ಜಿಡಿಪಿ ಕುಸಿತಕ್ಕೆ ಯಾರು ಕಾರಣ?

Update: 2017-09-05 19:04 GMT

ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಕಾಲಾವಧಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಕುಸಿತಕ್ಕೆ ಮುಖ್ಯ ಕಾರಣ ಏನು ಎಂಬ ಬಗ್ಗೆ ಆರ್ಥಿಕ ಹಾಗೂ ರಾಜಕೀಯ ವಲಯದಲ್ಲಿ ಜಿಜ್ಞಾಸೆ ನಡೆದಿದೆ. ಈ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಅಂದರೆ ಎಪ್ರಿಲ್-ಜೂನ್ ಕಾಲಾವಧಿಯಲ್ಲಿ ಆರ್ಥಿಕ ಅಭಿವೃದ್ಧಿ ದರ 5.7ಕ್ಕೆ ಇಳಿದಿದೆ. ಇದರ ಹಿಂದಿನ ತ್ರೈಮಾಸಿಕದಲ್ಲಿ ಅದು 6.1 ಇತ್ತು. ಅಂದರೆ ಆರು ತಿಂಗಳಿಂದ ನಮ್ಮ ಜಿಡಿಪಿ ದರ ಚೀನಾದ ಜಿಡಿಪಿ ದರಕ್ಕಿಂತ ಕಡಿಮೆ ಇದೆ. ನಮ್ಮ ಆರ್ಥಿಕ ಪ್ರಗತಿ ನಿಧಾನಗತಿಯಲ್ಲಿ ಇದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.

ಈ ಕುಸಿತದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರನೆ ಘೋಷಿಸಿದ ನೋಟು ರದ್ದತಿ ಕ್ರಮ ಹಾಗೂ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಕಾರಣ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.5.7ಕ್ಕೆ ಕುಸಿದಿದೆ ಎಂದು ಬೇರೆ ಯಾರೋ ಹೇಳುತ್ತಿಲ್ಲ. ರಿಸರ್ವ್ ಬ್ಯಾಂಕ್‌ನ ಅಧಿಕೃತ ಪ್ರಕಟನೆಯಿಂದ ತಿಳಿದುಬಂದಿದೆ. ಆದರೆ, ರಿಸರ್ವ್ ಬ್ಯಾಂಕ್ ನೀಡಿದ ಅಂಕಿಅಂಶಗಳ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ. ರಿಸರ್ವ್ ಬ್ಯಾಂಕ್ 5.7 ಎಂದು ಹೇಳಿದ್ದರೂ ವಾಸ್ತವಿಕವಾಗಿ ಜಿಡಿಪಿ 3.7ಕ್ಕೆ ಕುಸಿದಿದೆ ಎಂದು ಸಂಸತ್ ಸದಸ್ಯ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದಿಢೀರನೆ 1000 ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಮೂಲಕ ದೇಶದ ಆರ್ಥಿಕತೆ ಯನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದರು ಎಂದು ಆರ್ಥಿಕ ತಜ್ಞರು ಟೀಕಿಸುತ್ತಿದ್ದಾರೆ. ಜಿಡಿಪಿಯ ನಿಜವಾದ ಕುಸಿತವನ್ನು ಮುಚ್ಚಿಡಲು ಹೊಸ ಮಾನದಂಡದ ಮೂಲಕ ಲೆಕ್ಕ ಹಾಕುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಹಳೆಯ ಮಾನದಂಡದ ಪ್ರಕಾರ ಲೆಕ್ಕ ಹಾಕಿದರೆ ಈಗಿನ ಜಿಡಿಪಿ ದರ ಶೇ.3.7 ಎಂದು ಸ್ಪಷ್ಟವಾಗುತ್ತದೆ ಎಂದು ಮೊಯ್ಲಿ ಹೇಳಿದ್ದಾರೆ.

