ದಿಟ್ಟ ಪ್ರತಿರೋಧ, ಹೋರಾಟ ಅನಿವಾರ್ಯ

Update: 2017-09-03 18:43 GMT

ದೇಶದೆಲ್ಲೆಡೆ ಯಶಸ್ಸಿನ ಸವಿಯುಂಡು ಅತಿಯಾದ ಆತ್ಮವಿಶ್ವಾಸದೊಂದಿಗೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಮೊದಲ ಬಾರಿಗೆ ದಾಪುಗಾಲಿಟ್ಟ ಅಮಿತ್ ಶಾ ಇಲ್ಲಿನ ಚಿತ್ರಣ ಕಂಡು ಬೆಚ್ಚಿ ಬಿದ್ದಿದ್ದಾರೆ. ಜಾತಿ, ಧರ್ಮ, ಕೋಮು ಸಂಘರ್ಷ ಮತ್ತು ಹಣದ ಅಮಲೇರಿಸಿ ಇಲ್ಲೂ ಸಹ ಸುಲಭವಾಗಿ ಅಧಿಕಾರಕ್ಕೆ ಬಂದು ಬಿಡಬಹುದು ಎಂಬ ಆಲೋಚನೆ ಹೊಂದಿದ್ದ ಅಮಿತ್ ಶಾ ಅವರ ಮೊಗದಲ್ಲಿ ಸಣ್ಣದಾಗಿ ಬೆವರು ಕಾಣಿಸಿಕೊಳ್ಳತೊಡಗಿದೆ. ಭ್ರಷ್ಟಾಚಾರ ಆರೋಪ ಹೊತ್ತ ನಾಯಕರನ್ನು ಮುಂದಿರಿಸಿಕೊಂಡು ಜನರ ಎದುರು ಹೇಗೆ ಹೋಗುವುದು ಎಂಬ ಚಿಂತೆ ಒಂದೆಡೆಯಿದ್ದರೆ, ಮತ್ತೊಂದೆಡೆ ಯಾವುದೆಲ್ಲಾ ಸಂಚು, ಕುತಂತ್ರ ಮಾಡಿದರೂ ಅದನ್ನು ದೀರ್ಘಕಾಲ ಎಳೆದೊಯ್ಯುವುದು ಮತ್ತು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರುವುದು ಕಷ್ಟಕರವೆಂದು ಅನ್ನಿಸಿದೆ.


ಭ್ರಷ್ಟಾಚಾರ ಆರೋಪ ಹೊತ್ತ ಮತ್ತು ಪರಸ್ಪರ ಅಸಹನೀಯ ವೈಮನಸ್ಸು ಹೊಂದಿರುವ ತಮ್ಮ ಪಕ್ಷದ ನಾಯಕರ ಮೇಲೆ ನಂಬಿಕೆ, ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದ ಭಾಗ್ಯಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಿ, ಜನರ ದಿಕ್ಕನ್ನು ಬದಲಿಸಲು ಬಿಜೆಪಿ ತನ್ನದೇ ಆದ ಕಾರ್ಯತಂತ್ರ ರೂಪಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೆ ತಮಗೆ ಉಳಿಗಾಲವಿಲ್ಲವೆಂದು ಅರಿತಿರುವ ಸಂಘ ಪರಿವಾರದ ನಾಯಕರು, ಕಾರ್ಯಕರ್ತರು ರಾಜ್ಯದ ಕರಾವಳಿ ಸೇರಿದಂತೆ ವಿವಿಧೆಡೆ ಯುವಜನರಲ್ಲಿ ಜಾತಿ-ಧರ್ಮದ ಮದವೇರಿಸಿ, ಅವರನ್ನು ಭ್ರಮಾಧೀನಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವೆಲ್ಲದರ ಮಧ್ಯೆ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಿ, ಬಿಜೆಪಿ ಚಿಗುರೊಡೆಯುವಂತೆ ಮಾಡುವ ಷಡ್ಯಂತ್ರ ಕೇಂದ್ರದಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ದಿನದಿಂದ ನಡೆಯುತ್ತಲೇ ಇದೆ.

ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲೇಕೆಂಬ ಗುರಿಯೊಂದಿಗೆ ಆರೆಸ್ಸೆಸ್ ಮಾರ್ಗದರ್ಶನ ಅನುಸಾರ ಬಿಜೆಪಿ ನೇತೃತ್ವದಲ್ಲಿ ಸಂಘ ಪರಿವಾರ ಒಂದೆಡೆ ಸಿದ್ಧತೆ ನಡೆಸಿದ್ದರೆ, ಮತ್ತೊಂದೆಡೆ ಕೋಮುವಾದಿ ಶಕ್ತಿಗಳೊಂದಿಗೆ ದಿಟ್ಟ ಹೋರಾಟ ನಿರಂತರವೆಂದು ಹೇಳಿಕೊಳ್ಳುವ ಎಡ, ಜಾತ್ಯತೀತ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ಚುನಾವಣೆ ಇನ್ನೂ ದೂರ ಇರುವಂತೆ ವರ್ತಿಸುತ್ತಿವೆ. ಬಿಜೆಪಿಯವರು ಈಗಾಗಲೇ ಮನೆಮನೆಗೆ ಭೇಟಿ ನೀಡಿ ಜನರನ್ನು ಒಲಿಸಿಕೊಳ್ಳುವ ಜನಸಂಪರ್ಕ ಅಭಿಯಾನ ಮತ್ತು ವಿಸ್ತಾರಕ ವಿರಾಸತ್ ಪೂರ್ಣಗೊಳಿಸಿದ್ದಾರೆ. ಆದರೆ ಜಾತ್ಯತೀತ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ಜನರನ್ನು ಭೇಟಿ ಮಾಡುವುದಿರಲಿ, ಮುಂದಿನ ದಿನಗಳಲ್ಲಿ ತಲೆದೋರಲಿರುವ ಸವಾಲು ಮತ್ತು ಎದುರಿಸಬೇಕಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ಚಿಂತೆ ಮಾಡಿದಂತೆ ತೋರುವುದಿಲ್ಲ. ಕಾರಣ, ಎರಡೂ ಅಭಿಯಾನವನ್ನು ನಿರಾತಂಕವಾಗಿ ಪೂರ್ಣಗೊಳಿಸಿದ ಬಿಜೆಪಿಯವರಿಗೆ ಎಲ್ಲಿಯೂ ಯಾವುದೇ ರೀತಿಯ ಪ್ರತಿರೋಧ ವ್ಯಕ್ತವಾಗಲಿಲ್ಲ. ಭ್ರಮೆಯೊಳಗೆ ಸಿಲುಕುತ್ತಿರುವ ಜನರನ್ನು ಎಚ್ಚರಿಸುವ ಪ್ರಯತ್ನವೂ ನಡೆಯಲಿಲ್ಲ.

ಬಿಜೆಪಿ ಅಥವಾ ಸಂಘ ಪರಿವಾರದೊಂದಿಗೆ ನೇರವಾದ ಸಂಘರ್ಷ ಅಲ್ಲದಿದ್ದರೂ ಪರ್ಯಾಯ ಮಾರ್ಗವಾಗಿ ಅದಕ್ಕೆ ಸೂಕ್ತ ರೀತಿಯಲ್ಲಿ ಎಚ್ಚರಿಕೆಯ ಸಂದೇಶ ರವಾನೆ ಮಾಡುವ ಪ್ರಕ್ರಿಯೆ ರಾಜ್ಯದ ಯಾವ ಮೂಲೆಯಲ್ಲೂ ಕಾಣಸಿಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರಕಾರದ ವತಿಯಿಂದ ನೂತನ ಜನಪರ ಯೋಜನೆಗಳನ್ನು ಪರಿಚಯಿಸಿ ಮತ್ತು ಮುಲಾಜಿಲ್ಲದೆ ತಕ್ಕುದಾದ ಉತ್ತರ ನೀಡಿ, ಬಿಜೆಪಿ ನಾಯಕರ ಬಾಯಿ ಮುಚ್ಚಿಸುವುದು ಹೊರತುಪಡಿಸಿದರೆ ಬೇರೆ ಬೆಳವಣಿಗೆಗಳು ಕಾಣಸಿಕ್ಕಿದ್ದೇ ತುಂಬಾ ಕಡಿಮೆ.

ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಎಡ ಪಕ್ಷಗಳ ನಾಯಕರು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಆಗಾಗ ಪ್ರತಿಭಟನೆ ನಡೆಸುವುದು ಅಥವಾ ಪತ್ರಿಕಾ ಹೇಳಿಕೆ ನೀಡುವುದು ಹೊರತುಪಡಿಸಿದರೆ ತಮ್ಮ ಹಾದಿಯಲ್ಲಿ ಇತರರು ಅಡ್ಡಿ ಬಾರದಂತೆ ಮುನ್ನುಗ್ಗುವ ಪ್ರಯತ್ನ ಕಂಡು ಬರುತ್ತಿಲ್ಲ. ಎಡ ಪಕ್ಷಗಳ ನಾಯಕರು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಸದ್ಯಕ್ಕೆ ಅಗತ್ಯವಿರುವ ಕಾರ್ಯಸೂಚಿ ರೂಪಿಸುತ್ತಿಲ್ಲ. ಒಂದು ವೇಳೆ ರೂಪಿಸಿದರೂ ಅದಕ್ಕೆ ಸಂಘ ಪರಿವಾರ ಪ್ರತಿಕ್ರಿಯೆ ನೀಡುವ ಲಕ್ಷಣಗಳು ಕಾಣಿಸುತ್ತಿಲ್ಲ.

ದೇಶದೆಲ್ಲೆಡೆ ಯಶಸ್ಸಿನ ಸವಿಯುಂಡು ಅತಿಯಾದ ಆತ್ಮವಿಶ್ವಾಸದೊಂದಿಗೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಮೊದಲ ಬಾರಿಗೆ ದಾಪುಗಾಲಿಟ್ಟ ಅಮಿತ್ ಶಾ ಇಲ್ಲಿನ ಚಿತ್ರಣ ಕಂಡು ಬೆಚ್ಚಿ ಬಿದ್ದಿದ್ದಾರೆ. ಜಾತಿ, ಧರ್ಮ, ಕೋಮು ಸಂಘರ್ಷ ಮತ್ತು ಹಣದ ಅಮಲೇರಿಸಿ ಇಲ್ಲೂ ಸಹ ಸುಲಭವಾಗಿ ಅಧಿಕಾರಕ್ಕೆ ಬಂದುಬಿಡಬಹುದು ಎಂಬ ಆಲೋಚನೆ ಹೊಂದಿದ್ದ ಅಮಿತ್ ಶಾ ಅವರ ಮೊಗದಲ್ಲಿ ಸಣ್ಣದಾಗಿ ಬೆವರು ಕಾಣಿಸಿಕೊಳ್ಳತೊಡಗಿದೆ. ಭ್ರಷ್ಟಾಚಾರ ಆರೋಪ ಹೊತ್ತ ನಾಯಕರನ್ನು ಮುಂದಿರಿಸಿಕೊಂಡು ಜನರ ಎದುರು ಹೇಗೆ ಹೋಗುವುದು ಎಂಬ ಚಿಂತೆ ಒಂದೆಡೆಯಿದ್ದರೆ, ಮತ್ತೊಂದೆಡೆ ಯಾವುದೆಲ್ಲಾ ಸಂಚು, ಕುತಂತ್ರ ಮಾಡಿದರೂ ಅದನ್ನು ದೀರ್ಘಕಾಲ ಎಳೆದೊಯ್ಯುವುದು ಮತ್ತು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರುವುದು ಕಷ್ಟಕರವೆಂದು ಅನ್ನಿಸಿದೆ.

