ಗೌರಿ ಲಂಕೇಶ್ ಹತ್ಯೆಯಲ್ಲಿ ಕಾನೂನು ವೈಫಲ್ಯದ ಪಾಲೆಷ್ಟು?

Update: 2017-09-06 18:40 GMT

ಗೌರಿ ಲಂಕೇಶರನ್ನು ಕೊಂದವರು ಧೈರ್ಯವಂತರಂತೂ ಅಲ್ಲವೇ ಅಲ್ಲ. ಜೊತೆಗೆ, ಶಕ್ತಿವಂತರೂ, ವಿಚಾರವಂತರೂ ಅಲ್ಲ. ಒಬ್ಬ ನಿಶ್ಶಸ್ತ್ರಳಾಗಿರುವ ಒಂಟಿ ಹೆಣ್ಣುಮಗಳ ಕಡೆಗೆ ಏಳು ಬಾರಿ ಗುಂಡೆಸೆಯಬೇಕಾದರೆ ಅವರೆಂತಹ ರಣ ಹೇಡಿಗಳು ಮತ್ತು ನೀಚರಿರಬೇಕು ಎನ್ನುವುದನ್ನು ನಾವು ಊಹಿಸಿಕೊಳ್ಳಬಹುದಾಗಿದೆ. ಮಹಾತ್ಮಾ ಗಾಂಧೀಜಿಯನ್ನೂ ಇದೇ ರೀತಿಯಲ್ಲಿ ಕೊಂದು ಹಾಕಲಾಯಿತು. ಅವರೋ ಅರೆಬಟ್ಟೆ ತೊಟ್ಟಿದ್ದ ಫಕೀರ. ಬಾಯಲ್ಲಿ ‘ರಾಮ ನಾಮ’ ಹೊರತಾದ ಯಾವ ಅಸ್ತ್ರವೂ ಅವರ ಬಳಿ ಇರಲಿಲ್ಲ. ಅತೀ ವೃದ್ಧ ಬೇರೆ. ಅಂತಹ ವ್ಯಕ್ತಿಯನ್ನೇ ವಿಚಾರಗಳ ಮೂಲಕ ಎದುರಿಸಲಾಗದೆ ಗುಂಡಿಕ್ಕಿ ಕೊಂದ ಗೋಡ್ಸೆಯ ವಂಶಜರು ಭಾರತಾದ್ಯಂತ ಅದೇ ಹೇಡಿ ನಡೆಯಲ್ಲಿ ಹಿಂಸಾಕೃತ್ಯ ಸರಣಿಯನ್ನು ಮುಂದುವರಿಸಿದ್ದಾರೆ.

ಜಗತ್ತಿನ ಯಾವುದಾದರೂ ಉಗ್ರಗಾಮಿ ಸಂಘಟನೆಗಳು ಕ್ರೂರ ಕೃತ್ಯ ಎಸಗಿ ಅದನ್ನು ತಾವೇ ಮಾಡಿದ್ದೇವೆ ಎಂದು ಘೋಷಿಸಿಕೊಳ್ಳುತ್ತವೆ. ಆದರೆ ಭಾರತದಲ್ಲಿ ಹುಟ್ಟಿರುವ ಉಗ್ರವಾದಿ ವಿಷ ಸರ್ಪಗಳು ನಯವಂಚನೆಯಲ್ಲಿ ಅದಕ್ಕಿಂತಲೂ ಭೀಕರ. ಇವರು ದೇಶಪ್ರೇಮಿ, ಸಂಸ್ಕೃತಿ, ಧರ್ಮಗಳ ಮುಖವಾಡಗಳಲ್ಲಿ ಬಚ್ಚಿಟ್ಟುಕೊಂಡಿರುವವರು. ಇವರು ಹೀನ ಕೃತ್ಯವನ್ನು ಗುಟ್ಟಾಗಿ ಎಸಗುತ್ತಾರೆಯೇ ಹೊರತು, ಅದನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಈವರೆಗೆ ಮಾಡಿಲ್ಲ. ಮಕ್ಕಾ ಮಸೀದಿ ಸ್ಫೋಟ, ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳನ್ನು ನಡೆಸಿ, ಅದನ್ನು ಇತರರ ತಲೆಗೆ ಕಟ್ಟಿ ಬಚ್ಚಿಟ್ಟುಕೊಂಡ ವಿಷದ ಹಾವುಗಳಿರುವ ಹುತ್ತಗಳಿಗೆ ಹೊಗೆ ಹಾಕಿ ಹೊರತಂದುದು ಹೇಮಂತ್ ಕರ್ಕರೆ. ಇದಾದ ಬಳಿಕ ಆ ಪೊಲೀಸ್ ಅಧಿಕಾರಿಗಳ ತಂಡವೇ ನಿಗೂಢವಾಗಿ ಹತ್ಯೆಗೀಡಾಯಿತು ಎನ್ನುವುದು ಇತಿಹಾಸ. ಇಷ್ಟೇ ಅಲ್ಲ, ಪನ್ಸಾರೆ, ದಾಭೋಲ್ಕರ್‌ರಂತಹ ವಿಚಾರವಂತ ಹಿರಿಯರನ್ನು ಕೊಂದು ಹಾಕಿ ತಲೆಮರೆಸಿಕೊಂಡಿರುವುದೂ ಇದೇ ಉಗ್ರರ ತಂಡ.