ವೀರಪ್ಪ ಮೊಯ್ಲಿ ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರು. 1000 ಹಾಗೂ 500 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಕುರಿತು ಆರಂಭದಿಂದಲೂ ಈ ಸಮಿತಿ ಪರಿಶೀಲಿಸುತ್ತಿದೆ. ಈ ಸಮಿತಿಯ ಎದುರು ವಿಚಾರಣೆಗೆ ಹಾಜರಾಗಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ಆರಂಭದಲ್ಲೇ ಸರಿಯಾದ ಉತ್ತರ ನೀಡಲು ಹಿಂದೇಟು ಹಾಕಿದ್ದರು. ಅಂತಲೇ ಮೊಯ್ಲಿ ಅವರಿಗೆ ಈ ಅಂಕಿಅಂಶಗಳ ಬಗ್ಗೆ ಸಂದೇಹ ಉಂಟಾಗಿದೆ. ಹಿಂದಿನ ಯುಪಿಎ ಸರಕಾರ ಸೇರಿದಂತೆ ಹಿಂದೆಂದೂ ದೇಶದ ಜಿಡಿಪಿ ಇಷ್ಟು ಕೆಳಕ್ಕೆ ಕುಸಿದಿರಲಿಲ್ಲ. ಕಪ್ಪು ಹಣವನ್ನು ಹೊರಗೆ ತೆಗೆಯಲು, ಭ್ರಷ್ಟಾಚಾರವನ್ನು ನಿಯಂತ್ರಿಸಲು, ಭಯೋತ್ಪಾದನೆಗೆ ಹಣ ಪೂರೈಕೆಯಾಗುವುದಕ್ಕೆ ಕಡಿವಾಣ ಹಾಕಲು, ನಕಲಿ ನೋಟುಗಳ ಹಾವಳಿ ತಡೆಯಲು 1000 ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವುದು ಅನಿವಾರ್ಯವಾಯಿತೆಂದು ಮೋದಿ ಸರಕಾರ ಸಮರ್ಥಿಸುತ್ತಿದೆ.

ಆದರೆ, ಒಮ್ಮಿಂದೊಮ್ಮೆಲೇ ನೋಟು ರದ್ದತಿ ಮಾಡಿದ್ದರಿಂದ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ನೂಕು ನುಗ್ಗಲು ಉಂಟಾಗಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾದರು. ಇದಕ್ಕಿಂತ ಹೆಚ್ಚಿನ ಯಾವ ಸಾಧನೆಯೂ ಆಗಿಲ್ಲ. ನಿರೀಕ್ಷಿಸಿದ ಪ್ರಮಾಣದಲ್ಲಿ ಕಪ್ಪು ಹಣವೂ ಹೊರಗೆ ಬರಲಿಲ್ಲ. ನೋಟು ರದ್ದತಿ ಆರ್ಥಿಕ ಪ್ರಗತಿಗೆ ಪೆಟ್ಟು ನೀಡಿದ್ದು ನಿಜ. ಜಿಎಸ್‌ಟಿಯಂದಲು ಕೂಡಾ ಹಿನ್ನಡೆ ಉಂಟಾಗಿದೆ. ಆದರೆ, ಜಿಡಿಪಿ ಕುಸಿತಕ್ಕೆ ಇದೊಂದೇ ಕಾರಣವಲ್ಲ ಎಂಬುದು ದೇಶದ ಹೆಸರಾಂತ ಅರ್ಥಶಾಸ್ತ್ರಜ್ಞರಾದ ಪ್ರಭಾತ್ ಪಟ್ನಾಯಕ್ ಅವರ ಅಭಿಪ್ರಾಯ.

ನಮ್ಮ ದೇಶ 90ರ ದಶಕದಲ್ಲಿ ಒಪ್ಪಿಕೊಂಡ ನವಉದಾರವಾದಿ ಆರ್ಥಿಕತೆ ದೇಶವನ್ನು ಇಂತಹ ಬಿಕ್ಕಟ್ಟಿನ ಸುಲಿಗೆ ನೂಕಿದೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ನವಉದಾರವಾದಿ ಆರ್ಥಿಕತೆಯನ್ನು ಒಪ್ಪಿಕೊಂಡ ಎಲ್ಲ ದೇಶಗಳಲ್ಲೂ ಇಂತಹ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಈ ಬಿಕ್ಕಟ್ಟಿಗೆ ಪರ್ಯಾಯವಾದ ನೀತಿ ಕಾರ್ಯಕ್ರಮಗಳು ಮೋದಿ ಸರಕಾರದ ಬಳಿ ಇಲ್ಲ. ಜಾಗತೀಕ ಹಣಕಾಸು ಬಂಡವಾಳಕ್ಕೆ ನಿಷ್ಠವಾಗಿರುವ ಈ ಸರಕಾರ ಇನ್ನಷ್ಟು ಉಗ್ರವಾದ ನವಉದಾರವಾದಿ ನೀತಿಯನ್ನು ಅನುಸರಿಸುತ್ತಾ ಪರಿಹಾರವನ್ನು ಹುಡುಕಲು ಹೊರಟಿದೆ. ಸರಕಾರದ ಕ್ರಮವನ್ನು ಸಮರ್ಥಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಜನರ ಬಳಿ ಹಣದ ಮೂಲ ಯಾವುದು ಎಂಬುದನ್ನು ತಿಳಿಯುವ ಸರಕಾರದ ಉದ್ದೇಶ ಈಡೇರಿದೆ ಎಂದು ಹೇಳುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸಿದವರ ಸಂಖ್ಯೆಯಲ್ಲಿ ಶೇ.25ರಷ್ಟು ಏರಿಕೆಯಾಗಿದೆ.

