ಸೂರತ್‌ನಲ್ಲಿ ಮುಸ್ಲಿಮರ ವಿರುದ್ಧ ‘ಆತಂಕಿತ ಪ್ರದೇಶಗಳ ಕಾಯ್ದೆ’ ಹೇರುವಂತೆ ಗುಜರಾತ್ ಬಿಜೆಪಿ ಶಾಸಕಿಯ ಆಗ್ರಹ

Update: 2017-08-21 11:37 GMT

ಸೂರತ್,ಆ.21: ಹಿಂದುಗಳ ಒಡೆತನದಲ್ಲಿರುವ ಮನೆಗಳನ್ನು ಮುಸ್ಲಿಮರು ಖರೀದಿಸುವುದನ್ನು ತಡೆಯಲು ತನ್ನ ಮತಕ್ಷೇತ್ರವಾಗಿರುವ ಸೂರತ್‌ನ ಲಿಂಬಾಯತ್‌ನಲ್ಲಿ ‘ಆತಂಕಿತ ಪ್ರದೇಶಗಳ ಕಾಯ್ದೆ’ಯನ್ನು ಹೇರುವಂತೆ ಸ್ಥಳೀಯ ಬಿಜೆಪಿ ಶಾಸಕಿ ಸಂಗೀತಾ ಪಾಟೀಲ್ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಲಿಂಬಾಯತ್‌ನ ಹಲವಾರು ಹಿಂದು ನಿವಾಸಿಗಳು ದೂರುಗಳನ್ನು ಸಲ್ಲಿಸಿದ ಬಳಿಕ ಕಾಯ್ದೆಯನ್ನು ಹೇರುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ತಾನು ಪತ್ರವನ್ನು ಬರೆದಿರುವುದಾಗಿ ಪಾಟೀಲ್ ತಿಳಿಸಿದರು.

 ‘ಆತಂಕಿತ ಪ್ರದೇಶಗಳ ಕಾಯ್ದೆ’ಯು ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆ ಒಂದು ಧಾರ್ಮಿಕ ಸಮುದಾಯದ ಜನರಿಗೆ ಸೇರಿದ ಸ್ಥಿರಾಸ್ತಿಗಳನ್ನು ಇನ್ನೊಂದು ಧಾರ್ಮಿಕ ಸಮುದಾಯದ ಜನರಿಗೆ ಮಾರಾಟ ಮಾಡುವುದನ್ನು ನಿಷೇಧಿಸಿದೆ.

ತನ್ನ ಕ್ರಮವನ್ನು ಸಮರ್ಥಿಸಿಕೊಂಡ ಶಾಸಕಿ, ಹಿಂದು ವಸತಿ ಸೊಸೈಟಿಗಳಲ್ಲಿನ ಆಸ್ತಿಗಳನ್ನು ಖರೀದಿಸಲು ಮುಸ್ಲಿಮರು ಬೆದರಿಕೆ ಸೇರಿದಂತೆ ಎಲ್ಲ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಲಿಂಬಾಯತ್ ಒಂದು ಕಾಲದಲ್ಲಿ ಹಿಂದು ಪ್ರದೇಶವಾಗಿತ್ತು. ಆದರೆ ಈಗ ಹಿಂದು ಹೆಸರುಗಳಲ್ಲಿರುವ ಗೋವಿಂದ ನಗರ, ಭಾರತಿ ನಗರ,ಭಾವನಾ ಪಾರ್ಕ್‌ನಂತಹ ಹಲವಾರು ಸೊಸೈಟಿಗಳಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚುತ್ತಿದೆ. ತಮಗೆ ಸುಲಭವಾಗಿ ಮನೆಗಳು ಸಿಗದಿದ್ದರೆ ಅವರು ಹಿಂದುಗಳಿಗೆ ಬೆದರಿಕೆಯನ್ನೂ ಒಡ್ಡಿ, ಬಲವಂತದಿಂದ ಅವರ ಮನೆಗಳನ್ನು ತೆರವುಗೊಳಿಸುತ್ತಾರೆ ಎಂದ ಪಾಟೀಲ್, ಹಿಂದುಗಳ ಆಸ್ತಿಗಳ ಖರೀದಿಗಾಗಿ ಮುಸ್ಲಿಮರು ಅನುಸರಿಸುತ್ತಿರುವ ನಾನಾ ತಂತ್ರಗಳನ್ನು ನೋಡಿದರೆ ಅವರು ಹಿಂದು ಪ್ರದೇಶಗಳಿಗೆ ವ್ಯಾಪಿಸುವುದನ್ನು ತಡೆಯಲು ಇಲ್ಲಿ ಆತಂಕಿತ ಪ್ರದೇಶಗಳ ಕಾಯ್ದೆಯನ್ನು ಹೇರಬೇಕು ಎನ್ನುವುದು ತನ್ನ ಅಭಿಪ್ರಾಯವಾಗಿದೆ ಎಂದರು.

ಸಂಪೂರ್ಣ ಲಿಂಬಾಯತ್ ಪ್ರದೇಶದಲ್ಲಿ ಈ ಕಾಯ್ದೆ ಹೇರಬೇಕು ಎಂದು ತಾನು ಆಗ್ರಹಿಸುತ್ತಿದ್ದೇನೆ ಎಂದ ಅವರು, ಈಗಾಗಲೇ ಸೂರತ್ ನಗರದ ಇತರ ಹಲವು ಭಾಗಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ ಎಂದರು.

ಪಾಟೀಲ್ ಅವರ ಆರೋಪಗಳನ್ನು ತಿರಸ್ಕರಿಸಿದ ಸ್ಥಳೀಯ ಕಾಂಗ್ರೆಸ್ ನಾಯಕ ಅಸ್ಲಂ ಸೈಕಲ್‌ವಾಲಾ ಅವರು, ಜನಪ್ರತಿನಿಧಿಯಾಗಿ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟು ಕೊಳ್ಳಲು ಪಾಟೀಲ್ ಇಂತಹ ‘ಕೋಮು’ ವಿಷಯವನ್ನು ಕೆದಕುತ್ತಿದ್ದಾರೆ ಎಂದರು.

ಮುಸ್ಲಿಮರು ನಿಜಕ್ಕೂ ಹಿಂದುಗಳನ್ನು ಬೆದರಿಸುತ್ತಿದ್ದಾರೆ ಎಂದಾದರೆ ಇಷ್ಟೆಲ್ಲ ವರ್ಷಗಳಲ್ಲಿ ಶಾಸಕಿಯೇಕೆ ಎಂದೂ ಪೊಲೀಸರಿಗೆ ದೂರು ಸಲ್ಲಿಸಿಲ್ಲ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲೇಕೆ ಈ ವಿಷಯವನ್ನು ಕೆದಕುತ್ತಿದ್ದಾರೆ ಎಂದೂ ಸೈಕಲ್‌ವಾಲಾ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News