ವೈಚಾರಿಕವಾಗಿ ಆಲೋಚಿಸುವವರನ್ನು, ವೌಢ್ಯ, ಅನಾಗರಿಕತೆಯ ವಿರುದ್ಧ ಧ್ವನಿಯೆತ್ತುವವರನ್ನು ಕಂಡಾಕ್ಷಣ ಥರಗುಡುವ ಇವರು, ಕದ್ದು ಮುಚ್ಚಿ ಅವರನ್ನು ಕೊಂದು ತಮ್ಮ ಸಂಸ್ಕೃತಿಯನ್ನು ಸಾಬೀತು ಪಡಿಸುತ್ತಾ ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಅದೇ ಹೇಡಿಗಳು ಕಲಬುರ್ಗಿಯನ್ನು ಕೊಂದು ಹಾಕಿದರು. ಎರಡು ವರ್ಷಗಳಾದರೂ ಕಲಬುರ್ಗಿಯ ಸಾವಿನ ಒಗಟನ್ನು ಬಿಡಿಸುವುದಕ್ಕೆ ಪೊಲೀಸರಿಗಾಗಲಿ, ತನಿಖಾ ಸಂಸ್ಥೆಗಳಿಗಾಗಲಿ ಸಾಧ್ಯವಾಗಲಿಲ್ಲ. ಪನ್ಸಾರೆ, ದಾಭೋಲ್ಕರ್ ಹತ್ಯೆಗಳ ತನಿಖೆ ಗಂಭೀರವಾಗಿ ನಡೆದು, ಆರೋಪಿಗಳ ಬಂಧನವಾಗಿ ಅವರಿಗೆ ಶೀಘ್ರ ಶಿಕ್ಷೆಯಾಗಿದ್ದರೆ ಕಲಬುರ್ಗಿಯವರ ಕೊಲೆ ನಡೆಯುತ್ತಿರಲಿಲ್ಲ. ಕಲಬುರ್ಗಿಯ ಕೊಲೆ ಆರೋಪಿಗಳ ಪತ್ತೆಯಲ್ಲಿ ಪೊಲೀಸರು ಯಶಸ್ವಿಯಾಗಿದ್ದಿದ್ದರೆ ಗೌರಿ ಲಂಕೇಶರು ಇಂದು ಬದುಕಿ ಉಳಿಯುತ್ತಿದ್ದರು.