ಜುಲೈ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ. ನಗದು ರಹಿತ ವಹಿವಾಟಿನ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಅವರು ವಿವರಣೆ ಕೊಟ್ಟಿದ್ದಾರೆ. ಸರಕಾರದ ಬಳಿ ಈಗ ಪ್ರತೀ ವ್ಯಕ್ತಿಯ ಹಣದ ಮಾಹಿತಿ ಇದೆ. ಅವರ ಘೋಷಿತ ಆದಾಯಕ್ಕೆ ತಾಳೆ ಹಾಕಲು ಅದು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. 18 ಲಕ್ಷ ಖಾತೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. 3 ಲಕ್ಷ ನೋಂದಾಯಿತ ಕಂಪೆನಿಗಳ ಮೇಲೆ ಕಣ್ಗಾವಲು ಇಡಲಾಗಿದೆ. ಕಪ್ಪು ಹಣದ ಸೃಷ್ಟಿ ಮತ್ತು ಹಣಕಾಸು ವಹಿವಾಟಿನಲ್ಲಿ ತೊಡಗಿಕೊಂಡಿದ್ದ 36,000 ಕಂಪೆನಿಗಳನ್ನು ಗುರುತಿಸಲಾಗಿದೆ.

ನೋಟು ರದ್ದತಿಯಿಂದ ಅಲ್ಪಾವಧಿ ಹಿನ್ನಡೆ ಆಗಿದ್ದು ನಿಜ. ಆದರೆ, ಅದರಿಂದ ಈಗ ಹೊರಬಂದಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ. ಆದರೆ, ಜಿಡಿಪಿ ಅಭಿವೃದ್ಧಿ ದರ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆೆ ಯಾಕೆ ಇಳಿದಿದೆ? ಉದ್ಯೋಗ ಸೃಷ್ಟಿಗೆ ಕಾರ್ಯಕ್ರಮ ರೂಪಿಸಲು ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಎಂಬುದಕ್ಕೆ ಸಚಿವರ ಬಳಿ ಉತ್ತರವಿಲ್ಲ. ಕೃಷಿಯೇತರ ಕ್ಷೇತ್ರಗಳಲ್ಲಿ ಉತ್ಪನ್ನಗಳಿಗೆ ಸಿಗುವ ಬೇಡಿಕೆಯ ಆಧಾರದ ಮೇಲೆ ಜಿಡಿಪಿ ಪ್ರಗತಿ ಅವಲಂಬಿಸಿರುತ್ತದೆ. ಇಲ್ಲಿ ಬೇಡಿಕೆಯೂ ಸಹ ಕ್ಷೇತ್ರಗಳಲ್ಲಿ ಆಗುವ ಉತ್ಪಾದನೆಯ ಪ್ರಮಾಣದ ಮೇಲೆ ನಿಧರ್ರಿತವಾಗುತ್ತದೆ. ಇದು ಈ ಕ್ಷೇತ್ರದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ತನ್ನಿಂದ ತಾನೇ ಸ್ವಾಯತ್ತ ಬೇಡಿಕೆಗಳನ್ನು ಸೃಷ್ಟಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ಪ್ರಗತಿಯ ಕುಸಿತವನ್ನು ತಡೆಯಲು ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ಸರಕಾರದಿಂದ ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸವುದು ಸಹಜವಾಗಿದೆ.

