ಕೇಂದ್ರ ಮಂತ್ರಿಮಂಡಲದ ಪುನಾರಚನೆ: ಅನಂತ್ ಕುಮಾರ್ ಹೆಗಡೆ ನೂತನ ಕೇಂದ್ರ ಸಚಿವ

Update: 2017-09-03 07:13 GMT

ಹೊಸದಿಲ್ಲಿ, ಸೆ.3: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಂಪುಟ ಪುನಾರಚನೆ ರವಿವಾರ ಬೆಳಗ್ಗೆ ನಡೆದಿದ್ದು ನಾಲ್ವರು ಸಚಿವರು ಸಂಪುಟ ದರ್ಜೆ ಸಚಿವರಾಗಿ ಭಡ್ತಿ ಪಡೆದರೆ, ಉತ್ತರಕನ್ನಡದ ಸಂಸದ ಅನಂತ್ ಕುಮಾರ್  ಹೆಗಡೆ ಸಹಿತ 9 ಮಂದಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಬೆಳಗ್ಗೆ 10:30ಕ್ಕೆ ರಾಷ್ಟ್ರಪತಿ ಭವನದ ಅಶೋಕ ಹಾಲ್‌ನಲ್ಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಿದರು. ಧರ್ಮೇಂದ್ರ ಪ್ರಧಾನ್ ಸಂಪುಟ ದರ್ಜೆ ಸಚಿವರಾಗಿ ಮೊದಲಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಆ ಬಳಿಕ ಪಿಯೂಷ್ ಗೊಯೆಲ್‌, ನಿರ್ಮಲಾ ಸೀತಾರಾಮನ್ ಹಾಗೂ ಮುಖ್ತಾರ್ ಅಬ್ಬಾಸ್ ನಖ್ವಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಉತ್ತರಪ್ರದೇಶದ ಸಂಸದ ಶಿವಪ್ರತಾಪ್ ಶುಕ್ಲಾ, ಬಿಹಾರದ ಅಶ್ವಿನಿ ಕುಮಾರ್ ಚೌಬೆ, ಮಧ್ಯಪ್ರದೇಶದ ಪ್ರಭಾವಿ ದಲಿತ ನಾಯಕ ಡಾ.ವೀರೇಂದ್ರ ಕುಮಾರ್, ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ, ಬಿಹಾರ ಸಂಸದ, ನಿವೃತ್ತ ಐಎಎಸ್ ಅಧಿಕಾರಿ ರಾಜ್‌ಕುಮಾರ್ ಸಿಂಗ್, ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದ ನಿವೃತ್ತ ಐಎಫ್‌ಎಸ್ ಅಧಿಕಾರಿ ಹರ್‌ದೀಪ್ ಸಿಂಗ್ ಪುರಿ, ರಾಜಸ್ಥಾನದ ಜೋಧ್‌ಪುರ ಕ್ಷೇತ್ರದ ಸಂಸದ ಗಜೇಂದ್ರ ಸಿಂಗ್ ಶೆಖಾವತ್,ಉತ್ತರಪ್ರದೇಶದ ಬಾಗ್‌ಪತ್ ಸಂಸದ ಡಾ. ಸತ್ಯಪಾಲ್ ಸಿಂಗ್ ಹಾಗೂ ಸಂಸತ್‌ನ ಯಾವ ಸದನದ ಸದಸ್ಯನೂ ಅಲ್ಲದ ನಿವೃತ್ತ ಐಎಎಸ್ ಅಧಿಕಾರಿ ಅಲ್ಫೋನ್ಸ್ ಕಣ್ಣತಾನನ್ ರಾಜ್ಯ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಸರಕಾರದ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರುವ ಉದ್ದೇಶದಿಂದ ನಿವೃತ್ತ ಐಪಿಎಸ್, ಐಎಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳಿಗೆ ರಾಜ್ಯ ಖಾತೆ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.

ಇದೇ ವೇಳೆ, ಬಿಜೆಪಿಯ ಮಿತ್ರಪಕ್ಷ ಶಿವಸೇನಾ ಸಂಪುಟ ವಿಸ್ತರಣೆ ವೇಳೆ ತನ್ನ ಸಂಸದರಿಗೆ ಸ್ಥಾನ ನೀಡದಿರುವುದನ್ನು ಪ್ರತಿಭಟಿಸಿ ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಿದ್ದು, ಕೇಂದ್ರ ಸಚಿವೆ ಉಮಾಭಾರತಿ ಕೂಡ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಪ್ರಮಾಣವಚನಕ್ಕೂ ಮೊದಲು 9 ನಿಯೋಜಿತ ಸಚಿವರ ಜೊತೆ ಪ್ರಧಾನಿ ತಮ್ಮ ಅಧಿಕೃತ ನಿವಾಸದಲ್ಲಿ ಬೆಳಗ್ಗಿನ ಉಪಹಾರ ಮಾಡಿದರು.

ಕರ್ನಾಟಕದ ಸಂಸದ ಅನಂತಕುಮಾರ ಹೆಗಡೆಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು, ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿ ಹೆಗಡೆಗೆ ಸಂಪುಟದಲ್ಲಿ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್ ಬಲವಾಗಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News