ಲೋಕಪಾಲರ ನೇಮಕ ಯಾವಾಗ?

Update: 2017-08-30 18:59 GMT

ದೇಶಕ್ಕೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಗತಿಸಿವೆ. ಆದರೆ, ಅಧಿಕಾರಕ್ಕೆ ಬಂದ ನಂತರ ಅವರ ಆದ್ಯತೆಗಳು ಬದಲಾಗಿವೆ. ಚುನಾವಣೆಯ ಸಂದರ್ಭದಲ್ಲಿ ಜನತೆಗೆ ನೀಡಿದ ಒಂದೇ ಒಂದು ಭರವಸೆಯನ್ನು ಈಡೇರಿಸಲು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಸಾಧ್ಯವಾಗಿಲ್ಲ. ನೀಡಿದ ಭರವಸೆಗಳನ್ನು ಬದಿಗೊತ್ತಿ ನೋಟು ಅಮಾನ್ಯ, ಜಿಎಸ್‌ಟಿ ಇಂತಹ ಕಸರತ್ತುಗಳ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ.

ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ತರುವುದಾಗಿ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಎಲ್ಲ ಪ್ರಜೆಗಳ ಬ್ಯಾಂಕ್ ಖಾತೆಗಳಲ್ಲಿ ತಲಾ 15 ಲಕ್ಷ ರೂ. ಜಮಾ ಮಾಡುವುದಾಗಿ ಅವರು ನೀಡಿದ ಭರವಸೆ ನಗೆಪಾಟಲಿಗೀಡಾಗಿದೆ. ಯುಪಿಎ ಸರಕಾರ ಜಾರಿಗೆ ತಂದ ಆಧಾರ್ ಯೋಜನೆಯನ್ನು ಕಟುವಾಗಿ ಟೀಕಿಸುತ್ತಿದ್ದ ಮೋದಿ ಅವರೇ ಈಗ ಎಲ್ಲದಕ್ಕೂ ಆಧಾರ್‌ಅನ್ನು ಕಡ್ಡಾಯ ಮಾಡುತ್ತಿದ್ದಾರೆ. ನೋಟು ಅಮಾನ್ಯ ಮಾಡಿ ಜನತೆಯನ್ನು ಸಂಕಷ್ಟದ ಕಡಲಿಗೆ ದೂಡಿದ್ದು ಸಾಲದೆಂಬಂತೆ ಜಿಎಸ್‌ಟಿಯನ್ನು ತಂದು ಉರಿಯುವ ಗಾಯಕ್ಕೆ ಉಪ್ಪಿನ ಹುಡಿ ಎರಚಿದ್ದಾರೆ. ಆದರೂ ಉರಿಯುವ ಗಾಯದ ಪ್ರಜ್ಞೆ ಜನರಿಗೆ ಬಾರದಂತೆ ಅವರಿಗೆ ಧರ್ಮದ ಮತ್ತೇರಿಸುವ ಹುನ್ನಾರ ಅವ್ಯಾಹತವಾಗಿ ನಡೆದಿದೆ.

