ರಾಯ್‍ಪುರ್ ಸರಕಾರಿ ಆಸ್ಪತ್ರೆಯಲ್ಲಿ ಮೂರು ನವಜಾತ ಶಿಶುಗಳ ಸಾವು

Update: 2017-08-21 07:59 GMT

ಹೊಸದಿಲ್ಲಿ,ಆ.21 : ರಾಯ್‍ಪುರದ ಸರಕಾರಿ ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ನವಜಾತ ಶಿಶುಗಳು ಸಾವನ್ನಪ್ಪಿವೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆಮ್ಲಜನಕ ಪೂರೈಕೆಯ ವ್ಯತ್ಯಯವೇ ಶಿಶುಗಳ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆಯಾದರೂ ಆಮ್ಲಜನಕ ಕೊರತೆಯೆದುರಾಗಿಲ್ಲವೆಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದು, ಶಿಶುಗಳ ಸಾವಿಗೆ ಅನಾರೋಗ್ಯವೇ ಕಾರಣವೆಂದು ತಿಳಿಸಿದ್ದಾರೆ.

ಆಸ್ಪತ್ರೆಯ ಆಮ್ಲಜನಕ ಪೂರೈಕೆ ವ್ಯವಸ್ಥೆಯಲ್ಲಿ ಸಮಸ್ಯೆಯೆದುರಾದಾಗ ಆಗ ಕರ್ತವ್ಯದಲ್ಲಿದ್ದ ವೈದ್ಯರು ಕೂಡಲೇ ಪರಿಹಾರೋಪಾಯ ಕೈಗೊಂಡರು, ಎಂದು ಆರೋಗ್ಯ ಸೇವೆಗಳ ನಿರ್ದೇಶಕರಾದ  ಆರ್ ಪ್ರಸನ್ನ ಹೇಳಿದ್ದಾರೆ.

ಆದರೆ ಘಟನೆಯ ನಂತರ ಆಸ್ಪತ್ರೆಯ ಅಧಿಕಾರಿಗಳು ಆಮ್ಲಜನಕ ಪೂರೈಕೆಯ ಉಸ್ತುವಾರಿ ಹೊತ್ತಿದ್ದ ಆಪರೇಟರ್ ಒಬ್ಬನನ್ನು ಕೆಲಸದಿಂದ ತೆಗೆದು ಹಾಕಿದೆ. ಆತ ಕರ್ತವ್ಯದಲ್ಲಿದ್ದಾಗ ಮದ್ಯದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ.

ಶಿಶುಗಳ ಸಾವಿನ ಘಟನೆಯ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ರಮಣ್ ಸಿಂಗ್ ಆದೇಶಿಸಿದ್ದಾರೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಾಯಪುರ್ ಉತ್ತರ ಶಾಸಕ ಶ್ರೀಚಂದ್ ಸುಂದರಾನಿ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ.

ಸಾವಿಗೀಡಾದ ಶಿಶುಗಳಲ್ಲಿ ಹೃದಯದ ಸಮಸ್ಯೆ ಎದುರಿಸುತ್ತಿದ್ದ ಐದು ದಿನಗಳ ಹಸುಳೆಯೊಂದೂ ಸೇರಿದೆ. ಮಗುವಿನ ತಂದೆ ಬಾಲಘಾಟ್ ನಿವಾಸಿ ಪ್ರಕಾಶ್ ವಿಶ್ವಕರ್ಮ ಪ್ರಕಾರ ಮಗುವಿನ ಹೃದಯದಲ್ಲಿನ ತೂತಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News