ಆದರೆ, ಮೋದಿ ಸರಕಾರದ ಕಾಲಾವಧಿಯಲ್ಲಿ ಒಟ್ಟಾರೆ ಸರಕಾರಿ ಹೂಡಿಕೆ ಅಲ್ಪವಾಗಿದೆ. ಕೇಂದ್ರ ಸರಕಾರ ಆರ್ಥಿಕತೆಗೆ ಉತ್ತೇಜನ ನೀಡುವ ಯಾವ ಕಾರ್ಯಕ್ರಮವನ್ನೂ ರೂಪಿಸಿಲ್ಲ. ಅದು ಅನುಸರಿಸುತ್ತಿರುವ ನೀತಿಯಿಂದ ಜಿಡಿಪಿ ಕುಸಿತದ ಪ್ರಮಾಣ ಹೆಚ್ಚಾಗಿದೆ. ಒಟ್ಟಿನಲ್ಲಿ ನವ ಉದಾರವಾದ ನೀತಿಯಿಂದ ಈ ಬಿಕ್ಕಟ್ಟು ಉಂಟಾಗಿದೆ. ಮೋದಿ ಸರಕಾರ ಈ ಬಿಕ್ಕಟ್ಟನ್ನು ಹೊಸ ಧೋರಣೆಗಳ ಮೂಲಕ ಎದುರಿಸಲು ಸಿದ್ಧವಿಲ್ಲ. ನವ ಉದಾರವಾದಿ ನೀತಿಗೆ ಅದು ಈಗಲೂ ಬದ್ಧವಾಗಿದೆ. ಅದರ ಜೊತೆಗೆ ಆಗಾಗ ನೋಟು ರದ್ದತಿಯಂತಹ ಅವಿವೇಕದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ವೈಚಾರಿಕ ಸಾಮರ್ಥ್ಯ ಈ ಸರಕಾರಕ್ಕೆ ಇಲ್ಲ. ಏಕೆಂದರೆ, ಆಸ್ಥಾನ ಭಟ್ಟಂಗಿಗಳ ಮೂಲಕ ಕೇವಲ ಹೊಗಳಿಕೆಯನ್ನು ಬಯಸುವ ಈ ಸರಕಾರದ ನಾಯಕನಿಗೆ ಹೊಸ ದಾರಿಯಲ್ಲಿ ಸಾಗುವ ವೈಚಾರಿಕ ದೃಷ್ಟಿಕೋನವಾಗಲಿ, ಬದ್ಧತೆಯಾಗಲಿ ಇಲ್ಲ.

ಮೂರನೆ ಜಗತ್ತಿನ ದೇಶಗಳಲ್ಲಿ ಇಂತಹ ಕೈಗೊಂಬೆಯ ಸರಕಾರಗಳು ಇರುವುದು ಜಾಗತಿಕ ಹಣಕಾಸು ಬಂಡವಾಳಕ್ಕೆ ಬೇಕಾಗಿದೆ. ಸದಾ ತನ್ನನ್ನೇ ಈ ದೇಶ ಅವಲಂಬಿಸಿರಬೇಕೆಂದು ಅದು ಬಯಸುತ್ತದೆ. ಅಂತಲೇ ಜಿಡಿಪಿ ಕುಸಿತ ತಡೆಯಲು ಈ ಸರಕಾರಕ್ಕೆ ಸಾಧ್ಯವಿಲ್ಲ. ನೋಟು ರದ್ದತಿಯ ಬಗ್ಗೆ ಸರಕಾರ ಏನೇ ಹೇಳಲಿ ನಮ್ಮ ದೇಶದ ಇನ್ನೊಂದು ವಿಶೇಷ ಏನೆಂದರೆ ಈ ದೇಶದ ಗ್ರಾಮೀಣ ಅರ್ಥ ವ್ಯವಸ್ಥೆ ನಗದು ಹಣದ ಚಲಾವಣೆಯ ಮೇಲೆ ನಿಂತಿದೆ. ಹೀಗಾಗಿ ನೋಟು ರದ್ಧತಿ ಕ್ರಮ ಗ್ರಾಮೀಣ ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಡೀ ದೇಶ ನೋಟು ರದ್ದತಿ ನಂತರ ಸಾಕಷ್ಟು ಸಂಕಟ ಅನುಭವಿಸಿದರೂ ಕೂಡಾ ಅದಕ್ಕೆ ತಕ್ಕ ಪ್ರತಿಫಲ ಜನರಿಗೆ ಈವರೆಗೆ ಸಿಕ್ಕಿಲ್ಲ. ಈ ಪ್ರತಿಫಲ ಜನರಿಗೆ ಸಿಕ್ಕಿದ್ದರೆ ಜಿಡಿಪಿ ದರ ಇಷ್ಟು ಕೆಳಮಟ್ಟಕ್ಕೆ ಕುಸಿಯುತ್ತಿರಲಿಲ್ಲ. ಉದ್ಯೋಗ ಸೃಷ್ಟಿ ಕುಂಠಿತವಾಗುತ್ತಿರಲಿಲ್ಲ. ಅಂತಲೇ ನೋಟು ಅಮಾನ್ಯದ ಕ್ರಮ ನಿರರ್ಥಕ ಕಸರತ್ತು ಎಂದು ಈಗ ವಿಶ್ಲೇಷಣೆ ನಡೆದಿದೆ. ಹಣಕಾಸು ಸಚಿವರು ಏನೇ ಹೇಳಲಿ ತನ್ನ ಕ್ರಮಕ್ಕೆ ಪೂರಕವಾದ ಅಂಕಿಅಂಶಗಳನ್ನು ಜನರ ಮುಂದಿಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಧಾನಿ ಮೋದಿ ಸಚಿವ ಸಂಪುಟ ಪುನಾರಚನೆಯಂತಹ ಕಸರತ್ತನ್ನು ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News