ಈ ಹಿಂದಿನ ಕೊಲೆಗಳಲ್ಲಿ ಆರೋಪಿಗಳು ಕಾನೂನಿನ ಕೈಯಿಂದ ತಪ್ಪಿಸಿಕೊಂಡಿರುವುದೇ, ಹೊಸದಾಗಿ ವಿಚಾರವಾದಿಗಳ ಕೊಲೆಗಳನ್ನು ಮಾಡುವುದಕ್ಕೆ ಅವರಿಗೆ ಧೈರ್ಯ ಕೊಟ್ಟಿರುವುದು. ಆದುದರಿಂದ, ಗೌರಿ ಲಂಕೇಶರ ಹತ್ಯೆಗೆ ಕೇವಲ ಗೋಡ್ಸೆ ವಂಶಸ್ಥರನ್ನು ಹೊಣೆ ಮಾಡಿ ನಾವು ಸುಮ್ಮನಾಗುವಂತಿಲ್ಲ. ಕಾನೂನು ವ್ಯವಸ್ಥೆಯ ದೌರ್ಬಲ್ಯಗಳೇ ಇಂತಹ ಹೇಡಿ ಉಗ್ರರನ್ನು ‘ಶೂರರು, ವೀರರು’ ಆಗಿ ಪರಿವರ್ತಿಸುತ್ತಿದೆ. ಕಾನೂನು ವ್ಯವಸ್ಥೆ ತನ್ನ ಜವಾಬ್ದಾರಿಯನ್ನು ಮರೆತಾಗ ಇಂತಹ ಸಮಾಜ ಘಾತುಕ ಶಕ್ತಿಗಳು ವಿಜೃಂಭಿಸ ತೊಡಗುತ್ತವೆ.. ಗೌರಿಯ ಹತ್ಯೆಯಲ್ಲೂ ನಡೆದಿರುವುದು ಇದೇ ಆಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕಲಬುರ್ಗಿಯ ಹಂತಕರ ಪತ್ತೆಯಾಗಲಿ ಎನ್ನುವ ಚಳವಳಿ ರಾಜ್ಯಾದ್ಯಂತ ನಡೆದಿತ್ತು. ಅದರಲ್ಲಿ ಗೌರಿ ಲಂಕೇಶ್ ಅವರು ಮುಂಚೂಣಿಯಲ್ಲಿದ್ದರು.

ವಿಪರ್ಯಾಸವೆಂದರೆ, ಕಲಬುರ್ಗಿ ಕೊಲೆಗಾರರ ಪತ್ತೆಗೆ ಒತ್ತಾಯಿಸಿದ ಗೌರಿ ಲಂಕೇಶರೇ ಇದೀಗ ಕೊಲೆಯಾಗಿದ್ದಾರೆ. ಹಂತಕರು ಈ ಮೂಲಕ ವ್ಯವಸ್ಥೆಯನ್ನು ಅಣಕಿಸಿದ್ದಾರೆ ಮತ್ತು ಅದಕ್ಕೆ ಸವಾಲು ಹಾಕಿದ್ದಾರೆ. ಈ ಸವಾಲನ್ನು ಇನ್ನಾದರೂ ಸ್ವೀಕರಿಸುವ ಹೊಣೆ ನಮ್ಮ ಕಾನೂನು ವ್ಯವಸ್ಥೆಯದ್ದಾಗಿದೆ. ಕಲಬುರ್ಗಿಯವರ ಹತ್ಯೆ ನಡೆದಾಗ, ಅದು ಖಾಸಗಿ ವಿಚಾರಕ್ಕೆ ಸಂಬಂಧಿಸಿ ನಡೆಸಿದ ಹತ್ಯೆ ಎಂದು ತನಿಖೆಯ ದಾರಿ ತಪ್ಪಿಸಲು ಕೆಲವರು ಶ್ರಮಿಸಿದ್ದನ್ನು ನೆನಪಿಸಿಕೊಳ್ಳಬೇಕಾಗಿದೆ. ಇದೀಗ ಅದೇ ಪ್ರಯತ್ನ ಗೌರಿ ಹತ್ಯೆಗೆ ಸಂಬಂಧಿಸಿಯೂ ನಡೆಯುತ್ತಿದೆ. ಆದರೆ ಒಂದನ್ನು ನಾವು