ಆದಿತ್ಯನಾಥ್ ಧೋರಣೆಗೆ ಅಸಮಾಧಾನ: ಉ.ಪ್ರದೇಶದ ಗ್ರಾಮಸ್ಥರಿಂದ ಜಲಸತ್ಯಾಗ್ರಹ

Update: 2017-08-18 13:46 GMT

ಲಕ್ನೊ, ಆ.18: ಪ್ರವಾಹಪೀಡಿತ ಗ್ರಾಮಕ್ಕೆ ಭೇಟಿ ನೀಡುವ ಸೌಜನ್ಯ ತೋರದಿರುವ ಮುಖ್ಯಮಂತ್ರಿ ಆದಿತ್ಯನಾಥ್ ಧೋರಣೆಯಿಂದ ಅಸಮಾಧಾನಗೊಂಡಿರುವ ಲಖಿಮ್‌ಪುರ್ ಖೇರಿ ಜಿಲ್ಲೆಯ 12ಕ್ಕೂ ಹೆಚ್ಚಿನ ಗ್ರಾಮದ ಜನರು ‘ಜಲ ಸತ್ಯಾಗ್ರಹ’ ಎಂಬ ಹೆಸರಿನಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

    ಗುರುವಾರದಿಂದ ಘಾಗ್ರ ನದಿಯಲ್ಲಿ ಕುತ್ತಿಗೆಮಟ್ಟದವರೆಗೆ ನೀರಿನಲ್ಲಿ ಮುಳುಗಿ ಗ್ರಾಮಸ್ಥರು ಜಲಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯನ್ನು ಕೈಬಿಡುವಂತೆ ಗ್ರಾಮಸ್ಥರ ಮನ ಒಲಿಸಲು ಪ್ರಯತ್ನಿಸಿದ ಅಧಿಕಾರಿಗಳು, ಗ್ರಾಮದಲ್ಲಿ ನೆರೆಪರಿಹಾರ ಕಾರ್ಯಾಚರಣೆಯನ್ನು ತಕ್ಷಣದಿಂದ ಆರಂಭಿಸುವುದಾಗಿ ಭರವಸೆ ನೀಡಿದರು. ಈ ಭರವಸೆಗೆ ಸ್ಪಂದಿಸಿದ ಗ್ರಾಮಸ್ಥರು ಪ್ರತಿಭಟನೆ ಕೈಬಿಡಲು ಒಪ್ಪಿದರು. ಆದರೆ ಶನಿವಾರದೊಳಗೆ ಗ್ರಾಮಕ್ಕೆ ಪರಿಹಾರ ಸಾಮಾಗ್ರಿಗಳನ್ನು ಕಳಿಸದಿದ್ದರೆ ಮತ್ತೆ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿಗೆ ಸಮೀಪದ ಸಿಸೈಯ್ಯ ಎಂಬ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ, ಬಳಿಕ ಈ ಗ್ರಾಮಗಳಿಗೂ ಭೇಟಿ ನೀಡಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ಪ್ರವಾಸ ಕಾರ್ಯಕ್ರಮ ಪರಿಷ್ಕರಿಸಿದ ಅವರು ಭೇಟಿ ನೀಡದೆ ಸಿಸೈಯ್ಯದಿಂದಲೇ ವಾಪಸಾದರು. ಪೂರ್ವ ಉತ್ತರಪ್ರದೇಶದ ಗೋರಖ್‌ಪುರ, ಮಹಾರಾಜ್‌ಗಂಜ್, ಲಕ್ಷ್ಮೀಪುರ್ ಖೇರಿ, ಸಿದ್ದಾರ್ಥನಗರ್, ಬಹ್ರೇಚ್ , ಬಲರಾಂಪುರ್ ಮುಂತಾದ ನಗರಗಳು ಭಾರೀ ಮಳೆ ಹಾಗೂ ನೇಪಾಲ ದೇಶದಿಂದ ನದಿಗೆ ಹರಿದು ಬಂದಿರುವ ಹೆಚ್ಚುವರಿ ನೀರಿನ ಕಾರಣ ಪ್ರವಾಹಪೀಡಿತವಾಗಿದ್ದು ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ .

 22ಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ 2,013 ಗ್ರಾಮಗಳು ಪ್ರವಾಹಪೀಡಿತವಾಗಿದ್ದು 14 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರು ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ವೀಕ್ಷಣೆ ನಡೆಸಿದರು ಹಾಗೂ ಬಲರಾಂಪುರ ಮತ್ತು ಸಿದ್ದಾರ್ಥನಗರಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News