​ದೇವಾಲಯದಲ್ಲಿ ದಲಿತರಿಗೆ ನಿಷೇಧ: ಕಾನ್ಪುರ ಉದ್ವಿಗ್ನ

Update: 2017-08-23 03:52 GMT

ಕಾನ್ಪುರ, ಆ.23: ಹಮೀರ್‌ಪುರ ಜಿಲ್ಲೆಯ ಮೌದಾಹಾ ಎಂಬಲ್ಲಿರುವ ರಾಮ ಜಾನಕಿ ದೇವಾಲಯದಲ್ಲಿ ದಲಿತರ ಪ್ರವೇಶಕ್ಕೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಅಖಂಡ ರಾಮಾಯಣ ಪಥದಲ್ಲಿ ಭಾಗವಹಿಸಲು ಆಗಮಿಸಿದ್ದ ಎಲ್ಲ ದಲಿತರನ್ನು ದೇವಾಲಯದಿಂದ ಹೊರಗೆ ಇರುವಂತೆ ಅರ್ಚಕ ಕನ್ವರ್ ಬಹದ್ದೂರ್ ಸಿಂಗ್ ಸೂಚನೆ ನೀಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಆ ಪೈಕಿ ಬಹಳಷ್ಟು ಮಂದಿ ಮಕ್ಕಳು ಸೇರಿದ್ದು, ಸುಮಾರು 10 ಕಿಲೋಮೀಟರ್ ದೂರದ ಮೌದಾಹಾದಿಂದ ರಾಮಾಯಣ ಕಂಠಪಾಠ ಮಾಡುವ ಸಲುವಾಗಿ ಆಗಮಿಸಿದ್ದರು ಎನ್ನಲಾಗಿದೆ.

ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮೌದಾಹಾ ಎಸ್‌ಡಿಎಂ ಸುರೇಶ್ ಮಿಶ್ರಾ ಹೇಳಿದ್ದಾರೆ. ಕಂದಾಯ ಇಲಾಖೆಯಿಂದ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಅರ್ಚಕ ಬಹದ್ದೂರ್ ಸಿಂಗ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದು, ದೇವಾಲಯದ ಒಳಗೆ ದಲಿತರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. "ದೇವಸ್ಥಾನ ನಮ್ಮ ಕುಟುಂಬಕ್ಕೆ ಸೇರಿದ್ದು. ದಲಿತರು ದೇವಾಲಯ ಪ್ರವೇಶಿಸಲು ಅವಕಾಶ ನೀಡುವುದಿಲ್ಲ" ಎಂದು ಖಂಡಾತುಂಡವಾಗಿ ಹೇಳಿದ್ದಾರೆ. ಕಳೆದ ಎರಡು ವಾರಗಳಿಂದ ದೇವಾಲಯದಲ್ಲಿ ಪ್ರತೀದಿನ ರಾಮಾಯಣ ಪ್ರವಚನ ನಡೆಯುತ್ತಿದೆ.

ದೇವಾಲಯದ ಪ್ರವೇಶದ್ವಾರದಲ್ಲೇ ದಲಿತರಿಗೆ ಪ್ರವೇಶವಿಲ್ಲ ಎಂಬ ನಾಮಫಲಕ ಇರುವುದು ಆಘಾತ ತಂದಿದೆ. ನನ್ನ ಅಳಿಯ ಹಾಗೂ ಸ್ನೇಹಿತ ದೇವಾಲಯಕ್ಕೆ ಮುಂಜಾನೆ ಹೋಗಲು ಪ್ರಯತ್ನಿಸಿದಾಗ ಅರ್ಚಕರು ತಡೆದಿದ್ದಾರೆ ಎಂದು ಉಮಾಶಂಕರ್ ಶ್ರೀವಾಸ್ ಹೇಳಿದ್ದಾರೆ. ಬಳಿಕ ನಾಮಫಲಕ ಕಳಚಿದ್ದರೂ, ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ಅರ್ಚಕ ಸ್ಪಷ್ಟಪಡಿಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಐದು ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಶೇಕಡ 30ರಷ್ಟು ದಲಿತರಿದ್ದು, ದೇವಾಲಯದ ನಿರ್ಧಾರ ದಲಿತ ಸಮುದಾಯವನ್ನು ಕೆರಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News