ಅಮಿತ್ ಶಾ ಹತಾಶೆಯ ಹೇಳಿಕೆ

Update: 2017-08-29 18:40 GMT

ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ, ಪ್ರಾಮಾಣಿಕ ಹಾಗೂ ಗಂಭೀರ ತನಿಖೆ ನಡೆದಿದ್ದರೆ ಜೈಲು ಪಾಲಾಗಬಹುದಾಗಿದ್ದ ಹಲವು ನಾಯಕರು ಇಂದು ಕೇಂದ್ರದಲ್ಲಿ ದೇಶವನ್ನು ಆಳುತ್ತಿದ್ದಾರೆ. ಗುಜರಾತ್‌ನೊಳಗೆ ಭಾರತವಿದೆ ಎಂದು ಇನ್ನೂ ನಂಬಿರುವ ಅಮಿತ್ ಶಾ ಬಳಗ, ಈ ದೇಶದ ಎಲ್ಲ ತನಿಖಾ ಸಂಸ್ಥೆಗಳು ಇರುವುದು ತಮ್ಮ ರಾಜಕೀಯ ವೈರಿಗಳನ್ನು ಬಗ್ಗು ಬಡಿಯುವುದಕ್ಕೆ ಮತ್ತು ತಮ್ಮ ರಾಜಕೀಯ ಮಿತ್ರರು ಜೈಲಿಗೆ ಹೋಗುವುದನ್ನು ತಡೆಯುವುದಕ್ಕೆ ಎಂಬಂತೆ ಭಾವಿಸಿ ಅವುಗಳನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬಿಹಾರ ಸರಕಾರದ ಪತನ, ಗುಜರಾತ್ ರಾಜ್ಯಸಭಾ ಚುನಾವಣೆ, ಕರ್ನಾಟಕ ಐಟಿದಾಳಿ ಇವೆಲ್ಲ ಸಂದರ್ಭಗಳಲ್ಲಿ ತಮ್ಮ ದುರುದ್ದೇಶಕ್ಕಾಗಿ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡುತ್ತಿರುವುದು ಪ್ರಾಥಮಿಕ ನೋಟದಲ್ಲೇ ಗುರುತಿಸಲ್ಪಡುತ್ತಿದೆಯಾದರೂ, ಅದನ್ನು ಅಕ್ರಮವೆಂದು ಟೀಕಿಸುವುದಕ್ಕೆ ಮಾಧ್ಯಮಗಳ ನಾಲಗೆಗಳು ತೊಡರುತ್ತಿವೆ.

ಬದಲಿಗೆ ಅದೊಂದು ‘ಚಾಣಕ್ಯ ತಂತ್ರ’ವೆಂದು ಬಣ್ಣಿಸುತ್ತಾ, ವರ್ತಮಾನದ ಅತ್ಯಂತ ನೀಚ ರಾಜಕಾರಣಕ್ಕೆ ಚಾಣಕ್ಯನನ್ನು ರೂಪಕವಾಗಿ ಬಳಸಿಕೊಳ್ಳುತ್ತಿವೆ. ಅಮಿತ್ ಶಾರನ್ನು ಆಧುನಿಕ ಚಾಣಕ್ಯ ಎಂದು ಕರೆಯುವ ಮಾಧ್ಯಮ ವಂದಿ ಮಾಗಧರು ಆ ಮೂಲಕ ಇತಿಹಾಸದಲ್ಲಿ ಆಗಿಹೋಗಿರುವ ಚಾಣಕ್ಯನ ಮುಖವನ್ನು ವಿರೂಪಗೊಳಿಸುತ್ತಿದ್ದಾರೆ. ಚಾಣಕ್ಯ ಮೇಲ್ಜಾತಿಯ ಮುಖ್ಯವಾಗಿ ವರ್ಣವ್ಯವಸ್ಥೆಯ ಹಿತಾಸಕ್ತಿಗಾಗಿ ಶೂದ್ರ ಚಂದ್ರಗುಪ್ತ ವೌರ್ಯನನ್ನು ಬಳಸಿಕೊಂಡ. ತಂತ್ರವನ್ನು ರೂಪಿಸಿದ. ಮೋಸ, ವಂಚನೆ, ಕೊಲೆ ಇತ್ಯಾದಿಗಳನ್ನೆಲ್ಲ ರಾಜತಂತ್ರವೆಂದು ಕರೆದು ಅದನ್ನು ರಾಜಕೀಯದಲ್ಲಿ ಮಾನ್ಯ ಮಾಡಿದ. ಈ ಕಾರಣಕ್ಕಾಗಿ ಅಮಿತ್ ಶಾ ಆಧುನಿಕ ಚಾಣಕ್ಯ ಎಂದಾದರೆ ಅದನ್ನು ಒಪ್ಪಿಕೊಳ್ಳಬಹುದೋ ಏನೋ. ಯಾಕೆಂದರೆ, ಅಮಿತ್ ಶಾ ಮೋಸ, ವಂಚನೆ ಮತ್ತು ದಗಲ್ಬಾಜಿಗಳಲ್ಲಿ ಆ ಚಾಣಕ್ಯನಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಪೊಲೀಸ್ ಇಲಾಖೆಯನ್ನು ತನ್ನ ದುರುದ್ದೇಶಕ್ಕಾಗಿ ಬಳಸಿಕೊಂಡು ಜೈಲು ಸೇರಿದ ಹೆಗ್ಗಳಿಕೆ ಅಮಿತ್ ಶಾರಿಗಿದೆ.

