ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2017-08-22 08:18 GMT

ಹೈದರಾಬಾದ್ ,ಆ.22:  ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಚಾರ್ಲ ಮಂಡಲ್ ಎಂಬಲ್ಲಿ ನಡೆದ ಘಟನೆಯೊಂದರಲ್ಲಿ ನೆರೆಪೀಡಿತ ರಸ್ತೆಯಲ್ಲಿ ಸಿಲುಕಿದ್ದ 20 ವರ್ಷದ ಗರ್ಭಿಣಿಯೊಬ್ಬರು ಆಟೊ ರಿಕ್ಷಾವೊಂದರಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದತ್ತ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ರಸ್ತೆಯಲ್ಲಿ ನೆರೆ ನೀರು ನಿಂತಿದ್ದರಿಂದ ದಾರಿ ಮಧ್ಯದಲ್ಲಿ ನಿಲ್ಲುವಂತಾಯಿತು. ರವಿವಾರದ ಭಾರೀ ಮಳೆಗೆ ಆ ಪ್ರದೇಶ ಜಲಾವೃತವಾಗಿತ್ತು.

ಕೂಡಲೇ ಅಂಬುಲೆನ್ಸ್ ಒಂದಕ್ಕೆ ಕರೆ ಮಾಡಲಾಯಿತಾದರೂ ವಾಹನ ರಸ್ತೆಯ ಅತ್ತ ಕಡೆಯಿಂದ ನೀರಿನಲ್ಲಿ ಸಾಗುವುದು ಕಷ್ಟಕರವಾಗಿತ್ತು. ಕೊನೆಗೆ ಆಟೊದಲ್ಲಿಯೇ ಮಗುವಿಗೆ ಜನ್ಮ ನೀಡಿದ ಯುವತಿ ತನ್ನ ನವಜಾತ ಶಿಶುವನ್ನು ಹೊತ್ತುಕೊಂಡು  ನೀರು ತುಂಬಿದ್ದ ರಸ್ತೆಯಲ್ಲಿಯೇ ಸಾಗಿ ಅತ್ತ ಕಡೆಯಲ್ಲಿ ನಿಂತಿದ್ದ ಅಂಬುಲೆನ್ಸ್ ನತ್ತ ಬಂದಿದ್ದಾರೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಯುವತಿ ಅವಧಿಪೂರ್ವ ಪ್ರಸವಿಸಿರುವುದಾಗಿ ಹೇಳಲಾಗಿದ್ದು ಮಗುವನ್ನು ಶಿಶು ಆರೈಕೆ ವಿಭಾಗದಲ್ಲಿ ವೈದ್ಯರ ನಿಗಾದಲ್ಲಿಡಲಾಗಿದೆ.

ಕೆಲ ದಿನಗಳ ಹಿಂದೆ ಹೈದರಾಬಾದ್ ನ ಗಾಂಧಿ ಆಸ್ಪತ್ರೆಯ ಪ್ರಸೂತಿ ವಿಭಾಗದ ಹೊರಗಡೆ ಮಹಿಳೆಯೊಬ್ಬಳು ಆಟೊ ರಿಕ್ಷಾವೊಂದರಲ್ಲಿಯೇ ಮಗುವಿಗೆ ಜನ್ಮ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News