ಉದಾಹರಣೆಗೆ ರೈತರ ಸರಣಿ ಆತ್ಮಹತ್ಯೆ, ಅಧಿಕಾರಿಗಳ ಆತ್ಮಹತ್ಯೆ, ಕರಾವಳಿಯಲ್ಲಿ ಕೋಮು ಗಲಭೆ ಸೃಷ್ಟಿ, ಸಂಘ ಪರಿವಾರದ ಕಾರ್ಯಕರ್ತರ ಸಾವು, ಕಳಂಕಿತ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಿಕೆ ಸೇರಿದಂತೆ ಬಹುತೇಕ ಪ್ರಕರಣಗಳಲ್ಲಿ ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗಲಿಲ್ಲ. ಜನರ ಅನುಕಂಪ, ಬೆಂಬಲವೂ ದೊರೆತಿಲ್ಲ. ಪ್ರಧಾನಿ ಮೋದಿಯ ದುರಾಡಳಿತ, ಜನವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತ ಮತ್ತು ತನ್ನದೇ ಆದ ವಿನೂತನ ಮಾದರಿಯ ಕಾರ್ಯತಂತ್ರ ರೂಪಿಸುತ್ತ ಸಮರ್ಥವಾಗಿ ಚುನಾವಣೆ ಎದುರಿಸಲು ಎಡ ಮತ್ತು ಜಾತ್ಯತೀತ ಪಕ್ಷಗಳಿಗೆ, ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಗೆ ವಿಪುಲ ಅವಕಾಶಗಳಿವೆ. ಆದರೆ ಅದರ ಬದಲು ಪರಸ್ಪರ ಮುನಿಸಿಕೊಳ್ಳುವ ಮತ್ತು ಆರೋಪ-ಪ್ರತ್ಯಾರೋಪ ಮಾಡುವ ಕಾರ್ಯದಲ್ಲಿ ನಿರತರಾಗಿರುವುದು ನಿಜಕ್ಕೂ ಸೋಜಿಗ.

ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಕೀಳು ಮಟ್ಟದ ಭಾಷೆ ಬಳಸುತ್ತ, ವ್ಯಂಗ್ಯವಾಡುತ್ತ ಪರಿಪಕ್ವತೆ ಕಳೆದುಕೊಂಡಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಡೀ ದೇಶವೇ ತನ್ನ ಬಹುಸಂಸ್ಕೃತಿ, ಭ್ರಾತತ್ವ, ವೈವಿಧ್ಯ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರೆ, ಇಲ್ಲಿನ ಕೆಲ ನಾಯಕರು ಮತ್ತು ಸಂಘಟನೆಯವರು ಅದರ ಗೊಡವೆಯೇ ಇಲ್ಲದೆ ಪರಸ್ಪರ ಮನೆ ಕೆಡವಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಒಂದೇ ಮನೆಯಲ್ಲಿ ಕೂಡಿ ಬಾಳುವುದರ ಬದಲು ಇರುವ ಮನೆಗಳನ್ನೆಲ್ಲ ಕೆಡವಿಕೊಂಡು ಬಟಾಬಯಲಿನಲ್ಲಿ ಬೀದಿ ಜಗಳ ಮಾಡಲು ಹೆಚ್ಚಿನ ಉತ್ಸಾಹ ಇದ್ದಂತೆ ಕಂಡುಬರುತ್ತದೆ.

ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶವನ್ನು ಮನಸೋಇಚ್ಛೆ ಲೂಟಿ ಮಾಡಿರುವ ಮತ್ತು ಎಲ್ಲವನ್ನೂ ಬಂಡವಾಳಶಾಹಿಗಳಿಗೆ ಒಪ್ಪಿಸಿರುವ ಪ್ರಧಾನಿ ಮೋದಿ ಮುಂದೆ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಜಾತ್ಯತೀತ, ಪ್ರಜಾಪ್ರಭುತ್ವದ ತಳಹದಿಯನ್ನು ಹೊಸಕಿ, ಭಾರತವನ್ನು ಹಿಂದೂರಾಷ್ಟ್ರವನ್ನಾಗಿಸುವ ಗುರಿ ಹೊಂದಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇದಕ್ಕೆ ಪೂರಕವಾದ ಬೆಳವಣಿಗೆಗಳು ನಡೆಯುತ್ತಿವೆ.

ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವ ಕಾರಣ ಮತ್ತು ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಯುಳ್ಳ ಪಕ್ಷ, ಸಂಘಟನೆಗಳು ಇಲ್ಲಿರುವ ಹಿನ್ನೆಲೆಯಲ್ಲಿ ಮೋದಿಗೆ ಸುಲಭವಾಗಿ ಬೆಂಬಲ ಸಿಗದು. ಕರ್ನಾಟಕವು ದಿಟ್ಟ ಪ್ರತಿರೋಧ ವ್ಯಕ್ತಪಡಿಸಿದ್ದಲ್ಲಿ ಮತ್ತು ಬಿಜೆಪಿಗೆ ಕಮಲ ಅರಳಿಸಲು ಅವಕಾಶ ನೀಡದಿದ್ದಲ್ಲಿ, ಮೋದಿ ಕನಸು ಹಂತಹಂತವಾಗಿ ನುಚ್ಚುನೂರಾಗುವುದು ನಿಶ್ಚಿತ. ಮೋದಿ ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ ಮತ್ತು ತಂತ್ರ, ಬೆದರಿಕೆಗೆ ಶರಣಾಗುವವರು ನಾವಲ್ಲ ಎಂಬ ಸಂದೇಶ ರವಾನಿಸಿದಲ್ಲಿ, ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಬಲ್ಲದು ಮತ್ತು ಸ್ಫೂರ್ತಿಯೂ ಸಿಗಬಹುದು. ಮೋದಿ, ಅಮಿತ್ ಶಾ ಅತಿಯಾದ ಆತ್ಮವಿಶ್ವಾಸಕ್ಕೆ ಬಸವನಾಡು ತಣ್ಣೀರು ಎರಚಬಹುದು.

ಕೆಲ ತಿಂಗಳುಗಳ ಹಿಂದೆ ಎಡ ಪಕ್ಷಗಳು, ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳು ಜೊತೆಗೂಡಿ ರಾಜ್ಯದ ವಿವಿಧೆಡೆ ಹಲವು ಸಮಾವೇಶಗಳು ನಡೆಸಿದವು. ಅನ್ಯಾಯದ ವಿರುದ್ಧ ಸಿಡಿದೆದ್ದವು. ಯುವ ನಾಯಕರಾದ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೆವಾನಿಯವರ ನೇತೃತ್ವದಲ್ಲಿ ಹೋರಾಟ ಮುಂದುವರಿಸಲು ನಿರ್ಧರಿಸಿದವು. ಬುದ್ಧ, ಬಸವ, ಅಂಬೇಡ್ಕರ್, ಭಗತ್‌ಸಿಂಗ್, ಪೆರಿಯಾರ್, ನಾರಾಯಣ ಗುರು, ಜ್ಯೋತಿಬಾಫುಲೆ ಮುಂತಾದವರ ಚಿಂತನೆ, ವಿಚಾರಗಳನ್ನು ಆಧಾರವಾಗಿಸಿಕೊಂಡು ನವಸಮಾಜ ಕಟ್ಟಲು ಪಣತೊಟ್ಟರು. ಅಂದಿನ ಆ ದಿನಗಳಲ್ಲಿ ಕೈಗೊಂಡ ನಿರ್ಣಯಗಳಿಗಿಂತಲೂ ಇಂದಿನ ಈ ಸಂದರ್ಭದಲ್ಲಿ ಒಂದಾಗಿ ನಡೆಯುವುದು ತುಂಬಾ ಅವಶ್ಯ ಮತ್ತು ಅನಿವಾರ್ಯವಾಗಿದೆ.

ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ ಮಾಡಿಕೊಳ್ಳುವ ಅಥವಾ ಪರಸ್ಪರ ಕೆಸರು ಎರಚಾಡುವುದರಿಂದ ಮೂರನೆಯವರಿಗೆ ಲಾಭವಾಗುತ್ತದೆ ಎಂಬುದನ್ನು ಮರೆಯಬಾರದು. ಜಾತ್ಯತೀತ ಮತ್ತು ಪ್ರಗತಿಪರ ಪಕ್ಷ, ಸಂಘಟನೆಗಳಲ್ಲಿನ ಒಡಕುಗಳೇ ಎಷ್ಟೋ ಸಂದರ್ಭಗಳಲ್ಲಿ ಸಂಘ ಪರಿವಾರದಂತಹ ಕೋಮು ಶಕ್ತಿಗಳಿಗೆ ವರವಾಗುತ್ತದೆ. ಪ್ರಜಾಪ್ರಭುತ್ವದ ಸುಭದ್ರ ತಳಪಾಯದಡಿ ಬಹುಸಂಸ್ಕೃತಿಯ ದೇಶವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಅದಮ್ಯ ಇಚ್ಛಾಶಕ್ತಿ ಹೊಂದಿರುವ ಜನಪರ ಮತ್ತು ದೇಶದ ಹಿತ ಚಿಂತಿಸುವ ನಾಯಕರು ಯಾವುದೇ ಕಾರಣಕ್ಕೂ ದೇಶವನ್ನು ಕೋಮುವಾದಿಗಳ ಕೈಗಳಿಗೆ ಒಪ್ಪಿಸುವ ಕೃತ್ಯಕ್ಕೆ ಇಳಿಯಬಾರದು. ಪರಸ್ಪರರ ನಡುವೆ ಜಗಳವನ್ನು ಹಚ್ಚಿ, ಅದರ ಕಾವಿನಲ್ಲಿ ಮೈ ಬೆಚ್ಚಗೆ ಮಾಡಿಕೊಂಡು ಕುಹಕೆ ನಗೆ ಬೀರುತ್ತಿರುವವರ ಬಗ್ಗೆ ಎಚ್ಚರವಿರಬೇಕು. ಅವರ ಬಲೆಗೆ ಎಂದಿಗೂ ಬೀಳಬಾರದು.

ಇಡೀ ದೇಶವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಸಂಘ ಪರಿವಾರ ಸಂಚು ನಡೆಸುತ್ತಿರುವ ಇಂದಿನ ಸಂದರ್ಭದಲ್ಲಿ ಅದು ಎಂದೆಂದಿಗೂ ಸಾಧ್ಯವಾಗದು ಎಂಬ ದಿಟ್ಟ ಉತ್ತರ ಕರ್ನಾಟಕದಿಂದ ವ್ಯಕ್ತವಾಗಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಒಡೆದಾಳುವವರಿಗೆ ಇಲ್ಲಿ ಜಾತ್ಯತೀತ, ಸಹಬಾಳ್ವೆ ಮತ್ತು ಬಹುಸಂಸ್ಕೃತಿ ಗಟ್ಟಿಯಾಗಿದೆ ಎಂಬ ಸಂದೇಶ ನೀಡಬೇಕು. ಅದನ್ನು ಕರ್ನಾಟಕದ ಮೂಲಕ ಇಡೀ ದೇಶಕ್ಕೆ ಪಸರಿಸುತ್ತೇವೆ. ಜನಪರ ಮತ್ತು ಹಿತಕರ ವಾತಾವರಣ ದೇಶದಾದ್ಯಂತ ನಿರ್ಮಿಸುತ್ತೇವೆ ಎಂಬ ಸ್ಪಷ್ಟ ಉತ್ತರ ನೀಡಬೇಕು. ಇವೆೆಲ್ಲವನ್ನೂ ನನಸಾಗಿಸುವಲ್ಲಿ ಎಡ ಮತ್ತು ಜಾತ್ಯತೀತ ಪಕ್ಷಗಳು, ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳ ಮೇಲೆ ದೊಡ್ಡ ಜವಾಬ್ದಾರಿಯಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News