ಗಂಡ ಹೆಂಡಿರ ವ್ಯವಹಾರದಲ್ಲಿ ನ್ಯಾಯಾಧೀಶರ ಇತಿಮಿತಿಗಳು

Update: 2017-08-24 04:21 GMT

ಮುಸ್ಲಿಮ್ ಸಮಾಜದ ಕೆಲವು ವಲಯಗಳಲ್ಲಿ ಬಹುಕಾಲದಿಂದ ಚಲಾವಣೆಯಲ್ಲಿರುವ ತ್ರಿವಳಿ ತಲಾಖ್ ಪದ್ಧತಿಯನ್ನು ಹೆಚ್ಚಿನ ಮುಸ್ಲಿಮ್ ಸ್ತ್ರೀಯರು ಮತ್ತು ಪುರುಷರು ಒಕ್ಕೊರಲಿನಿಂದ ಅನಿಷ್ಟವೆಂದು ಖಂಡಿಸುತ್ತಾ ಬಂದಿದ್ದಾರೆ. ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಇಸ್ಲಾಮ್ ಧರ್ಮವು ನೀಡಿರುವ ಸಮಗ್ರ ಹಾಗೂ ನ್ಯಾಯೋಚಿತ ನಿಯಮವನ್ನು ನಗೆಪಾಟಲಿಗೆ ಈಡಾಗಿಸಿರುವ ಈ ತ್ರಿವಳಿ ತಲಾಖ್‌ನ ಅನಿಷ್ಟವನ್ನು ತಮ್ಮ ಸಮಾಜದಿಂದ ಕಿತ್ತು ಹಾಕುವ ಕೆಲಸವನ್ನು ಸ್ವತಃ ಮುಸ್ಲಿಮರೇ ಮಾಡಬೇಕಿತ್ತು. ಆದರೆ ಅವರು ಸತತವಾಗಿ ಈ ಕಾರ್ಯದಲ್ಲಿ ವಿಫಲರಾಗಿದ್ದಾರೆ. ಇದೀಗ ದೇಶದ ಪರಮೋಚ್ಚ ನ್ಯಾಯಾಲಯವು ತ್ರಿವಳಿ ತಲಾಖ್ ಅನ್ನು ಅಮಾನ್ಯ ಗೊಳಿಸಿದೆ.

ಮಂಗಳವಾರ ಪ್ರಕಟವಾದ ಸುಪ್ರೀಂ ಕೋರ್ಟಿನ ಈ ತೀರ್ಪು ಮುಸ್ಲಿಮ್ ಸಮಾಜವನ್ನು ಪ್ರಸ್ತುತ ಅನಿಷ್ಟದಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿದ್ದು, ತೀರ್ಪಿನ ಹಿಂದಿರುವ ಈ ಸ್ಫೂರ್ತಿಯು ಖಂಡಿತ ಸ್ವಾಗತಾರ್ಹವಾಗಿದೆ. ಆದ್ದರಿಂದಲೇ ಹೆಚ್ಚಿನ ವಲಯಗಳಲ್ಲಿ ಈ ತೀರ್ಪನ್ನು ಸ್ವಾಗತಿಸಲಾಗಿದೆ. ಅದೇ ವೇಳೆ ಈ ತೀರ್ಪಿನ ಕುರಿತಂತೆ ಈಗಾಗಲೇ ಹಲವರು ಹಲವು ಬಗೆಯ ಸಂದೇಹ ಹಾಗೂ ಆಶಂಕೆಗಳನ್ನೂ ವ್ಯಕ್ತ ಪಡಿಸಿದ್ದಾರೆ. ಈ ರೀತಿ ಸಂದೇಹ, ಆಶಂಕೆಗಳನ್ನು ವ್ಯಕ್ತ ಪಡಿಸುತ್ತಿರುವವರೆಲ್ಲಾ ತ್ರಿವಳಿ ತಲಾಖ್‌ನ ಸಮರ್ಥಕರೇನಲ್ಲ ಎಂಬುದು ಗಮನಾರ್ಹ. ತ್ರಿವಳಿ ತಲಾಖ್ ಅನ್ನು ಕಟುವಾಗಿ ವಿರೋಧಿಸುತ್ತಾ ಬಂದಿರುವ ಹಲವರು ಕೂಡಾ ಪ್ರಸ್ತುತ ತೀರ್ಪನ್ನು ಸಂದೇಹದಿಂದ ನೋಡುತ್ತಿರುವುದಕ್ಕೆ, ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಕುರಿತಂತೆ ಅವರಲ್ಲಿರುವ ಅಭದ್ರತೆಯ ಭಾವನೆಯೇ ಮುಖ್ಯ ಕಾರಣವಾಗಿದೆ.

