನ ಸಮಸ್ಯೆ’ಗಳಲ್ಲಿ ಇದು ಯಾಕೆ ಬರುವುದಿಲ್ಲ? ಒಂದು ವೇಳೆ ಅವರನ್ನು ಹಾಸ್ಟೆಲ್‌ಗೆ ಸೇರಿಸಿಕೊಂಡು, ಅವರ ವಿದ್ಯಾರ್ಥಿವೇತನವನ್ನು ನೀಡಿ ಕಲಿಯುವುದಕ್ಕೆ ಆಸ್ಪದ, ಪ್ರೋತ್ಸಾಹ ನೀಡಿದ್ದಿದ್ದರೆ ರೋಹಿತ್ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದ್ದಿರಲಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ನಡೆದ ಸಂಘರ್ಷದೊಳಗೆ ಹೊರಗಿನ ರಾಜಕೀಯ ಮೂಗು ತೂರಿಸಿದ್ದೇ ಎಲ್ಲ ಅನಾಹುತಗಳಿಗೆ ಕಾರಣವಾಯಿತು.

ಈ ಹಿಂದೆ ಎಬಿವಿಪಿ ವಿದ್ಯಾರ್ಥಿಗಳ ಜೊತೆಗೆ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಇವರ ವಿರುದ್ಧ ಕ್ರಮ ಕೈಗೊಳ್ಳಲು ಸ್ವತಃ ಕೇಂದ್ರ ಸಚಿವರೇ ವಿವಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪರೋಕ್ಷವಾಗಿ ಬಿಜೆಪಿ ಮುಖಂಡ ಬಂಡಾರು ದತ್ತಾತ್ರೇಯ ಕೂಡ ಕಾರಣರಾಗಿದ್ದರು. ಕೇಂದ್ರದ ಒತ್ತಡದ ಹಿನ್ನೆಲೆಯಲ್ಲಿಯೇ ರೋಹಿತ್ ವೇಮುಲಾ ವಿರುದ್ಧದ ಪ್ರಕರಣವನ್ನು ಇನ್ನಷ್ಟು ಬಿಗಿಗೊಳಿಸಲಾಯಿತು. ಅವರನ್ನು ಹಾಸ್ಟೆಲ್‌ನಿಂದ ಹೊರ ಹಾಕಲಾಯಿತು. ಸಿಗಬೇಕಾಗಿದ್ದ ವಿದ್ಯಾರ್ಥಿ ವೇತನವನ್ನು ತಡೆ ಹಿಡಿಯಲಾಯಿತು. ಉಳಿಯುವುದಕ್ಕೂ ಸೂರು ಇಲ್ಲದೆ, ಕಲಿಯುವುದಕ್ಕೆ ಅವಕಾಶವೂ ಇಲ್ಲದ, ಜೊತೆಗೆ ತನ್ನ ಹೋರಾಟಕ್ಕೆ ಸಮಾಜದ ಬೆಂಬಲವೂ ಇಲ್ಲದೆ ಇದ್ದಾಗ ದಲಿತ ಹಿನ್ನೆಲೆಯ ವಿದ್ಯಾರ್ಥಿಯೊಬ್ಬ ಅಂತಿಮವಾಗಿ ಆತ್ಮಹತ್ಯೆಯ ದಾರಿ ಹಿಡಿಯುವುದರಲ್ಲಿ ಅಚ್ಚರಿಯೇನಿದೆ? ಹೊರಗಿನ ಸಮಸ್ಯೆಗಳಿಂದ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದರೆ ಆ ಹೊರಗಿನ ಸಮಸ್ಯೆಗಳು ಏನು ಎನ್ನುವುದನ್ನು ಅವರು ವಿವಿ ಉಪಕುಲಪತಿಗೆ ಬರೆದ ಪತ್ರದಲ್ಲಿ ಆಯೋಗ ಕಂಡುಕೊಳ್ಳುವ ಅವಕಾಶವಿತ್ತು.

ಆದರೆ ಆಯೋಗ ಆ ಕಡೆಗೆ ಉದ್ದೇಶಪೂರ್ವಕವಾಗಿಯೇ ತನ್ನ ಕಣ್ಣನ್ನು ಹೊರಳಿಸದೆ, ಅವರು ಕೊನೆಗೆ ಬರೆದಿರುವ ಆತ್ಮಹತ್ಯೆಪತ್ರದಲ್ಲೇ ಕಾರಣವನ್ನು ಹುಡುಕುವ ನಾಟಕ ಮಾಡಿದೆ. ಈ ದೇಶದಲ್ಲಿ ದಲಿತರಿಗೆ ಮೀಸಲಾತಿಯನ್ನು ವಿರೋಧಿಸುವವರು ‘ಪ್ರತಿಭೆ’ಯನ್ನು ಗುರಾಣಿಯಾಗಿಸಿ ವಾದಿಸುತ್ತಾರೆ. ಆದರೆ ಅಪಾರ ಪ್ರತಿಭಾವಂತರಾಗಿರುವ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಯ ಕುರಿತಂತೆ ಜಾಣ ವೌನವನ್ನು ತಾಳುತ್ತಾರೆ. ವೇಮುಲಾರನ್ನು ಹಂತ ಹಂತವಾಗಿ ಮಾನಸಿಕವಾಗಿ ಕುಗ್ಗಿಸಿ ವಿಶ್ವವಿದ್ಯಾನಿಲಯ ಮತ್ತು ಬಿಜೆಪಿ ರಾಜಕೀಯ ಆತ್ಮಹತ್ಯೆಯ ಎಡೆಗೆ ತಳ್ಳಿದೆ. ಆದುದರಿಂದ ವೇಮುಲಾ ಆತ್ಮಹತ್ಯೆ ಪರೋಕ್ಷವಾಗಿ ಕೊಲೆಯೇ ಆಗಿದೆ ಮತ್ತು ಆಯೋಗದ ವರದಿಯ ಹೆಸರಲ್ಲಿ ವೇಮುಲಾರನ್ನು ಕೇಂದ್ರ ಸರಕಾರದ ಮತ್ತೊಮ್ಮೆ ಕೊಲೆಗೈದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News