ಭ್ರಷ್ಟಾಚಾರ ಮುಕ್ತ ಘೋಷಣೆ ಈಗ ಬದಲಾಗಿ ಪ್ರತಿಪಕ್ಷ ಮುಕ್ತ ಭಾರತ ಎಂದು ಎಲ್ಲ ಕಡೆ ಪ್ರತಿಧ್ವನಿಸುತ್ತಿದೆ. ಪ್ರತಿರೋಧವೇ ಇಲ್ಲದ, ಹೆಸರಿಗೆ ಮಾತ್ರ ಇರುವ ಲೊಳಲೊಟ್ಟೆ ಪ್ರಜಾಪ್ರಭುತ್ವ ಮೋದಿ ಮತ್ತು ಶಾ ಜೋಡಿಗೆ ಬೇಕಾಗಿದೆ. ಹಿಂದಿನ ಸರಕಾರವಿದ್ದಾಗ ಪದೇಪದೇ ಲೋಕಪಾಲ ವ್ಯವಸ್ಥೆ ಜಾರಿಗಾಗಿ ಬಿಜೆಪಿ ಆಗ್ರಹಿಸುತ್ತಿತ್ತು. ಇದಕ್ಕಾಗಿ ಅಣ್ಣಾ ಹಝಾರೆ ನಡೆಸಿದ್ದ ಹೋರಾಟವನ್ನೂ ಬೆಂಬಲಿಸಿತ್ತು. ಆದರೆ, ಈ ಬಗ್ಗೆ ಈಗ ಅದು ಮಾತನಾಡುತ್ತಿಲ್ಲ. ಮೂರು ವರ್ಷ ತೆಪ್ಪಗಿದ್ದ ಅಣ್ಣಾ ಹಝಾರೆ ಮತ್ತೆ ಲೋಕಪಾಲ ವ್ಯವಸ್ಥೆ ಜಾರಿಗಾಗಿ ಹೋರಾಟಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ಬೇಡಿಕೆಗಾಗಿ ರಾಜಧಾನಿ ದಿಲ್ಲಿಯಲ್ಲಿ ಪ್ರಹಸನ ನಡೆಸಿದ್ದ ಬಾಬಾ ರಾಮದೇವ್ ಈಗ ತಮ್ಮದೇ ಕಾರ್ಪೊರೇಟ್ ಸಾಮ್ರಾಜ್ಯ ನಿರ್ಮಿಸಲು ಹೊರಟಿದ್ದಾರೆ.

ಕೇಂದ್ರದಲ್ಲಿ ಯುಪಿಎ ಆಡಳಿತದ ಕೊನೆಯ ಘಟ್ಟದಲ್ಲಿ ಅಂಗೀಕಾರಗೊಂಡ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ ಜಾರಿಗೆ ಬಂದದ್ದು 2014ರ ಜನವರಿಯಲ್ಲಿ. ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಲ್ಲಿ ಈ ಕಾಯ್ದೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ತುಂಬಾ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಕಾಯ್ದೆಯೆನೋ ಜಾರಿಗೆ ಬಂತು. ಆದರೆ, ಲೋಕಪಾಲ ಹುದ್ದೆಗೆ ಇದುವರೆಗೆ ಯಾರನ್ನೂ ನೇಮಕ ಮಾಡಿಲ್ಲ. ಲೋಕಪಾಲರನ್ನು ನೇಮಕ ಮಾಡದಿದ್ದರೆ ಇಂತಹ ಒಂದು ಕಾಯ್ದೆ ಇದ್ದರೂ ಏನು ಪ್ರಯೋಜನ. ಪ್ರಧಾನಮಂತ್ರಿಗಳು ಆಗಾಗ ತಮ್ಮ ಭಾಷಣದಲ್ಲಿ ‘‘ಭ್ರಷ್ಟಾಚಾರ ಈ ದೇಶದ ದೊಡ್ಡ ವೈರಿ. ಅದನ್ನು ಸಹಿಸಿಕೊಳ್ಳುವುದಿಲ್ಲ’’ ಎಂದು ಹೇಳುತ್ತಿರುತ್ತಾರೆ.

ಆದರೆ, ಲೋಕಪಾಲ ಹುದ್ದೆಯನ್ನು ಭರ್ತಿ ಮಾಡಲು ಅವರು ಯಾಕೆ ಮನಸ್ಸು ಮಾಡುತ್ತಿಲ್ಲ? ಇದಕ್ಕೇನು ಕಾರಣ ಎಂದು ಪ್ರಶ್ನಿಸಿದರೆ, ಕಾಯ್ದೆ ಪ್ರಕಾರ ಮಾನ್ಯತೆ ಪಡೆದ ವಿರೋಧ ಪಕ್ಷದ ನಾಯಕರು ಲೋಕಸಭೆಯಲ್ಲಿ ಇಲ್ಲ. ಅವರಿಲ್ಲದೆ ನೇಮಕ ಮಾಡಲು ಸಾಧ್ಯವಿಲ್ಲ ಎಂದು ನೆಪ ಹೇಳುತ್ತಾರೆ. ವಿರೋಧ ಪಕ್ಷದ ನಾಯಕ ಎಂಬ ವ್ಯಾಖ್ಯಾನಕ್ಕೆ ತಿದ್ದುಪಡಿ ಆಗಬೇಕು ಎಂದು ಹೇಳುತ್ತಾರೆ. ಜನತೆ ಈ ಸರಕಾರದ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಆದರೂ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೋದಲ್ಲಿ ಬಂದಲ್ಲಿ, ಕಳೆದ ಮೂರು ವರ್ಷಗಳ ಕಾಲಾವಧಿಯಲ್ಲಿ ತಮ್ಮ ಸರಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.