ನ್ಯಾಯಾಂಗವು ದೇಶದ ಮುಸ್ಲಿಮರ ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಲಾರಂಭಿಸಿದರೆ ಆ ಪ್ರಕ್ರಿಯೆಯು ಮುಂದೆ ಯಾವೆಲ್ಲ ಹಂತಗಳನ್ನು ತಲುಪಬಹುದು ಎಂದು ಅವರು ಅಂಜುತ್ತಿದ್ದಾರೆ. ಒಂದು ಅಲ್ಪಸಂಖ್ಯಾತ ಸಮುದಾಯವೆಂಬ ನೆಲೆಯಲ್ಲಿ ಮತ್ತು ಸಂಘಟಿತ, ಶಕ್ತಿಶಾಲಿ, ಕೋಮುವಾದಿ ಹಾಗೂ ಜನಾಂಗವಾದಿ ಶಕ್ತಿಗಳಿಂದ ಸತತ ಅನುಮಾನ, ಅಪಮಾನ, ಪ್ರಹಾರ ಮತ್ತು ಆಕ್ರಮಣಗಳನ್ನು ಎದುರಿಸುತ್ತಾ ಬಂದಿರುವ ಸಮುದಾಯವೆಂಬ ನೆಲೆಯಲ್ಲಿ ಭಾರತೀಯ ಮುಸ್ಲಿಮ್ ಸಮುದಾಯವು ತೀವ್ರ ಸ್ವರೂಪದ ಅಭದ್ರತೆಯ ಭಾವನೆಯಿಂದ ನರಳುತ್ತಿರುವುದು ಸ್ವಾಭಾವಿಕವಾಗಿದೆ. ಅವರ ಈ ಅಭದ್ರತೆಯ ಮಾನಸಿಕತೆ ಜಗತ್ತಿಗೆಲ್ಲಾ ತಿಳಿದಿದೆ. ಇಂತಹ ಅಭದ್ರತೆಯ ವಾತಾವರಣದಲ್ಲಿ, ಸುಧಾರಣೆಯ ಶ್ರಮಗಳು ಎಷ್ಟೇ ಪ್ರಾಮಾಣಿಕವಾಗಿದ್ದರೂ, ಎಷ್ಟೇ ಸದುದ್ದೇಶ ಹೊಂದಿದ್ದರೂ ಆ ಕುರಿತು ಪ್ರಬಲ ಪ್ರತಿರೋಧ ಇದ್ದೇ ಇರುತ್ತದೆ.

ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲೀ ರೆಹ್ಮಾನಿ ಅವರೊಡನೆ ಪ್ರಸ್ತುತ ಕೋರ್ಟ್ ತೀರ್ಪಿನ ಕುರಿತು ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದಾಗ ಅವರು, ಇದನ್ನು ಸ್ವಾಗತಿಸುವ ಅಥವಾ ಖಂಡಿಸುವ ಬದಲು ಬೋರ್ಡ್‌ನ ಮುಂದಿನ ಸಭೆಯಲ್ಲಿ ಈ ತೀರ್ಪಿನ ಕುರಿತು ಸವಿಸ್ತಾರ ಚರ್ಚೆ ನಡೆಸಿದ ಬಳಿಕವಷ್ಟೇ ತಾನು ಏನಾದರೂ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಜಾರಿಕೊಂಡರು. ಅವರು ವಹಿಸಿದ ಈ ಎಚ್ಚರ ಕೂಡಾ ಅವರಲ್ಲಿನ ಅನಿಶ್ಚಿತತೆ ಹಾಗೂ ಅಭದ್ರತೆಗೆ ಸಾಕ್ಷಿ ಎಂಬಂತಿತ್ತು. ತೀರ್ಪಿನ ಕುರಿತಂತೆ ದೇಶದ ವಿವಿಧ ವಲಯಗಳಿಂದ ತೀರಾ ವಿಭಿನ್ನವಾದ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಪ್ರತಿಕ್ರಿಯೆಗಳ ಸ್ವರೂಪದಂತೆ ಅವುಗಳ ಹಿಂದಿನ ಪ್ರೇರಣೆಗಳೂ ಬಹಳ ಭಿನ್ನವಾಗಿವೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ತರದ ನ್ಯಾಯ ವಿರೋಧಿಗಳು ಮತ್ತು ಅವರ ಆಪ್ತ ವಲಯಗಳು ಈ ತೀರ್ಪಿನ ಬಗ್ಗೆ ವಿಪರೀತ ಉತ್ಸಾಹದೊಂದಿಗೆ ಪ್ರಕಟಿಸಿರುವ ಸಂಭ್ರಮವು ಹಲವರಲ್ಲಿ ಹಲವು ಬಗೆಯ ಸಂಶಯಗಳು ಮೂಡುವುದಕ್ಕೆ ಕಾರಣವಾಗಿವೆ. ಅವರ ಸಂಭ್ರಮಕ್ಕೆ ಅವರು ಮಹಿಳೆಯರ, ಅದರಲ್ಲೂ ಮುಸ್ಲಿಮ್ ಮಹಿಳೆಯರ ಹಿತೈಷಿಗಳಾಗಿರುವುದು ಕಾರಣವಲ್ಲ ಎಂಬುದಂತೂ ಎಲ್ಲರಿಗೆ ತಿಳಿದಿದೆ.

ಏಕೆಂದರೆ ಇತ್ತ ಮೋದಿ, ಹಲವು ದಶಕಗಳಿಂದ ಸ್ವತಃ ತನ್ನ ಪತ್ನಿಯನ್ನೇ ಅನಾಥ ಸ್ಥಿತಿಯಲ್ಲಿ ಬಿಟ್ಟು ಬೇಜವಾಬ್ದಾರಿತನದ ಪರಮಾವಧಿ ಮೆರೆದವರು. ಹಾಗೆಯೇ ಸಾವಿರಾರು ಮುಸ್ಲಿಮ್ ಮಹಿಳೆಯರ ಹತ್ಯೆ ಮತ್ತು ಅತ್ಯಾಚಾರಕ್ಕೆ ದಾರಿ ಮಾಡಿದ ಗುಜರಾತ್ ಹತ್ಯಾಕಾಂಡದ ಪ್ರಧಾನ ಸೂತ್ರಧಾರಿ ಎಂಬ ಆರೋಪ ಹೊತ್ತವರು. ಅತ್ತ ಅಮಿತ್ ಶಾ ಕೂಡಾ ವಿವಿಧ ಅನ್ಯಾಯ, ಅಕ್ರಮ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗವಹಿಸಿ ಅದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ, ಜೈಲಿನಿಂದ ಹೊರ ಬರುವುದಕ್ಕಾಗಿಯೂ ಅಕ್ರಮ ವಿಧಾನಗಳನ್ನು ಬಳಸಿದ ಆರೋಪ ಹೊತ್ತವರು. ಇಂಥವರು ಆಚರಿಸುವ ಸಂಭ್ರಮ ಸುಪ್ರೀಂ ಕೋರ್ಟಿನ ತೀರ್ಪು ನ್ಯಾಯೋಚಿತವಾಗಿದೆಯೇ ಎಂಬ ಕುರಿತು ಹಲವರ ಮನದಲ್ಲಿ ಪ್ರಶ್ನೆಗಳನ್ನೆಬ್ಬಿಸಿದ್ದರೆ ಅಚ್ಚರಿಯೇನಿಲ್ಲ.

