ಸೊಳ್ಳೆ ನಿಯಂತ್ರಣ, ಬಿಬಿಎಂಪಿ ವಿಫಲ: ಸೊಳ್ಳೆ ಪರದೆ ಹೊದ್ದು ಪ್ರತಿಭಟನೆ

Update: 2017-08-22 12:34 GMT

ಬೆಂಗಳೂರು, ಆ.22: ನಗರ ವ್ಯಾಪ್ತಿ ಹೆಚ್ಚಾಗಿರುವ ಸೊಳ್ಳೆ ನಿಯಂತ್ರಣ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಸಂಯುಕ್ತ ಜನತಾದಳ(ಜೆಡಿಯು) ಕಾರ್ಯಕರ್ತರು ಪಾಲಿಕೆ ಕೇಂದ್ರ ಕಚೇರಿ ಮುಂಭಾಗ ಸೊಳ್ಳೆ ಪರದೆ ಹೊದ್ದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜೆಡಿಯು ಮುಖಂಡ ನಾಗೇಶ್, ಸೊಳ್ಳೆಗಳ ಹೆಚ್ಚಳದಿಂದ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿವೆ. ಹಾಗಾಗಿ ಅಪಾಯಕಾರಿಯಾದ ಡೆಂಗ್, ಚಿಕೂನ್‌ಗುನ್ಯ ರೋಗ ಹೆಚ್ಚಾಗಿವೆ. ಈವರೆಗೆ 3722 ಡೆಂಗ್, 1300 ಚಿಕೂನ್ ಗುನ್ಯ ಪ್ರಕರಣಗಳು ಪತ್ತೆಯಾಗಿವೆ. ಸೊಳ್ಳೆ ನಿಯಂತ್ರಣ ಮಾಡದಿರುವುದೇ ಇದಕ್ಕೆ ಕಾರಣ ಎಂದು ದೂರಿದರು.

ಪ್ರಮುಖ ಆಸ್ಪತ್ರೆಗಳ ಮಾಹಿತಿ ಪ್ರಕಾರ ಕಳೆದ ಆರು ತಿಂಗಳಲ್ಲಿ 27ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಷ್ಟೆಲ್ಲಾ ಆದರೂ ಸೊಳ್ಳೆ ನಿಯಂತ್ರಣ ಮಾಡಲು ಬಿಬಿಎಂಪಿ ಮೀನಾಮೇಷ ಎಣಿಸುತ್ತಿದೆ. ನಾಲ್ಕು ಬಜೆಟ್‌ನಲ್ಲಿ ಸುಳ್ಳೆ ನಿಯಂತ್ರಣಕ್ಕೆ 27 ಕೋಟಿ ಮೀಸಲಿಟ್ಟಿದ್ದರೂ, ಕೇವಲ 5 ಕೋಟಿ ಖರ್ಚು ಮಾಡಿದ್ದಾರೆ ಎಂದರು. ಕೂಡಲೇ ಪಾಲಿಕೆ ಆಸ್ಪತ್ರೆಗಳಲ್ಲಿ ರಿಯಾತಿ ದರದಲ್ಲಿ ಔಷಧಿ ನೀಡಬೇಕು. ಸೊಳ್ಳೆ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಇದೇ ವೇಳೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News