ಗಮನಿಸಬೇಕು. ಗೌರಿಯವರ ಹತ್ಯೆಯಿಂದ ಇಂದು ನಿಜಕ್ಕೂ ಸಂಭ್ರಮಿಸುತ್ತಿರುವವರು ಯಾರು? ಅನಂತಮೂರ್ತಿಯವರು ತೀರಿ ಹೋದಾಗ ಪಟಾಕಿ ಸಿಡಿಸಿದವರು, ಕಲಬುರ್ಗಿಯ ಕೊಲೆಯಾದಾಗ ಸಂತೋಷಪಟ್ಟವರೇ ಇದೀಗ ಗೌರಿಯವರ ಹತ್ಯೆಗೂ ಕುಣಿದಾಡುತ್ತಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಅಸಹ್ಯ, ವಿಕೃತ ಬರಹಗಳನ್ನು ಬರೆದು ಖುಷಿ ಪಡುತ್ತಿದ್ದಾರೆ. ಗೌರಿಯ ಹತ್ಯೆಯ ಅಗತ್ಯ ಯಾರಿಗಿತ್ತು ಎನ್ನುವುದನ್ನು ನಾವು ಈ ಬರಹಗಳಿಂದಲೇ ಸ್ಪಷ್ಟ ಮಾಡಿಕೊಳ್ಳಬಹುದು. ಕಲಬುರ್ಗಿ ಕೊಲೆಯಾದಾಗ ಕರಾವಳಿಯ ಓರ್ವ ಸಂಘಪರಿವಾರದ ಯುವಕ ಸಂಭ್ರಮಪಟ್ಟಿದ್ದೂ ಅಲ್ಲದೆ ‘ಇನ್ನಷ್ಟು ಪ್ರಗತಿಪರರ ಕೊಲೆ ನಡೆಸುವ’ ಬೆದರಿಕೆಯನ್ನು ಹಾಕಿದ್ದ. ಆತನನ್ನು ಬಂಧಿಸಲಾಯಿತಾದರೂ, 24 ಗಂಟೆಯೊಳಗೆ ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಈ ಬಿಡುಗಡೆ ಮುಂದೆ ಎಂತಹ ಅನಾಹುತವನ್ನು ಸೃಷ್ಟಿಸಿತು ಎನ್ನುವುದನ್ನು ನಾವು ಕಂಡಿದ್ದೇವೆ. ಅದೇ ಆರೋಪಿ, ಮುಂದೆ ಕೋಮುಗಲಭೆ ನಡೆಸುವುದಕ್ಕಾಗಿ ಅಮಾಯಕನೊಬ್ಬನನ್ನು ಇರಿದು ಕೊಂದ. ಮುಸ್ಲಿಮನೆಂದು ತಿಳಿದು ಹರೀಶ್ ಪೂಜಾರಿ ಎನ್ನುವ ಯುವಕನನ್ನು ಕೊಂದು ಹಾಕಿದ. ಈ ಹಿಂದೆಯೇ ಈತ ಕೆಲವು ದಿನ ಜೈಲಿನಲ್ಲಿ ಕೊಳೆತಿದ್ದರೆ ಇಂತಹದೊಂದು ಕೃತ್ಯವನ್ನು ಎಸಗುತ್ತಿರಲಿಲ್ಲವೇನೋ? ಕಾನೂನಿನ ದೌರ್ಬಲ್ಯ ಅವನಿಗೆ ಇನ್ನಷ್ಟು ಕುಕೃತ್ಯಗಳನ್ನು ಎಸಗಲು ಧೈರ್ಯ ತಂದುಕೊಟ್ಟಿತು. ಇದೀಗ ಗೌರಿಯ ಹತ್ಯೆಯ ವಿಷಯದಲ್ಲೂ ಸಾಮಾಜಿಕ ತಾಣಗಳಲ್ಲಿ ಕೆಲವು ಕೇಸರಿ ಉಗ್ರರು ವಿಕೃತ ಕೇಕೆಗಳನ್ನು ಹಾಕುತ್ತಿದ್ದಾರೆ.