ಈ ಸರಕಾರ ಉದ್ದೇಶಪೂರ್ವಕವಾಗಿ ಲೋಕಪಾಲರ ನೇಮಕದಲ್ಲಿ ವಿಳಂಬ ಮಾಡುತ್ತಿದೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದೆ. ಸುಪ್ರೀಂ ಕೋರ್ಟ್ ಕೂಡಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತುಂಬಾ ದಿನಗಳಾದವು. ಲೋಕಪಾಲರ ನೇಮಕ ಕಾಯ್ದೆಗೆ ತಿದ್ದುಪಡಿಯಾಗಬೇಕೆಂದು ಕಾಯಬೇಕಾಗಿಲ್ಲ. ವಿರೋಧ ಪಕ್ಷದ ನಾಯಕನ ಹಾಜರಿ ಇಲ್ಲದೆಯೂ ಈಗಿರುವ ನಿಯಮಗಳಲ್ಲಿಯೇ ಕಾನೂನು ತಜ್ಞರೊಂದಿಗೆ ಸಂಪರ್ಕಿಸಿ ಸೂಕ್ತ ವ್ಯಕ್ತಿಯನ್ನು ಲೋಕಪಾಲರನ್ನಾಗಿ ನೇಮಕಮಾಡಿಕೊಳ್ಳಬಹುದಾಗಿದೆ. ಈಗಿನ ನಿಯಮಗಳ ವ್ಯಾಪ್ತಿಯಲ್ಲೇ ಲೋಕಪಾಲರ ನೇಮಕ ಪ್ರಕ್ರಿಯೆ ಮುಂದುವರಿಸಲು ಯಾವ ಅಡ್ಡಿಯೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದ ನಂತರವೂ ಲೋಕಪಾಲರ ನೇಮಕವಾಗುತ್ತಿಲ್ಲ ಅಂದರೆ ಸರಕಾರಕ್ಕೆ ಮನಸ್ಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಕಾಯ್ದೆಗೆ ತಿದ್ದುಪಡಿ ಮಾಡದೆ ನೇಮಕಾತಿ ಸಾಧ್ಯವಿಲ್ಲ ಎಂದು ಸರಕಾರದ ಪರವಾಗಿ ವಾದ ಮಂಡಿಸಿದ್ದ ಅಟಾರ್ನಿ ಜನರಲ್ ಪಟ್ಟು ಹಿಡಿದಿದ್ದಾರೆ. ಆದರೆ, ಕಾಯ್ದೆಗೆ ತಿದ್ದುಪಡಿ ತರದೆ ಸಿಬಿಐ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಮುಖ್ಯ ಜಾಗೃತ ಆಯುಕ್ತರನ್ನು ನೇಮಕ ಮಾಡಲಾಯಿತು. ಆಗ ಕೂಡಾ ಮಾನ್ಯತೆ ಪಡೆದ ವಿರೋಧ ಪಕ್ಷದ ನಾಯಕ ಇರಲಿಲ್ಲ. ಲೋಕಸಭೆಯಲ್ಲಿ ದೊಡ್ಡ ಪ್ರತಿಪಕ್ಷ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಭೆಗೆ ಆಹ್ವಾನಿಸಿ ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಇದೇ ಮಾನದಂಡವನ್ನು ಲೋಕಪಾಲ ಹುದ್ದೆ ನೇಮಕಕ್ಕೆ ಅನ್ವಯಿಸಲು ಯಾಕೆ ಸಾಧ್ಯವಾಗುತ್ತಿಲ್ಲ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅಲ್ಲಿನ ಲೋಕಾಯುಕ್ತ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದರು. ಲೋಕಾಯುಕ್ತ ವ್ಯವಸ್ಥೆ ಅಲ್ಲಿ ಹೆಸರಿಗೆ ಮಾತ್ರ ಇತ್ತು. ತಮ್ಮನ್ನು ಪ್ರಶ್ನಿಸುವ ಯಾವುದೇ ವ್ಯವಸ್ಥೆ ಇರಬಾರದೆಂದು ಅವರು ಬಯಸುತ್ತಾರೆ.

ಲೋಕಪಾಲರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ, ಲೋಕಸಭೆಯ ಸ್ಪೀಕರ್ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ನ್ಯಾಯಪಂಡಿತರೊಬ್ಬರು ಇರಬೇಕು ಎಂಬ ನಿಯಮ ಕಾಯ್ದೆಯಲ್ಲಿದೆ. ಆದರೆ, ಲೋಕಸಭೆಯಲ್ಲಿ ಈಗ ಅಧಿಕೃತವಾಗಿ ಮಾನ್ಯತೆ ಪಡೆದ ವಿರೋಧ ಪಕ್ಷ ಇಲ್ಲ. ಕನಿಷ್ಠ 55 ಸದಸ್ಯರಿದ್ದರೆ ಮಾತ್ರ ವಿರೋಧ ಪಕ್ಷದ ಮಾನ್ಯತೆ ಸಿಗುತ್ತದೆ. ಈಗ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ 45 ಸ್ಥಾನಗಳು ಮಾತ್ರ ಇವೆ. ಹೀಗಾಗಿ ಅದು ಸದನದಲ್ಲಿ ಅತೀದೊಡ್ಡ ಪ್ರತಿಪಕ್ಷ ಎಂದು ಮಾತ್ರ ಕರೆಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿ ಉದ್ಭವಿಸಿದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಸದನದ ಅತೀದೊಡ್ಡ ವಿರೋಧ ಪಕ್ಷದ ಮುಖ್ಯಸ್ಥರನ್ನು ಲೋಕಪಾಲ ಆಯ್ಕೆ ಸಮಿತಿ ಸದಸ್ಯರನ್ನಾಗಿ ಮಾಡುವ ತಿದ್ದುಪಡಿ ಮಸೂದೆಯೊಂದನ್ನು ಸಂಸತ್‌ನ ಮುಂದೆ ಮಂಡಿಸಲಾಗಿದೆ.

ಅದಕ್ಕೆ ಸಂಸತ್ತು ಇನ್ನೂ ಒಪ್ಪಿಗೆ ನೀಡಿಲ್ಲ. ಆದರೆ, ಲೋಕಪಾಲರ ನೇಮಕಕ್ಕೆ ಈ ನೆಪ ಅಡ್ಡಿಯಾಗಬಾರದು. ಇನ್ನಾದರೂ ಸರಕಾರ ಎಚ್ಚೆತ್ತು ಲೋಕಪಾಲರನ್ನು ಶೀಘ್ರ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನತೆ ಈ ಸರಕಾರದ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗುತ್ತದೆ. ಜನರಲ್ಲಿರುವ ಈ ಅಸಮಾಧಾನವನ್ನೇ ಪ್ರತಿಧ್ವನಿಸಿರುವ ಅಣ್ಣಾ ಹಝಾರೆ ಮತ್ತೆ ಚಳವಳಿಗೆ ಇಳಿಯುವ ಬೆದರಿಕೆಯನ್ನು ಹಾಕಿದ್ದಾರೆ. ಅಣ್ಣಾ ಹಝಾರೆ ಒಬ್ಬರೇ ಹೋರಾಡಿದರೆ ಸರಕಾರ ಮಣಿಯುವುದಿಲ್ಲ. ಎಲ್ಲ ಜನಪರ ಸಂಘಟನೆಗಳು, ಪ್ರಜಾಪ್ರಭುತ್ವವಾದಿಗಳು, ಲೋಕಪಾಲರ ನೇಮಕಕ್ಕಾಗಿ ಒತ್ತಾಯಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News