ಈ ಸಂದರ್ಭದಲ್ಲಿ, ಕೌಟುಂಬಿಕ ವಿಷಯಗಳಲ್ಲಿ ನ್ಯಾಯಾಲಯಗಳ ತೀರ್ಪುಗಳಿಗಿರುವ ಇತಿಮಿತಿಗಳನ್ನು ನಾವು ಮರೆಯ ಬಾರದು. ತ್ರಿವಳಿ ತಲಾಖ್ ಅನ್ನು ನ್ಯಾಯಾಲಯವು ಅಮಾನ್ಯ ಮಾಡಿದೊಡನೆ, ಅದು ಸಮಾಜದಿಂದ ಮಾಯವಾಗಿ ಬಿಡುವುದಿಲ್ಲ. ನಮ್ಮಲ್ಲಿ ವರದಕ್ಷಿಣೆಯ ವಿರುದ್ಧ ಭಾರೀ ಕಠಿಣ ಕಾನೂನುಗಳಿವೆ. ಆದರೆ ಆ ಕಾನೂನುಗಳಿಂದಾಗಿ ನಮ್ಮ ಸಮಾಜವು ವರದಕ್ಷಿಣೆಯ ಶಾಪದಿಂದ ಮುಕ್ತವೇನೂ ಆಗಿಲ್ಲ. ವರದಕ್ಷಿಣೆ ಪಡೆಯುವವರು ಅದಕ್ಕಾಗಿ ಅನೇಕ ನಾಜೂಕಿನ ಒಳದಾರಿಗಳನ್ನು ಕಂಡು ಕೊಂಡಿರುತ್ತಾರೆ. ಇನ್ನು ವರದಕ್ಷಿಣೆಯ ವಿರುದ್ಧ ಇರುವ ಹೆಚ್ಚಿನೆಲ್ಲಾ ನಿಯಮಗಳು ಅಪರಾಧಿಗಳ ಬದಲು ಮುಗ್ಧರ ವಿರುದ್ಧ ಬಳಕೆಯಾದ ಉದಾಹರಣೆಗಳು ಧಾರಾಳ ಇವೆ.

ತ್ರಿವಳಿ ತಲಾಖ್ ಅಮಾನ್ಯವಾದೊಡನೆ ಹಲವರು ತಮ್ಮ ಪತ್ನಿಗೆ ಯಾವ ತಲಾಖನ್ನೂ ನೀಡದೆ, ಆಕೆ ಬೇರೆ ವಿವಾಹ ಕೂಡಾ ಆಗದಂತೆ ಆಕೆಯನ್ನು ತ್ರಿಶಂಕು ಸ್ಥಿತಿಯಲ್ಲಿ ಬಿಟ್ಟು ಬಿಡುವ ಕ್ರೌರ್ಯಕ್ಕೆ ಇಳಿಯಬಹುದು, ಅಥವಾ ಕ್ರೌರ್ಯ, ಅನ್ಯಾಯಗಳ ಪ್ರದರ್ಶನಕ್ಕೆ ಹೊಸ ದಾರಿಗಳನ್ನು ಕಂಡುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಸುಧಾರಣೆಯಲ್ಲಿ ಆಸಕ್ತಿ ಉಳ್ಳವರು ಅದಕ್ಕಾಗಿ ಕೇವಲ ಶಾಸನಗಳನ್ನು ಅಥವಾ ಕೋರ್ಟ್ ತೀರ್ಪುಗಳನ್ನು ಅವಲಂಬಿಸುವ ಬದಲು ಆಂತರಿಕ ಹಾಗೂ ಸ್ವಯಂ ಪ್ರೇರಿತ ವಿಧಾನಗಳನ್ನು ಅವಲಂಬಿಸುವುದು ಲೇಸು. ಹಾಗೆಯೇ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭದ್ರತೆ ಹಾಗೂ ಆತ್ಮ ವಿಶ್ವಾಸದ ವಾತಾವರಣವನ್ನು ಬೆಳೆಸಲು ಶ್ರಮಿಸಬೇಕು. ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಮಂದಿ ಅಲ್ಪ ಸಂಖ್ಯಾತ ಸಮುದಾಯಗಳ ಪಾಲಿಗೆ ಖಳನಾಯಕರಾಗಿರದೆ ಅವರ ವಿಶ್ವಾಸ ಪಾತ್ರರಾದಾಗಲೂ ಸುಧಾರಣೆಯ ಪ್ರಕ್ರಿಯೆ ನಿರಾತಂಕವಾಗಿ ಬಿಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News