ಆದರೆ ಚಾಣಕ್ಯನಿಗಿಲ್ಲ. ಚಾಣಕ್ಯ ತನ್ನ ರಾಜಕೀಯ ಕ್ಷೇತ್ರದಲ್ಲಿ ಮೋಸ ವಂಚನೆ ಎಲ್ಲವನ್ನೂ ರಾಜತಂತ್ರದ ಭಾಗವಾಗಿ ಗುರುತಿಸಿದ್ದನಾದರೂ, ಆತ ನೇರವಾಗಿ ಜನಸಾಮಾನ್ಯರ ಹತ್ಯಾಕಾಂಡದ ಆರೋಪವನ್ನು ಅಂಟಿಸಿಕೊಂಡ ಬಗ್ಗೆ ದಾಖಲೆಗಳಿಲ್ಲ. ಆದುದರಿಂದ, ಮುಂದಿನ ದಿನಗಳಲ್ಲಿ ಮಾಧ್ಯಮಗಳು ಚಾಣಕ್ಯನನ್ನು, ಪ್ರಾಚೀನ ಅಮಿತ್ ಶಾ ಎಂದು ಬಣ್ಣಿಸುವುದೇ ಹೆಚ್ಚು ಅರ್ಥಪೂರ್ಣವಾಗಬಹುದು. ವಿಪರ್ಯಾಸವೆಂದರೆ, ಬಿಜೆಪಿಯ ವಿರುದ್ಧ ಧ್ವನಿಯೆತ್ತಿದವರನ್ನೆಲ್ಲ ಜೈಲಿಗೆ ಕಳುಹಿಸುವ ಅಧಿಕಾರ ತನಗಿದೆ ಎಂದು ಇತ್ತೀಚಿನ ದಿನಗಳಲ್ಲಿ ಅಮಿತ್ ಶಾ ಭಾವಿಸ ತೊಡಗಿದ್ದಾರೆ. ತಮ್ಮದೇ ಪ್ರಾಯೋಜಕತ್ವದಲ್ಲಿ ಮಾಧ್ಯಮಗಳ ಮೂಲಕ ಬರುತ್ತಿರುವ ಹೊಗಳಿಕೆಗಳಿಗೆ ತಾವೇ ಮಾರು ಹೋಗಿ, ತಮ್ಮನ್ನು ತಾವು ಸಂವಿಧಾನಕ್ಕಿಂತ ಮಿಗಿಲು ಎಂದು ಅವರು ತಿಳಿದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕಕ್ಕೆ ಬಂದು, ಮಾಧ್ಯಮಗಳ ಮೂಲಕ ಗದ್ದಲ ಎಬ್ಬಿಸಿ, ಬಿಜೆಪಿಗೆ ಅಮಿತ್ ಶಾ ಪ್ರವೇಶ ಮತ್ತೆ ಶಕ್ತಿಯನ್ನು ಕೊಟ್ಟಿದೆ ಎಂದು ಬಿಂಬಿಸಲು ಹೋಗಿ ವಿಫಲರಾಗಿ ಹತಾಶೆಯಿಂದ ಮರಳಿದ ಅವರು, ಇದೀಗ ದಿಲ್ಲಿಯಲ್ಲಿ ಕುಳಿತು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುವಂತಹ ಮಾತುಗಳನ್ನು ಆಡಿದ್ದಾರೆ. ಕರ್ನಾಟಕದಲ್ಲಿ ಅಮಿತ್ ಶಾ ನಾಟಕಗಳೆಲ್ಲ ನೀರು ಪಾಲಾಗಿವೆ. ಬಿಜೆಪಿಯನ್ನು ಸಂಘಟಿಸುವುದಿರಲಿ, ಯಡಿಯೂರಪ್ಪ-ಈಶ್ವರಪ್ಪ ಅವರನ್ನು ಒಟ್ಟುಗೂಡಿಸುವುದರಲ್ಲೇ ಅವರು ವಿಫಲರಾದರು. ಅಷ್ಟೇ ಅಲ್ಲ, ಇಲ್ಲಿನ ಲಿಂಗಾಯತ, ವೀರಶೈವ ಮೊದಲಾದ ರಾಜಕೀಯ ಸಾಮಾಜಿಕ ಜಾಗೃತಿಗಳನ್ನು ಪಕ್ಷಕ್ಕೆ ಪೂರಕವಾಗಿ ಸ್ವೀಕರಿಸುವುದು ಹೇಗೆ ಎನ್ನುವುದನ್ನು ವಿವರಿಸಲೂ ಅವರಿಗೆ ಸಾಧ್ಯವಾಗಲಿಲ್ಲ.

