ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನು ನಿರ್ಲಕ್ಷಿಸಿ ಆಪರೇಷನ್ ಕೊಠಡಿಯೊಳಗೆ ಜಗಳ ಮಾಡಿದ ವೈದ್ಯರು: ಮಗು ಮೃತ್ಯು

Update: 2017-08-30 06:06 GMT

ಹೊಸದಿಲ್ಲಿ,ಆ.30 : ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯೊಬ್ಬರನ್ನು ಆಪರೇಷನ್ ಕೊಠಡಿಯಲ್ಲಿನ ಮಂಚದ ಮೇಲೆ ಮಲಗಿಸಿರುವಂತೆಯೇ ಆಕೆಯ ಕಡೆಗೆ ಗಮನ ನೀಡದೆ ಇಬ್ಬರು ವೈದ್ಯರು ಜಗಳದಲ್ಲೇ ಸಮಯ ಕಳೆದ ಪರಿಣಾಮ ಮಹಿಳೆಗೆ ಪ್ರಜ್ಞೆ ತಪ್ಪಿತಲ್ಲದೆ,  ಮಗು ಮೃತಪಟ್ಟ ಘಟನೆ ಜೋಧಪುರದ ಉಮೈದ್ ಆಸ್ಪತ್ರೆಯಿಂದ ಮಂಗಳವಾರ ವರದಿಯಾಗಿದೆ.

ಜಗಳ ಮಾಡಿಕೊಂಡ ವೈದ್ಯರನ್ನು ಅಶೋಕ್ ನೈನ್ವಲ್ ಹಾಗೂ ಎಂ ಎಲ್ ತಕ್ ಎಂದು ಗುರುತಿಸಲಾಗಿದೆ. ಮಹಿಳೆಯ ಗರ್ಭದಲ್ಲಿದ್ದ ಮಗುವಿನ ಹೃದಯದ ಬಡಿತ ಕ್ಷೀಣಿಸಿದ್ದರಿಂದ ಮಹಿಳೆಗೆ ತುರ್ತು ಸಿಸೇರಿಯನ್ ಶಸ್ತ್ರಕ್ರಿಯೆಗೆ ತಯಾರಿ ನಡೆಸಲಾಗಿತ್ತು.

ಮಹಿಳೆ ಶಸ್ತ್ರಕ್ರಿಯೆಗೆ ಮುನ್ನ ಏನಾದರೂ ತಿಂದಿದ್ದಾರೆಯೇ ಎಂದು ಪ್ರಸೂತಿ ತಜ್ಞರಾದ ನೈನ್ವಲ್ ಪ್ರಶ್ನಿಸಿದ್ದೇ ಅನೆಸ್ತೀಶಿಯಾ ವೈದ್ಯರಾದ ತಕ್ ಹಾಗೂ ಅವರ ನಡುವೆ ವ್ಯಾಗ್ಯುದ್ಧಕ್ಕೆ ಕಾರಣವಾಗಿತ್ತು. ಕಿರಿಯ ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸಲಿ ಎಂದು ಡಾ. ತಕ್ ಹೇಳಿದರೂ ನೈನ್ವಲ್ ಅದಕ್ಕೆ ಒಪ್ಪಲಿಲ್ಲ.

ಈ ಜಗಳವನ್ನು ಯಾರೋ ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ವೀಡಿಯೋದಲ್ಲಿ ನರ್ಸ್ ಮತ್ತು ಇನ್ನೊಬ್ಬ ಸಿಬ್ಬಂದಿ ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದ ಅವರನ್ನು ಸಮಾಧಾನಿಸಲು ಯತ್ನಿಸುತ್ತಿದ್ದುದೂ ದಾಖಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News