ಗೌರಿ-ಗಣೇಶನ ಹಬ್ಬ: ಕೆಎಸ್ಸಾರ್ಟಿಸಿಯಿಂದ 1ಸಾವಿರ ಹೆಚ್ಚುವರಿ ಬಸ್ ಸೌಲಭ್ಯ

Update: 2017-08-22 04:27 GMT

ಬೆಂಗಳೂರು, ಆ. 22: ಗೌರಿ-ಗಣೇಶನ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ವತಿಯಿಂದ ಆ. 23ರಿಂದ 26ರ ವರೆಗೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಕೇಂದ್ರಗಳಿಗೆ 800 ರಿಂದ 1 ಸಾವಿರ ಹೆಚ್ಚುವರಿ ವಾಹನ ಸೌಲಭ್ಯ ಕಲ್ಪಿಸಲಾಗಿದೆ.

ಅನಂತರ ಆ.27ರಿಂದ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರು ನಗರಕ್ಕೆ ವಿಶೇಷ ವಾಹನಗಳು ಕಾರ್ಯಾಚರಣೆ ಮಾಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ಪಾವಗಡ, ಹೊಸದುರ್ಗಕ್ಕೆ ಕಾರ್ಯಾಚರಣೆ ಮಾಡಲಿವೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ರಾಜಪೇಟೆ, ಕುಶಾಲನಗರ, ಮಡಿಕೇರಿ.ತಮಿಳುನಾಡಿನ ಮಧುರೈ, ಕುಂಭಕೋಣಂ, ತಿರುಚಿ, ಚೆನ್ನೈ, ಕೊಯಮತ್ತೂರು, ಆಂಧ್ರದ ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಕಾರ್ಯಾಚರಣೆ ಮಾಡಲಾಗುವುದು.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೆಟ್‌ಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ, ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.

ರಿಯಾಯಿತಿ: ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ ಬರುವ ಪ್ರಯಾಣದ ಟಿಕೆಟ್ ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News