ಒಂದೆಡೆ ಅಹಿಂದ ಕಡೆಗೆ ಗಮನ ಕೊಡಿ ಎಂದು ಬಿಜೆಪಿಗೆ ನಿರ್ದೇಶಿಸಿದರೂ, ಈಶ್ವರಪ್ಪ ಅವರ ಅಹಿಂದ ಹೋರಾಟಕ್ಕೆ ಅವರು ಅಧಿಕೃತ ಮಾನ್ಯತೆಯನ್ನು ನೀಡಲಿಲ್ಲ. ಹಾಗೆ ಮಾನ್ಯತೆಯನ್ನು ನೀಡಿದ್ದೇ ಆದರೆ ಯಡಿಯೂರಪ್ಪ ಸಿಡಿದೇಳುತ್ತಾರೆ. ಒಂದು ರೀತಿ ಅವರು ಹತಾಶರಾಗಿ ದಿಲ್ಲಿಗೆ ಮರಳಿದರು. ಆದರೆ ದಿಲ್ಲಿಯಲ್ಲಿ ಕುಳಿತು ತಮ್ಮ ಪಕ್ಷವನ್ನು ಹೇಗೆ ಕರ್ನಾಟಕದಲ್ಲಿ ಮೇಲೆತ್ತಬಹುದು ಎನ್ನುವುದರ ಬಗ್ಗೆ ಚಿಂತೆ ಮಾಡದೆ, ‘‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 45 ದಿನಗಳಲ್ಲಿ ಜೈಲಿಗೆ ಕಳುಹಿಸುತ್ತೇನೆ’’ ಎಂಬಂತಹ ಮಾತುಗಳನ್ನು ಆಡಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಮತ್ತು ಉದ್ಧಟತನದ ಮಾತಾಗಿದೆ.

ಅಮಿತ್ ಶಾ ಬಿಜೆಪಿಯ ರಾಷ್ಟ್ರಾಧ್ಯಕ್ಷರೇ ಹೊರತು, ದೇಶದ ರಾಷ್ಟ್ರಾಧ್ಯಕ್ಷರಲ್ಲ. ಒಬ್ಬ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನಬೇಕಾದರೆ ಅವರಲ್ಲಿ ಸಾಕಷ್ಟು ದಾಖಲೆಗಳಿರಬೇಕು. ಕನಿಷ್ಠ ಅವರ ವಿರುದ್ಧ ಯಾವುದಾದರೂ ಭ್ರಷ್ಟಾಚಾರ ಅಥವಾ ಇನ್ನಿತರ ಪ್ರಕರಣಗಳು ದಾಖಲಾಗಿರಬೇಕು. ಹೀಗಿರುವಾಗ ಬರೇ ಬಿಜೆಪಿಯ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕಾಗಿ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುವುದು ಅಮಿತ್ ಶಾ ಅವರ ದುರಹಂಕಾರದ ಪರಮಾವಧಿಯಲ್ಲವೇ? ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದ್ದು ಬಿಜೆಪಿಯ ನಾಯಕರಲ್ಲ. ಅಷ್ಟೇ ಯಾಕೆ, ದಿಲ್ಲಿಯ ಕಾಂಗ್ರೆಸ್ ಹೈಕಮಾಂಡನ್ನು ಓಲೈಸುವ ಮೂಲಕ ಮುಖ್ಯಮಂತ್ರಿ ಪದವಿಯನ್ನು ತನ್ನದಾಗಿಸಿಕೊಂಡವರೂ ಅಲ್ಲ. ಶ್ರೀಸಾಮಾನ್ಯನ ಅಪಾರ ಬೆಂಬಲ ಸಿದ್ದರಾಮಯ್ಯ ಅವರ ಬೆನ್ನಿಗಿದೆ ಎನ್ನುವುದನ್ನು ಅರಿತುಕೊಂಡ ಬಳಿಕವೇ, ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದೆ. ಕರ್ನಾಟಕಕ್ಕೆ ಆಗಮಿಸಿ ಇಲ್ಲಿನ ಜನರ ಆತಿಥ್ಯವನ್ನು ಪಡೆದು ದಿಲ್ಲಿಗೆ ತೆರಳಿ, ರಾಜ್ಯದ ಮುಖ್ಯಮಂತ್ರಿಯನ್ನು 45 ದಿನಗಳ ಒಳಗೆ ಜೈಲಿಗೆ ಕಳುಹಿಸುವೆ ಎನ್ನುವ ಅಮಿತ್‌ಶಾ; ಆ ಮೂಲಕ ಈ ರಾಜ್ಯದ ಜನರನ್ನು ಅವಮಾನಿಸಿದ್ದಾರೆ.