ಆಳದಲ್ಲಿ ಇವರದು ಕೊಲೆಗಾರರ ಮನಸ್ಸೇ ಆಗಿದೆ. ಅಥವಾ ಇವರಲ್ಲೇ ಕೊಲೆಯೊಂದಿಗೆ ಸಂಬಂಧ ಹೊಂದಿದವರು ಇದ್ದರೂ ಇರಬಹುದು. ಆದುದರಿಂದ ಗೌರಿಯವರ ಸಾವಿನ ಕುರಿತಂತೆ ವಿಕೃತ ಹೇಳಿಕೆಗಳನ್ನು ಹಾಕಿದ ಪ್ರತಿಯೊಬ್ಬರನ್ನು ಗುರುತಿಸಿ ಪೊಲೀಸರು ಸ್ವಯಂ ಕೇಸು ದಾಖಲಿಸಿ ಜೈಲಿಗೆ ತಳ್ಳುವ ಅಗತ್ಯವಿದೆ. ಒಂದು ವೇಳೆ ಇವರನ್ನು ನಿರ್ಲಕ್ಷಿಸಿದರೆ, ಇಂದು ಕೊಲೆಯನ್ನು ಬೆಂಬಲಿಸಿದವರು ನಾಳೆ ತಾವೇ ಕೊಲೆಗಾರರಾಗಿ ಪರಿವರ್ತನೆಯಾಗಬಹುದು. ಆದುದರಿಂದ ಪೊಲೀಸರು ಮೊತ್ತ ಮೊದಲು ಸಾಮಾಜಿಕ ತಾಣಗಳಲ್ಲಿ ಬೇರೆ ಬೇರೆ ವೇಷಗಳಲ್ಲಿ ಓಡಾಡುತ್ತಿರುವ ಕೊಲೆಗಾರ ಮನಸ್ಥಿತಿಯನ್ನು ಹೊಂದಿರುವ ವಿಕೃತರನ್ನು ಗುರಿಸಬೇಕು. ಇದೇ ಸಂದರ್ಭದಲ್ಲಿ ಗೌರಿಯ ಹತ್ಯೆ ಕಲಬುರ್ಗಿಯ ತನಿಖೆಯ ಹಾದಿಯನ್ನು ಹಿಡಿಯಬಾರದು. ಗೌರಿಯವರ ಹತ್ಯೆ ನಡೆದಿರುವುದು ಬೆಂಗಳೂರಿನಲ್ಲಿ. ನಗರಗಳಾದ್ಯಂತ ಸಿಸಿಟಿವಿಗಳಿರುವುದರಿಂದ ಇದರ ಆಧಾರದಲ್ಲಿ ಸುಳಿವುಗಳನ್ನು ಪಡೆಯುವುದು ಸುಲಭ.

ರಾಜ್ಯದಲ್ಲಿ ಪ್ರಗತಿಪರ ಮುಖ್ಯಮಂತ್ರಿಯೆಂದು ಗುರುತಿಸಿಕೊಂಡ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರವಿದೆ. ಒಂದು ವೇಳೆ ಈ ಸರಕಾರವೇ ಕೊಲೆಗಾರರನ್ನು ಹಿಡಿಯಲು ವಿಫಲವಾದರೆ, ಇತರ ಸರಕಾರಗಳ ಅಡಿಯಲ್ಲಿ ನ್ಯಾಯ ಸಿಗುತ್ತದೆ ಎಂದು ಭಾವಿಸುವುದು ಕಷ್ಟ. ಒಂದಂತೂ ಸತ್ಯ. ಕೊಲೆಗಾರರ ಉದ್ದೇಶ ಒಬ್ಬ ವ್ಯಕ್ತಿಯನ್ನು ಕೊಲ್ಲುವುದಲ್ಲ. ವಿಚಾರಗಳನ್ನು ಕೊಲ್ಲುವುದು. ಈ ದೇಶದಲ್ಲಿ ಪ್ರಗತಿ ಪರವಾಗಿ, ಬಡವರ ಪರವಾಗಿ ಮಾತನಾಡುವ, ವೈಜ್ಞಾನಿಕವಾಗಿ ಚಿಂತಿಸುವ, ವಿಶ್ಲೇಷಿಸುವ, ದೇಶದೊಳಗೆ ಬೆಳೆಯುತ್ತಿರುವ ಮೂಲಭೂತವಾದಿ, ಕೋಮುವಾದಿ ಉಗ್ರರ ವಿರುದ್ಧ ಧ್ವನಿಯೆತ್ತುವ ಮನಸ್ಸುಗಳನ್ನು ಕೊಂದು ಹಾಕಿ ದೇಶವನ್ನು ಶತಮಾನಗಳ ಹಿಂದಕ್ಕೆ ಕೊಂಡೊಯ್ಯುವ ಪ್ರಯತ್ನಗಳಾಗಿವೆ ಇವು. ಆದುದರಿಂದ ಕೊಲೆಗಾರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ, ಭವಿಷ್ಯದ ಭಾರತವನ್ನು ಉಳಿಸುವ ಹೊಣೆಗಾರಿಕೆ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News