ಸ್ವತಃ ಜೈಲಿಗೆ ತೆರಳಲು ಅರ್ಹವಾದ ಹಲವು ಪ್ರಕರಣಗಳು ಅಮಿತ್ ಶಾ ಅವರ ಮೇಲಿದೆ. ಈ ಬಗ್ಗೆ ಕರ್ನಾಟಕದ ಜನರಿಗೆ ಮಾತ್ರವಲ್ಲ, ಇಡೀ ದೇಶಕ್ಕೇ ಗೊತ್ತಿದೆ. ಹಾಗೆಯೇ, ತನ್ನ ವಿರೋಧಿಗಳು ಯಾರೇ ಆಗಿದ್ದರೂ ಅವರನ್ನು ಜೈಲಿಗೆ ತಳ್ಳಲು ಈ ದೇಶದ ಕಾನೂನು ವ್ಯವಸ್ಥೆ ಅವರ ಊಳಿಗದಲ್ಲಿಲ್ಲ. ಮೊತ್ತ ಮೊದಲು, ರಾಜ್ಯದ ಬಿಜೆಪಿಯೊಳಗೇ ಹಲವು ನಾಯಕರು ಜೈಲಿಗೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಅವರನ್ನು ಕಾಪಾಡುವ ಬಗ್ಗೆ ಅಮಿತ್ ಶಾ ಅವರು ಯೋಚಿಸಬೇಕಾಗಿದೆ. ಇದೇ ಸಂದರ್ಭದಲ್ಲಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಹರ್ಯಾಣದ ಮುಖ್ಯ ಮಂತ್ರಿ ಖಟ್ಟರ್ ಕುರಿತಂತೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಒಳಿತು.

ಸ್ವತಃ ಮುಖ್ಯಮಂತ್ರಿ ಕ್ಷೇತ್ರವಾಗಿರುವ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನೂರಕ್ಕೂ ಅಧಿಕ ಮಕ್ಕಳು ಆಸ್ಪತ್ರೆಯೊಂದರಲ್ಲಿ ಸತ್ತಿದ್ದಾರೆ ಮತ್ತು ಈ ಸಾವಿನಲ್ಲಿ ಸರಕಾರದ ವೈಫಲ್ಯ ಸ್ಪಷ್ಟವಾಗಿ ಗೋಚರವಾಗಿದೆ. ಬಿಜೆಪಿಯ ನಾಯಕರಾಗಿ ಮತ್ತು ಆಧುನಿಕ ಚಾಣಕ್ಯರಾಗಿ ಈ ಮುಖ್ಯಮಂತ್ರಿಗೊಂದು ಪರಿಹಾರವನ್ನು ಅಮಿತ್ ಶಾ ನೀಡಲಿ. ಹಾಗೆಯೇ ಹರ್ಯಾಣದ ಬೆಳವಣಿಗೆಗೆ ಸಂಬಂಧಿಸಿದಂತೆ ಹೈಕೋರ್ಟ್ ಈಗಾಗಲೇ ಪ್ರಧಾನಿ ಮೋದಿ ಮತ್ತು ಹರ್ಯಾಣ ಮುಖ್ಯಮಂತ್ರಿಗೆ ಛೀಮಾರಿ ಹಾಕಿದೆ. ಆ ಬಗ್ಗೆ ಅಮಿತ್ ಶಾ ತಲೆಕೆಡಿಸಿಕೊಳ್ಳುವುದರಿಂದ ಕುಸಿಯುತ್ತಿರುವ ಪಕ್ಷದ ಘನತೆಯನ್ನು ಉಳಿಸಬಹುದು. ಅನಗತ್ಯವಾಗಿ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಮಾಧ್ಯಮಗಳಲ್ಲಿ ಕೂಗಾಡುವ ಮೂಲಕ ಅವರ ಹತಾಶೆ ಬಯಲಾಗಬಹುದೇ ಹೊರತು, ಬಿಜೆಪಿಗೆ ಎಳ್ಳಷ್ಟೂ ಅದರಿಂದ ಪ್ರಯೋಜನವಾಗಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News